‘ರಾಜ್ಯದ ಅವಕಾಶ ವಂಚಿತ, ಶೋಷಿತ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ₹10 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಿಳಿಸಿದರು.
” ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅದಿವಾಸಿ ಅಲೆಮಾರಿ ಮತ್ತು ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಸಂವಿಧಾನ ಬದ್ಧವಾಗಿ ಅವಶ್ಯವಿರುವ ಸೌಲಭ್ಯ, ಸವಲತ್ತುಗಳನ್ನು ಒದಗಿಸಿ ಕಟ್ಟಕಡೆಯ ತಳ ಸಮುದಾಯಗಳಿಗೂ ತಲುಪಿಸಿ, ಪ್ರಗತಿ ಪಥದತ್ತ ಕೊಂಡೊಯ್ಯುವುದು ಸರ್ಕಾರದ ಉದ್ದೇಶ ಹಾಗೂ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಹಣ ಮೀಸಲಿಡಲಾಗಿದೆ “.
” ಪರಿಶಿಷ್ಟ ಜಾತಿಯ 51, ಪರಿಶಿಷ್ಟ ಪಂಗಡದ 23 ಮತ್ತು 25 ಅರಣ್ಯವಾಸಿಗಳು ಸೇರಿದಂತೆ ಒಟ್ಟು 99 ಅಲೆಮಾರಿ ಜನಾಂಗಗಳನ್ನು ಗುರುತಿಸಲಾಗಿದೆ. ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಿರುವ ಬಗ್ಗೆ ವಾಸ್ತವ ಸ್ಥಿತಿಗತಿ ಅರಿಯಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯ ಅಲೆಮಾರಿ ಸಮುದಾಯಗಳಿಗೆ 1 ಕೋಟಿ 49 ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಆದರೆ, ಚಾಮರಾಜನಗರ ಜಿಲ್ಲೆಯಿಂದ ಯಾವುದೇ ಯೋಜನೆ, ಕಾರ್ಯಕ್ರಮಗಳಿಗೆ ಪ್ರಸ್ತಾವನೆ ಸಲ್ಲಿಕೆಯಾಗದಿರುವುದು ವಿಷಾಧನೀಯ ಸಂಗತಿ ” ಎಂದರು.

‘ ಅಲೆಮಾರಿ, ಅರೆ ಅಲೆಮಾರಿಗಳಿಗೆ ಮೈಕ್ರೋ ಕ್ರೆಡಿಟ್ ಪ್ರೇರಣಾ ಸಾಲ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಉದ್ಯಮಶೀಲತಾ ಯೋಜನೆ, ಭೂ ಒಡೆತನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಬ್ಯಾಂಕ್‍ಗಳಲ್ಲಿ ಅಲೆಮಾರಿ ಜನರಿಗೆ ಸಾಲ ಸೌಲಭ್ಯ ನೀಡಲು ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಹೊರತುಪಡಿಸಿ ಉಳಿದ ಯಾವುದೇ ದಾಖಲೆಗಳಿಂದ ವಿನಾಯಿತಿ ನೀಡಲಾಗಿದೆ. ಶಿಕ್ಷಣ ಪ್ರತಿಯೊಬ್ಬರ ಹಕ್ಕು ಆಗಿದ್ದು, ಶೇ. 10 ರಷ್ಟು ಮೀಸಲಾತಿ ಕಲ್ಪಿಸಿದೆ. ಅಲೆಮಾರಿ ಜನರ ಮಕ್ಕಳಿಗೆ ವಸತಿ ಶಾಲೆಗಳು, ಕ್ರೈಸ್ ಶಾಲೆಗಳಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ಉಚಿತವಾಗಿ ಸೇರಿಸಲು ಅವಕಾಶವಿದೆ ‘ ಎಂದು ಹೇಳಿದರು.
ಅಲೆಮಾರಿ ಜನರಿಗೆ ಸಾಲ ಸೌಲಭ್ಯಗಳು ನಿಗದಿತ ಕಾಲಮಿತಿಯಲ್ಲಿ ಸಮರ್ಪಕವಾಗಿ ದೊರೆಯಬೇಕು. ಸಮುದಾಯಗಳಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಅರಿವಿನ ಕೊರತೆ ಇದೆ. ಈ ಬಗ್ಗೆ ಜಾಗೃತಿ ಶಿಬಿರ ಆಯೋಜಿಸಿ ಅರಿವು ಮೂಡಿಸುವುದು ಎಲ್ಲಾ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿ ಸಭೆಯಲ್ಲಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಭೂ ಒಡೆತನ ಯೋಜನೆಯಡಿ ನಿವೇಶನ, ಸ್ಮಶಾನ, ಜಮೀನು ಇಲ್ಲದ ಅಲೆಮಾರಿಗಳಿಗೆ ಸರ್ಕಾರಿ ಜಾಗ ಗುರುತಿಸಿ ಮಂಜೂರು ಮಾಡಬೇಕು. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿ ಜಮೀನು ಖರೀದಿಸಿ ನೀಡಬೇಕು. ಅಲೆಮಾರಿ ಪೋಷಕರು ಮಕ್ಕಳನ್ನು ವಸತಿ ಶಾಲೆಗಳಿಗೆ ದಾಖಲಿಸಲು ಆಸಕ್ತಿ ತೋರದಿರುವುದು ಕಂಡುಬಂದಿದೆ. ಪೋಷಕರನ್ನು ಗುರುತಿಸಿ, ಅಧಿಕಾರಿಗಳು ತಿಳಿ ಹೇಳಬೇಕು. ಅಂತಹ ಪೋಷಕರನ್ನು ವಿದ್ಯಾರ್ಥಿ ನಿಲಯಗಳಿಗೆ ಭೇಟಿ ಮಾಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ” ಅಲೆಮಾರಿ ಅರಣ್ಯ ವಾಸಿಗಳಿಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳನ್ನು ನೀಡುವ ಸಲುವಾಗಿ ಅರಣ್ಯ ಇಲಾಖೆ ಸಹಕಾರದೊಂದಿಗೆ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ನನ್ನ ಗುರುತು – ನನ್ನ ಅಭಿಯಾನದಡಿ ಆಧಾರ್ ಕಾರ್ಡ್ ಇಲ್ಲದವರಿಗೂ ಅದ್ಯತೆ ಮೇರೆಗೆ ಅವರ ಮನೆ ಬಾಗಿಲಿಗೆ ಆಧಾರ್ ಕಾರ್ಡ್ ತಲುಪಿಸಲಾಗುತ್ತಿದೆ. ಆದಿವಾಸಿ ಅಲೆಮಾರಿ ಜನರು ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸೌಲಭ್ಯಗಳನ್ನು ಒದಗಿಸುವುದು ಜಿಲ್ಲಾಡಳಿತದ ಕರ್ತವ್ಯವಾಗಿದೆ ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಕ್ಫ್ ಆಸ್ತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ : ಡಾ. ಎಚ್. ವಿ. ವಾಸು
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮುನಿರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ನಿಗಮದ ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಅನಂದ್ ಕುಮಾರ್, ತಹಶೀಲ್ದಾರರು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು.