ಚಿಕ್ಕಬಳ್ಳಾಪುರ | ಅಧ್ವಾನದತ್ತ ಸರಕಾರಿ ಶಾಲೆಗಳು; ಕಳಪೆ ಫಲಿತಾಂಶಕ್ಕೆ ಹೊಣೆ ಯಾರು?

Date:

Advertisements

ಚಿಕ್ಕಬಳ್ಳಾಪುರ ಜಿಲ್ಲೆ 10ನೇ ತರಗತಿ ಫಲಿತಾಂಶದಲ್ಲಿ 18 ಸ್ಥಾನದಿಂದ ದಿಢೀರ್‌ 22 ಸ್ಥಾನಕ್ಕೆ ಕುಸಿದಿದ್ದು, ಸರಕಾರಿ ಶಾಲೆಗಳು ಅಧ್ವಾನದತ್ತ ಮುಖಮಾಡಿವೆ. ಈ ಬಾರಿ ಶೇ.55ರಷ್ಟು ಸರಕಾರಿ ಶಾಲೆಗಳ ಫಲಿತಾಂಶ ಬಂದಿದ್ದು, ಕಳಪೆ ಫಲಿತಾಂಶಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಮೂಡಿದೆ.

ಜಿಲ್ಲೆಯಾದ್ಯಂತ ಒಟ್ಟು 14,971 ವಿದ್ಯಾರ್ಥಿಗಳು ಎಸ್.ಎಸ್.ಎಲ್‌.ಸಿ ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ ಸರಕಾರಿ ಶಾಲೆಯ 6,985 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಕೇವಲ 3,821 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ(55%). ಇನ್ನು ಅನುದಾನಿತ ಶಾಲೆಗಳ 2,557 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇವರ ಪೈಕಿ 1,239(48%) ವಿದ್ಯಾರ್ಥಿಗಳಷ್ಟೇ ಪಾಸಾಗಿದ್ದಾರೆ. ಖಾಸಗಿ ಶಾಲೆಗಳ 5,429 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 4,402(81%) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಜಿಲ್ಲೆಯ ಕೆಲವು ಸರಕಾರಿ ಶಾಲೆಗಳಲ್ಲಿ ಶೇ.20ಕ್ಕಿಂತಲೂ ಕಡಿಮೆ ಫಲಿತಾಂಶ ಬಂದಿದೆ. ಸಮಾಧಾನ ಎಂದರೆ ಯಾವ ಶಾಲೆಯಲ್ಲೂ ಶೂನ್ಯ ಫಲಿತಾಂಶ ಬಂದಿಲ್ಲ. ಶೇ.70ಕ್ಕಿಂತಲೂ ಹೆಚ್ಚಿನ ಮಂದಿ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲೇ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಫಲಿತಾಂಶ ಮಾತ್ರ ತೀರ ಕಳಪೆಯಾಗಿದ್ದು, ಜಿಲ್ಲೆಯ ಫಲಿತಾಂಶ ರಾಜ್ಯದಲ್ಲೇ 22ನೇ ಸ್ಥಾನಕ್ಕೆ ಕುಸಿಯಲು ಕಾರಣವಾಗಿದೆ.

Advertisements

ಶಿಕ್ಷಕರ ಕೊರತೆ : ಸರಕಾರಿ ಶಾಲೆಗಳಲ್ಲಿ ಶೈಕ್ಷಣಿಕ ವರ್ಷ ಆರಂಭದಿಂದಲೇ ಶಿಕ್ಷಕರ ಕೊರತೆ ಇನ್ನಿಲ್ಲದಂತೆ ಕಾಡಿತ್ತು. ಕೆಲವು ಶಾಲೆಗಳಲ್ಲಿಇಂಗ್ಲಿಷ್‌, ಗಣಿತ ಮತ್ತು ಸಮಾಜ ವಿಷಯಕ್ಕೆ ಶಿಕ್ಷಕರಿಲ್ಲದೇ ಬೋಧನೆಯೂ ಸರಿಯಾಗಿ ನಡೆದಿಲ್ಲ. ಮತ್ತೊಂದೆಡೆ ಕೊನೆ ಕ್ಷಣದಲ್ಲಿ ಕೆಲವರನ್ನು ನಿಯೋಜಿಸಿ ಗಡಿಬಿಡಿಯಲ್ಲಿ ಬೋಧನೆ ಮಾಡಲಾಗಿದೆ. ಜಿಲ್ಲೆಯ ಕೆಲವೆಡೆ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು. ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗಿತ್ತು. 

ಅತಿಥಿ ಶಿಕ್ಷಕರ ಸಮಸ್ಯೆ : ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವ ಕಡೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಅವಕಾಶವೂ ಇದೆ. ಆದರೆ ಸಕಾಲಕ್ಕೆ ನೇಮಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ದೂರು ಇದೆ. ಅಲ್ಲದೇ ಸಕಾಲಕ್ಕೆ ಗೌರವಧನವೂ ಸಿಗದ ಕಾರಣ ನಾನಾ ವ್ಯತ್ಯಾಸಗಳು ಆಗಿವೆ. ಇನ್ನೊಂದೆಡೆ ಹೆಚ್ಚಿನ ಕಾರ್ಯಭಾರವನ್ನು ಅತಿಥಿ ಶಿಕ್ಷಕರ ಮೇಲೆ ಹೊರಿಸಿರುವ ಆರೋಪವೂ ಇದೆ.

ವಿಶೇಷ ಕಾಳಜಿಗಿಲ್ಲ ಒಲವು: ಮತ್ತೊಂದೆಡೆ ಖಾಸಗಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿಶೇಷ ತರಗತಿ ಸೇರಿದಂತೆ ನಾನಾ ಕಸರತ್ತುಗಳನ್ನು ನಡೆಸುತ್ತಾರೆ. ಆದರೆ ಸರಕಾರಿ ಶಾಲೆಗಳಲ್ಲಿ ಇದು ನಡೆದಿಲ್ಲ. ಕೆಲವರು ಮೇಲಧಿಕಾರಿಗಳ ಆದೇಶವನ್ನು ಧಿಕ್ಕರಿಸಿ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಕೆಲವೊಂದು ಶಾಲೆಗಳಲ್ಲಿ ವಿಷಯ ಶಿಕ್ಷಕರಿದ್ದರೂ ಕೊನೆವರೆಗೂ ಪಠ್ಯಕ್ರಮ ಪೂರ್ಣಗೊಳಿಸಿಲ್ಲ ಎಂಬ ಆರೋಪವೂ ಇವೆ.

ಇದನ್ನೂ ಓದಿ : ನೈಜ ಸಮಸ್ಯೆ ಮರೆಮಾಚಲು, ಜನರ ಗಮನ ಬೇರೆಡೆ ಸೆಳೆಯಲು ಮೋದಿ ಬಳಸುತ್ತಿರುವ ಐದು ಆಸನಗಳು

ಕಾರ್ಯಭಾರ: ಇನ್ನು ಸರಕಾರಿ ಶಾಲೆಗಳಲ್ಲ ಬಿಸಿಯೂಟ ಜಾರಿಯಾದ ನಂತರ ಮುಖ್ಯ ಶಿಕ್ಷಕರಿಗೆ ಹೆಚ್ಚಿನ ಕಾರ್ಯಭಾರವಾಗಿದೆ. ಕೆಲವೊಂದು ಶಿಕ್ಷಕರು ಬಿಸಿಯೂಟದ ಕಡೆ ಗಮನಹರಿಸಬೇಕಾದ ಪರಿಸ್ಥಿತಿ ಬಂದಿದೆ. ತರಕಾರಿ, ಬಾಳೆಹಣ್ಣು, ಚಿಕ್ಕಿ, ಮೊಟ್ಟೆ ಖರೀದಿ ಸೇರಿದಂತೆ ಲೆಕ್ಕಾಚಾರದಲ್ಲೇ ಸಾಕಷ್ಟು ಶಿಕ್ಷಕರು ತೊಡಗಿಕೊಂಡಿದ್ದಾರೆ. ಅದರ ನೆಪದಲ್ಲಿ ಸುತ್ತಾಡುವವರೂ ಇದ್ದಾರೆ ಎಂಬ ಆಕ್ಷೇಪಗಳೂ ಇವೆ.

ಕೆಲವು ಕಡೆ ಸರಕಾರಿ ಶಾಲಾ ಶಿಕ್ಷಕರು ಸಂಘ, ಸಂಘಟನೆ ಹೀಗೆ ನಾನಾ ಕಾರಣಕೊಟ್ಟು ಶಾಲೆಗಳಿಗೆ ಬರಲ್ಲ. ಇನ್ನು ಕೆಲವರು ಜನಪ್ರತಿನಿಧಿಗಳ ಸಭೆ ಸಮಾರಂಭಗಳಲ್ಲಿ ಭಾಗಿಯಾಗುವುದು. ಇನ್ನು ಕೆಲವರು ಕುಟುಂಬದವರ ಹೆಸರಲ್ಲಿ ಏಜೆನ್ಸಿ ಪಡೆದು ವಿಮೆ, ಇನ್ನಿತರೆ ಕಾರ್ಯಗಳನ್ನು ನಿರ್ವಹಿಸುವುದು. ಲೇವಾದೇವಿ, ಬಡ್ಡಿ ವ್ಯವಹಾರ ಹೀಗೆ ನಾನಾ ಆರೋಪಗಳು ಕೆಲವು ಶಿಕ್ಷಕರ ಮೇಲೆ ಆಗಿಂದಾಗೇ ಕೇಳಿಬರುತ್ತಲೇ ಇರುತ್ತವೆ. ಹೀಗಾಗಿ ಮಕ್ಕಳ ಶಿಕ್ಷಣಕ್ಕಿಂತ ವೈಯಕ್ತಿಕ ಕೆಲಸಗಳಲ್ಲೇ ಶಿಕ್ಷಕರು ನಿರತರಾಗಿರುತ್ತಾರೆ ಎಂಬುದು ಪೋಷಕರ ಆರೋಪ.

ವಿಪರ್ಯಾಸ ಎಂದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಕೇವಲ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶಕ್ಕಷ್ಟೇ ಒತ್ತು ನೀಡುತ್ತಿದ್ದಾರೆ. ಆದರೆ, ಪ್ರಾಥಮಿಕ ಶಿಕ್ಷಣದ ಕಡೆ ಹೆಚ್ಚಿನ ಒಲವು ತೋರುತ್ತಿಲ್ಲ. ಕೆಲವೊಂದು ಶಾಲೆಗಳಲ್ಲಿ ಪ್ರೌಢಶಾಲೆಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವರ್ಣಮಾಲೆಯಿಂದ ಹೇಳಿಕೊಡಬೇಕಾದ ದುಸ್ಥಿತಿ ಇದೆ. ಪ್ರಾಥಮಿಕ ಶಿಕ್ಷಣಕ್ಕೆ ಯಾವುದೇ ಪಬ್ಲಿಕ್‌ ಪರೀಕ್ಷೆ ಇಲ್ಲದ ಕಾರಣ ಮಕ್ಕಳ ಶಿಕ್ಷಣ ಅಳತೆಯಾಗುತ್ತಿಲ್ಲ. ಹೀಗಾಗಿ ಅವರನ್ನು ತಿದ್ದಿತೀಡುವ ಕಾರ್ಯವೂ ನಡೆಯುತ್ತಿಲ್ಲ. ಹೀಗಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶಕ್ಕೆ ಹೊಡೆತ ಬಿದ್ದಿದೆ ಎನ್ನುತ್ತಾರೆ ಶಿಕ್ಷಣ ತಜ್ಞರು.

ನಮ್ಮ ಅವಧಿಯಲ್ಲಿ ಶೈಕ್ಷಣಿಕ ಅಭಿವೃದ್ಧಿ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗುರಿಯಾಗಿಸಿಕೊಂಡು ವಿಶೇಷ ಸಮಿತಿ ರಚಿಸಿದ್ದೆವು. ಅನುತ್ತೀರ್ಣ ಆಗುವಂತ ವಿದ್ಯಾರ್ಥಿಗಳನ್ನು ಪಾಸ್‌ ಆಗುವಂತೆ ಮತ್ತು ಸೆಕೆಂಡ್‌ ಕ್ಲಾಸ್‌ ಪಾಸ್‌ ಆಗುವ ವಿದ್ಯಾರ್ಥಿಗಳನ್ನು ಫಸ್ಟ್‌ ಕ್ಲಾಸ್‌ ಆಗುವಂತೆ ತಯಾರಿ ಮಾಡುವಂತೆ ಶಿಕ್ಷಕರನ್ನು ಪ್ರೇರೇಪಣೆ ಮಾಡಿದ್ದೆವು. ಸರಕಾರಿ ಶಾಲೆಗಳಿಗೆ ಪ್ರೊಜೆಕ್ಟರ್‌ಗಳನ್ನು ಸಹ ಕೊಡಲಾಗಿತ್ತು. ಅದರಿಂದ ರಾಜ್ಯದಲ್ಲೇ ಜಿಲ್ಲೆಯ ಫಲಿತಾಂಶ ಮೊದಲು 13ನೇ ಸ್ಥಾನ, 3ನೇ ಸ್ಥಾನ ನಂತರ ಮೊದಲ ಸ್ಥಾನಕ್ಕೆ ಬಂತು. ವಿಶೇಷ ಸಭೆ ನಡೆಸಿ ಶಿಕ್ಷಕರನ್ನು ಪ್ರೇರೆಪಿಸಿದ್ದು ಆ ರೀತಿಯ ಫಲಿತಾಂಶಕ್ಕೆ ಕಾರಣವಾಯಿತು.

– ಹೆಚ್.ವಿ.ಮಂಜುನಾಥ್‌, ಜಿಪಂ ಮಾಜಿ ಅಧ್ಯಕ್ಷರು, ಚಿಕ್ಕಬಳ್ಳಾಪುರ.

ಸಾಕಷ್ಟು ಸರಕಾರಿ ಶಾಲೆಗಳಲ್ಲಿ ಸರಿಯಾಗಿ ಶಿಕ್ಷಕರೇ ಇಲ್ಲ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೇವಲ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಷ್ಟೇ ಒತ್ತು ಕೊಡುತ್ತಿದ್ದಾರೆ. ಆದರೆ, ಮಕ್ಕಳಿಗೆ ಸರಿಯಾಗಿ ಪ್ರಾಥಮಿಕ ಶಿಕ್ಷಣವೇ ಸಿಗುತ್ತಿಲ್ಲ. ಕೆಲವು ಕಡೆ ಪ್ರೌಢಶಾಲೆಗೆ ಪ್ರವೇಶ ಪಡೆದ ಮಕ್ಕಳಿಗೂ ವರ್ಣಮಾಲೆ ಬರಲ್ಲ. ಪ್ರಾಥಮಿಕ ಶಿಕ್ಷಣ ಮಟ್ಟದಿಂದಲೇ ಪಬ್ಲಿಕ್‌ ಪರೀಕ್ಷೆಗಳನ್ನು ನಡೆಸಿ ಮಕ್ಕಳ ಶೈಕ್ಷಣಿಕ ಸುಧಾರಣೆ ಕ್ರಮ ಕೈಗೊಳ್ಳುವುದು ಒಳಿತು.

– ನೇತಾಜಿ ಅಶೋಕ್‌, ಜಿಲ್ಲಾಧ್ಯಕ್ಷರು, ಶಾಲಾಭಿವೃದ್ಧಿ ಸಮನ್ವಯ ಸಮಿತಿ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಬೇಕಾದರೆ ಮಕ್ಕಳನ್ನು 5ನೇ ತರಗತಿಯಿಂದಲೇ ಸಜ್ಜುಗೊಳಿಸಬೇಕು. ಹಲವಾರು ಕಡೆ ಅತಿಥಿ ಶಿಕ್ಷಕರ ನೇಮಕದ ಹೊರತಾಗಿಯೂ ಶಿಕ್ಷಕರ ಕೊರತೆ ಇತ್ತು. ಮುಂದಿನ ದಿನಗಳಲ್ಲಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

– ನಿಂಗರಾಜಪ್ಪ, ಡಿಡಿಪಿಐ.

ನಮ್ಮ ಶಾಲೆಯಲ್ಲಿ ಗಣಿತ, ಇಂಗ್ಲಿಷ್‌, ಸಮಾಜಕ್ಕೆ ಶಿಕ್ಷಕರೇ ಇರಲಿಲ್ಲ. ಕೊನೆಗೂ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿದ ಮೇಲೆ ಕೆಲವು ಶಿಕ್ಷಕರನ್ನು ನಿಯೋಜಿಸಿದ್ದರು. ಶಾಲೆಗೆ ಈಗ ಶೇ.60ರಷ್ಟು ಫಲಿತಾಂಶ ಬಂದಿದೆ. ಗಣಿತ, ಇಂಗ್ಲಿಷ್‌, ಸಮಾಜ ವಿಷಯದಲ್ಲಿ ಫೇಲ್‌ ಆಗಿರುವವರೇ ಹೆಚ್ಚಿದ್ದಾರೆ ಎನ್ನುತ್ತಾರೆ ಅಡ್ಡಗಲ್‌ ಸರಕಾರಿ ಶಾಲೆ ಎಸ್‌ಡಿಎಂಸಿ ಸದಸ್ಯ ಮಂಜುನಾಥ್.‌

WhatsApp Image 2024 08 09 at 11.58.31 de404b09
+ posts

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.

ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು. 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ವಿಜಯ್‌ ಕುಮಾರ್ ಗಜ್ಜರಹಳ್ಳಿ
ವಿಜಯ್‌ ಕುಮಾರ್ ಗಜ್ಜರಹಳ್ಳಿ
ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ. ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು. 

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X