ಸರ್ಕಾರಿ ಶಾಲೆಗಳು ಹಾಗೂ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಸಂವಾದ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ವಿನೂತನ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಸಲಾಗಿದೆ ಎಂದು ಡಿಡಿಪಿಐ ಮನ ಮೋಹನ್ ತಿಳಿಸಿದರು.
ಗುಬ್ಬಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ನಮ್ಮ ಶಾಲೆ ನಮ್ಮ ಜವಾಬ್ದಾರಿ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರ್ಹ ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಶಾಲಾ ಕಾಲೇಜಿನಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ಆದರೆ ಪೋಷಕರಲ್ಲಿನ ಖಾಸಗಿ ಶಾಲೆಯ ವ್ಯಾಮೋಹ ಸರ್ಕಾರಿ ಸಂಸ್ಥೆಗೆ ನಷ್ಟ ತಂದಿದೆ ಎಂದರು.
ಖಾಸಗಿ ಶಾಲೆಯಲ್ಲಿ ಓದುವುದು ಅಂದರೆ ಪ್ರತಿಷ್ಠೆ ಎಂದು ತಿಳಿದ ಪಾಲಕರು ಆಂಗ್ಲ ಮಾಧ್ಯಮ ಪ್ರೀತಿಗೆ ಬಲಿಯಾಗಿ ಲಕ್ಷಾಂತರ ಹಣ ವ್ಯಯ ಮಾಡುತ್ತಾರೆ. ಆದರೆ ವಾಸ್ತವದಲ್ಲಿ ಓದಿಗೆ ಉತ್ತಮ ವಾತಾವರಣ ನೀಡುವುದು ಸರ್ಕಾರಿ ಶಾಲೆ ಮಾತ್ರ. ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿಯೂಟ, ಪೌಷ್ಟಿಕ ಆಹಾರ, ಹಾಲು, ರಾಗಿ ಮಾಲ್ಟ್ ಹೀಗೆ ಎಲ್ಲಾ ಸವಲತ್ತು ನೀಡಿ ಉತ್ತಮ ಶಿಕ್ಷಕ ವೃಂದವನ್ನು ನೀಡಿದ ಸರ್ಕಾರಿ ಶಾಲೆಯ ಬಗ್ಗೆ ಕೀಳರಿಮೆ ಬೇಡ. ಮಕ್ಕಳಿಗೆ ನಿಮ್ಮ ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಮನವಿ ಮಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್ ಮಾತನಾಡಿ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯ ವ್ಯತ್ಯಾಸ ತಿಳಿಸಿ ನೂರಕ್ಕೆ 90 ಅಂಕ ಗಳಿಸಿದ ಮಕ್ಕಳಿಗೆ ಮಾತ್ರ ದಾಖಲು ಮಾಡಿಕೊಂಡು ಶಿಕ್ಷಣ ನೀಡುತ್ತಾರೆ. ಆದರೆ ಸರ್ಕಾರಿ ಶಾಲೆಯಲ್ಲಿ ತೇರ್ಗಡೆ ಹೊಂದಿದ ಎಲ್ಲಾ ಮಕ್ಕಳಿಗೂ ದಾಖಲು ನೀಡಿ ಅವರಿಂದ ಉತ್ತಮ ಫಲಿತಾಂಶ ತರುವ ಪ್ರಯತ್ನ ಮಾಡುತ್ತವೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಸಾಧನೆ ಪೋಷಕರು ಅರಿಯಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಮಧುಸೂದನ್ ಮಾತನಾಡಿ ವಿದ್ಯಾರ್ಹತೆಯ ಶಿಕ್ಷಕರಿಗೆ ಇಲಾಖೆ ಮತ್ತೊಮ್ಮೆ ಉತ್ತಮ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಸಹ ನೀಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿ ಮಾಡುವ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಕೆಲಸ ಶಿಕ್ಷಕರ ಜೊತೆ ಅಬಿವೃದ್ದಿ ಸಮಿತಿ ಹಾಗೂ ಚುನಾಯಿತ ಪ್ರತಿನಿಧಿಗಳು, ಊರಿನ ಗಣ್ಯರು ಒಗ್ಗೂಡಿ ಮಾಡಬೇಕು. ನಮ್ಮೂರ ಶಾಲೆ ಉಳಿಸಿ ಬೆಳೆಸುವ ಕೆಲಸ ಸ್ಥಳೀಯರು ಮಾಡಿದಲ್ಲಿ ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ತಲುಪುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಪಪಂ ಸದಸ್ಯ ಕೃಷ್ಣಮೂರ್ತಿ, ಎಡಿಪಿಐ ಜಗದೀಶ್, ಅಜೀಂ ಪ್ರೇಂಜಿ ಫೌಂಡೇಶನ್ ಸದಸ್ಯ ಶರ್ಯ, ಬಿಆರ್ ಪಿಗಳಾದ ರಾಜಲಕ್ಷ್ಮಿ, ಗಿರೀಶ್, ರೇಣುಕಾ ಪ್ರಸಾದ್, ಸಿಆರ್ ಪಿಗಳಾದ ಶಾರದಮ್ಮ, ಲೋಕೇಶ್, ಮುಖ್ಯ ಶಿಕ್ಷಕಿ ದೇವಿಕಾ, ಎಸ್ ಡಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಇತರರು ಇದ್ದರು.