ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಆಡಳಿತ ವೈಫಲ್ಯಕ್ಕೆ ಮತ್ತೊಂದು ಉದಾಹರಣೆ ಸೇರ್ಪಡೆಯಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ತಾಲೂಕು ಕಚೇರಿಯಲ್ಲಿ ಸರಳ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಜನತೆ ದಿನನಿತ್ಯ ಅಲೆದಾಡಬೇಕಾಗುತ್ತಿರುವ ಸ್ಥಿತಿಯು ಸಾರ್ವಜನಿಕರ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ. “ಹಣ ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ” ಎಂಬ ಮಾತು ಜನರ ನಡುವೆ ಸಾಮಾನ್ಯವಾಗಿ ಕೇಳಿಬರುತ್ತಿದ್ದು, ಇದು ಆಂತರಿಕ ಭ್ರಷ್ಟಾಚಾರದ ಸೂಚಕವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ದಾರಿ, ಮನೆ, ರಸ್ತೆ ಹಾಗೂ ಭೂಮಿ ಸಂಬಂಧಿತ ದಾಖಲೆಗಳಂತಹ ಮೂಲಭೂತ ಸಮಸ್ಯೆಗಳ ಪರಿಹಾರಕ್ಕಾಗಿ ನೂರಾರು ಮಂದಿ ಸಾರ್ವಜನಿಕರು ಸ್ಥಳೀಯ ತಾಲೂಕು ಕಚೇರಿಯನ್ನು ನಿರಂತರವಾಗಿ ಭೇಟಿ ನೀಡುತ್ತಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಡು ಭ್ರಷ್ಟಾಚಾರ ಜನರನ್ನು ತೀವ್ರ ನಿರಾಸೆಗೊಳಪಡಿಸುತ್ತಿದೆ.
“ಹಣ ಕೊಟ್ಟರೆ ಮಾತ್ರ ಕೆಲಸ ಆಗುತ್ತಿದೆ, ನಾವು ಬಡವರು ಎಲ್ಲಿ ಹೋಗಬೇಕು?” ದಿನದ ಕೂಲಿ ಕೆಲಸವನ್ನೇ ತ್ಯಜಿಸಿ, ಸರ್ಕಾರಿ ಕಚೇರಿಗಳ ಮೆಟ್ಟಿಲು ಎಣಿಸುವ ಪರಿಸ್ಥಿತಿ ಬಂದಿದೆ. ಒಪ್ಪತ್ತಿನ ಕೂಲಿ ಬಿಟ್ಟು ಕಚೇರಿಗೆ ಹೋದರೂ, ಅಲ್ಲೂ ಕೆಲಸವಿಲ್ಲ. ಪ್ರಾಮಾಣಿಕರಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ” ಎಂದು ಆಕ್ರೋಶಗೊಂಡ ಸ್ಥಳೀಯರು ಆರೋಪಿಸುತ್ತಿದ್ದಾರೆ.
ತಾಲೂಕು ಮಟ್ಟದಲ್ಲಿ ಸಾರ್ವಜನಿಕರಿಗೆ ಸರಿಯಾದ ಪರಿಹಾರ ನೀಡಬೇಕಾದ ಆಡಳಿತ ಅಧಿಕಾರಿಗಳೇ ಜನವಾಣಿಗೆ ಕಿವಿಯಿಲ್ಲದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಆಡಳಿತ ಯಂತ್ರದ ನೈತಿಕತೆ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯ ಬಗ್ಗೆ ಪ್ರಶ್ನೆ ಎಬ್ಬಿಸುತ್ತಿವೆ.

ಪ್ರಭಾವಿತರು ನೀಡಿದ ದೂರಿನಂತೆ, ಅವರು ತಮ್ಮ ಸಮಸ್ಯೆಯನ್ನು ಮೇಲಧಿಕಾರಿಗೆ ಅರ್ಜಿ ಮೂಲಕ ವರದಿ ಮಾಡಿದ ನಂತರ, ಸಂಬಂಧಿತ ಅಧಿಕಾರಿಗಳಿಂದಲೇ ಆದೇಶ ದೊರೆತಿತ್ತು. ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಜರು ಸಲ್ಲಿಸಿ, ನಂತರ ಸಂಬಂಧಿತ ದಾಖಲೆಯ ಪ್ರತಿ ನೀಡಬೇಕು ಎಂದು ಆದೇಶಿಸಿದ್ದರು. ಆದರೆ, ಈ ಆದೇಶ ಬಂದು ಬಹು ಕಾಲವಾದರೂ, ತಾಲೂಕು ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುಮಾಸ್ತರುಗಳು ಯಾವುದೇ ರೀತಿಯ ದಾಖಲೆ ಅಥವಾ ಪತ್ರ ಒದಗಿಸದೆ ಅನಗತ್ಯವಾಗಿ ತಡೆ ಮಾಡುತ್ತಿದ್ದಾರೆ. ಅಧಿಕಾರಿಗಳೇ ಉನ್ನತ ಅಧಿಕಾರಿಗಳ ಆದೇಶವನ್ನು ಉಲಂಘಿಸುತ್ತಿದ್ದಾರೆ. ನಾವಂತು ವರ್ಷಗಳಿಂದ ಕಾದು ಕಾದು ಸಾಕಾಗಿದೆ. ಕಚೇರಿಗೆ ಹೋದರೂ ನಾಳೆ ಬನ್ನಿ, ನಾಡಿದ್ದು ಬನ್ನಿ ಎಂದು ಸತಾಯಿಸುತ್ತಿದ್ದಾರೆ” ಎನ್ನುತ್ತಾರೆ ಈ ದಿನ ಡಾಟ್ ಕಾಮ್ ಜತೆ ಮಾತನಾಡಿದ ಬಣಕಲ್ ನಿವಾಸಿ ಮೆಹಮುದ.

ರೈತ ಮುಖಂಡ ಮಂಜುನಾಥಗೌಡ ಮಾತನಾಡಿ, “ನನ್ನ ಕಾಲು ಸ್ವಾದೀನ ಇಲ್ಲದೆ ತಾಲೂಕು ಕಚೇರಿಗೆ ಅಲೆದು, ನನ್ನ ಚಪ್ಪಲಿ ಸವೆದಿದೆ ಬಿಟ್ಟರೆ, ಕೆಲಸ ಮಾತ್ರ ಅಂಗೈಯಗಲದಷ್ಟು ಆಗಿಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬರದೂ ಕೂಡ ಇದೇ ಪರಿಸ್ಥಿತಿ” ಎಂದರು.

“ನಕಾಶೆ ಇರುವ ರಸ್ತೆಗೆ ಸುತ್ತಮುತ್ತಲಿನವರು ತೊಂದರೆ ನೀಡುತ್ತಿದ್ದಾರೆ ಎಂದು ಅರ್ಜಿ ಕೊಟ್ಟು ವರ್ಷಗಳೇ ಕಳೆದರೂ ಇಲ್ಲಿಯವರೆಗೂ ತಾಲೂಕು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ. ಇಲ್ಲಿ ಬಂದು ನಾವು ನ್ಯಾಯ ಕೇಳಿದರೆ ಅರ್ಜಿ ಎಲ್ಲಿ ಕೊಟ್ಟಿದ್ದೀಯ ಅಲ್ಲಿ ಹೋಗಿ ಕೇಳಮ್ಮ. ಈವತ್ತು ಹೋಗಿ ನಾಳೆ, ಒಂದು ವಾರ ಬಿಟ್ಟು ಬಾರಮ್ಮ ಎಂದು ಉಡಾಫೆ ಉತ್ತರ ಕೊಡುತ್ತಾರೆ” ಎಂದು ಅಳಿಕೆ ಗ್ರಾಮದ ನಿವಾಸಿ ಯಶೋಧ ಹೇಳುತ್ತಾರೆ.
ಜನರ ಸಮಸ್ಯೆಗಳಿಗೆ ಕಿವಿಯಿಲ್ಲದೆ ಉಡಾಫೆಯಾಗಿ ವರ್ತಿಸುತ್ತಿರುವ ಬೇಜವಾಬ್ದಾರಿ ಅಧಿಕಾರಿಗಳು ಇನ್ನೂ ಎಷ್ಟು ಕಾಲ ಈ ಕಚೇರಿಗಳಲ್ಲಿ ಕುಳಿತುಕೊಳ್ಳಬೇಕು? ಬದಲಿಗೆ ನಿಷ್ಠಾವಂತ ಸಿಬ್ಬಂದಿಗೆ ಅವಕಾಶ ನೀಡಬಾರದೇಕೆ? ಸರ್ಕಾರದ ಸವಲತ್ತು ಪಡೆದು ಜನಸೇವೆ ಮಾಡುವ ಬದಲು, ಬಡ ಜನತೆಯ ರಕ್ತ ಹೀರುವಂತೆ ವರ್ತಿಸುತ್ತಿರುವ ಈ ಅಧಿಕಾರಿಗಳನ್ನು ತಕ್ಷಣವೇ ವಜಾಗೊಳಿಸಿ, ಹೊಣೆಗಾರ ಸಿಬ್ಬಂದಿಯನ್ನು ನೇಮಿಸಬೇಕು ಎಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಆಕಸ್ಮಿಕ ಬೆಂಕಿ: ಆರು ಕುರಿಗಳು ಸಾವು
ಅಧಿಕಾರಿಗಳು ಯಾವುದೇ ಕಾರಣಕ್ಕೂ ಜನರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುವುದು ಅವರ ಮೂಲ ಹೊಣೆಗಾರಿಕೆಯಾಗಿದೆ. ಇದನ್ನು ಮರೆತು, ಲೂಟಿ ಕೋರರಂತೆ ವರ್ತಿಸುವುದು ಖಂಡನೀಯ. ಜನತೆ ತಮ್ಮ ನ್ಯಾಯಕ್ಕಾಗಿ ನಿತ್ಯ ತವಕಿಸುತ್ತಿರುವ ಈ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳು ಕೂಡಲೇ ಜಾಗೃತರಾಗಿ ಕ್ರಮ ಕೈಗೊಂಡು, ಜನವಾಣಿಗೆ ಸ್ಪಂದಿಸಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ ಮತ್ತು ನಮ್ಮ ಆಶೆಯೂ ಹೌದು.