ಬೆಳ್ತಂಗಡಿಯ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆಯಲ್ಲಿ ಬಹಿರಂಗವಾಗಿ ತೆಕ್ಕಾರಿನ ಮುಸ್ಲಿಮರ ಬಗ್ಗೆ ಅವಹೇಳನಕಾರಿ, ಮಾನಹಾನಿ ಪದಗಳನ್ನು ಬಳಸಿ ಕೋಮುಪ್ರಚೋದನಾಕಾರಿ ಭಾಷಣಕ್ಕೆ ಅವಕಾಶ ಮಾಡಿಕೊಟ್ಟಿರುವುದರ ವಿರುದ್ದ ಗ್ರಾಮದ ಮುಸ್ಲಿಮರು ದೇವಸ್ಥಾನದ ಆಡಳಿತ ಮಂಡಳಿಗೆ ತಮ್ಮ ನಿಲುವು ವ್ಯಕ್ತಪಡಿಸಲು ಕೋರಿ ಪತ್ರ ಬರೆದಿದ್ದಾರೆ.
ಕಳೆದ ಶನಿವಾರ (ಮೇ.3)ರಂದು ರಾತ್ರಿ 9.30ರ ಸಮಯದಲ್ಲಿ ಬ್ರಹ್ಮಕಲಶೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಊರಿನ ಮುಸ್ಲಿಮರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವ ಭಾಷಣ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ದೇವಸ್ಥಾನದ ಪರವಾಗಿ ಖುದ್ದಾಗಿ ಮಸೀದಿಗಳಿಗೆ ಬಂದು ಕಾರ್ಯಕ್ರಮಕ್ಕೆ ಬರುವಂತೆ ಆಮಂತ್ರಣ ನೀಡಲಾಗಿತ್ತು. ಆಮಂತ್ರಣ ಸ್ವೀಕರಿಸಿ, ತೆಕ್ಕಾರಿನ ಸೌಹಾರ್ಧತೆಯನ್ನು ಇನ್ನಷ್ಟು ಉತ್ತೇಜಿಸುವ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಗ್ರಾಮದ ಮುಸ್ಲಿಂ ಬಾಂಧವರು ಭಾಗವಹಿಸಿರುತ್ತೇವೆ. ಆದರೆ ಅದೇ ವೇದಿಕೆಯಲ್ಲಿ ಗ್ರಾಮದ ಮುಸ್ಲಿಮರ ಕುರಿತು ಅವಹೇಳನಕಾರಿ ಭಾಷಣ ಮಾಡಿರುವುದು ಮುಸ್ಲಿಂ ಸಮುದಾಯಕ್ಕೆ ನೋವುಂಟು ಮಾಡಿದೆ ಎಂದು ಮುಸ್ಲಿಂ ಮುಖಂಡರು ಆರೋಪಿಸಿದ್ದಾರೆ.
ಊರಿನ ಹಿಂದೂ-ಮುಸ್ಲಿಂ ಸಮುದಾಯಗಳು ಅಣ್ಣತಮ್ಮಂದಿರಂತೆ ಬಾಳಬೇಕಾಗಿದ್ದ ಸಾಮರಸ್ಯವನ್ನು ಹಾಳು ಮಾಡಲಾಗಿದೆ. ಬ್ರಹ್ಮಕಲಶೋತ್ಸವದ ಸಂದರ್ಭ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ವಾಹನ ಪಾರ್ಕಿಂಗ್, ಸಭಾ ವೇದಿಕೆಗೆ, ನೀರಿನ ವ್ಯವಸ್ಥೆಗೆ, ಅನ್ನದಾನದ ವ್ಯವಸ್ಥೆಗೆ ಮುಸ್ಲಿಮರು ತಮ್ಮ ಜಮೀನಿನಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಟ್ಯೂಬ್ ಲೈಟ್ ಹಾಗೂ ಡೀಸೆಲ್ ಕದ್ದ ಬಗ್ಗೆ ಸ್ಪಷ್ಟವಾದ ಸಾಕ್ಷಿ ಇಲ್ಲದೆ ಇಡೀ ಮುಸ್ಲಿಂ ಸಮುದಾಯದ ಮೇಲೆ ಗಂಭೀರ ಆರೋಪ ಹೊರಿಸಿದ್ದು, ಈ ಬಗ್ಗೆ ಗೋಪಾಲಕೃಷ್ಣ ಆಡಳಿತ ಮಂಡಳಿಯು ತಮ್ಮ ನಿಲುವು ಸ್ಪಷ್ಟಪಡಿಸುವಂತೆ ಒಕ್ಕೂಟ ಪತ್ರದ ಮೂಲಕ ಒತ್ತಾಯಿಸಿದೆ.
ಇದನ್ನೂ ಓದಿ: ಸೌಜನ್ಯ ಪ್ರಕರಣ | ಬೆಳ್ತಂಗಡಿಯಲ್ಲಿ 346 ಅಸಹಜ, ನಿಗೂಢ ಸಾವಾಗಿರುವ ಮಾಹಿತಿಯಿದೆ: ಚೇತನ್ ಅಹಿಂಸಾ