ಈ ದಿನ ಸಂಪಾದಕೀಯ | ಮೋದಿಯ ಅಮೃತಕಾಲದಲ್ಲಿ ದಾಳಿ ಮತ್ತು ದ್ವೇಷಕ್ಕಿದೆ ಮಾರುಕಟ್ಟೆ

Date:

Advertisements
ಮುಸ್ಲಿಮರಿಗೆ ತೊಂದರೆ ಕೊಡಬೇಡಿ ಎಂದಾಕ್ಷಣ, ಯೋಧನ ಮಡದಿ ಹಿಮಾನ್ಶಿ ನರ್ವಾಲ್ ಖಳನಾಯಕಿಯಾದರು. ಆಕೆಯ ಮೇಲೆ ಟ್ರೋಲ್‌ ದಾಳಿಯಾಯಿತು. ಇದು ಮೋದಿ ಕಾಲದ ಮುಸ್ಲಿಂ ದ್ವೇಷ ಮತ್ತು ದಾಳಿಯ ಸಣ್ಣ ಸ್ಯಾಂಪಲ್... 

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎ.22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಅಮಾಯಕರು ಹತರಾದರು. ಆ 26 ಮಂದಿಯಲ್ಲಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಕೂಡ ಒಬ್ಬರಾಗಿದ್ದರು. ಈ ದಾಳಿ ಇಡೀ ದೇಶಕ್ಕೆ ನೋವುಂಟುಮಾಡಿತು ಮತ್ತು ಉಗ್ರರ ಕೃತ್ಯಕ್ಕೆ ಇಡೀ ದೇಶವೇ ಆಕ್ರೋಶಗೊಂಡಿತು.

ಪಹಲ್ಗಾಮ್‌ನ ಹಸಿರು ಹುಲ್ಲಿನ ಮೇಲೆ ಲೆಫ್ಟಿನೆಂಟ್‌ ವಿನಯ್‌ ನರ್ವಾಲ್‌ ಹೆಣವಾಗಿ ಬಿದ್ದಿರುವ, ಪಕ್ಕದಲ್ಲಿ ಪತ್ನಿ ಹಿಮಾನ್ಶಿ ನರ್ವಾಲ್‌ ಕೂತು ಬಿಕ್ಕುತ್ತಿರುವ ಚಿತ್ರ, ಕ್ಷಣಮಾತ್ರದಲ್ಲಿ ದೇಶದ ಜನರ ಹೃದಯವನ್ನು ಕಲಕಿತ್ತು. ವಾಟ್ಸಾಪ್‌ ಸ್ಟೇಟಸ್‌ನಿಂದ ಹಿಡಿದು, ಸೋಷಿಯಲ್‌ ಮೀಡಿಯಾಗಳವರೆಗೆ ಮಿಡಿದು ವೈರಲ್‌ ಆಗಿತ್ತು. ದೇಶಕ್ಕೆ ದೇಶವೇ ಹಿಮಾನ್ಶಿ ನರ್ವಾಲ್‌ ಬೆನ್ನಿಗೆ ನಿಂತು, ನಿನ್ನ ದುಃಖ ನಮ್ಮದು ಕೂಡ ಎಂದಿತ್ತು.

ಪತಿ ಕಳೆದುಕೊಂಡ ಸಂಕಟದ ಸಂದರ್ಭದಲ್ಲಿಯೂ ದೇಶದ ಸ್ಥಿತಿ ಧ್ಯಾನಿಸಿ, ದುಃಖದಿಂದ ಹೊರಬಂದ ಹಿಮಾನ್ಶಿ ನರ್ವಾಲ್ ಎಂಬ ಹೆಣ್ಣುಮಗಳು, ʼವಿನಯ್ ಎಲ್ಲಿಯೇ ಇರಲಿ, ಆತ ಶಾಂತಿಯಿಂದ ಇರಲಿ ಎಂದು ಇಡೀ ದೇಶ ಪ್ರಾರ್ಥಿಸಬೇಕೆಂದು ಬಯಸುತ್ತೇನೆ. ನನಗೆ ಬೇಕಿರುವುದು ಅಷ್ಟೇ. ಮುಸ್ಲಿಮರು ಮತ್ತು ಕಾಶ್ಮೀರಿಗಳ ಮೇಲೆ ದ್ವೇಷ ಬೇಡ. ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ, ಬೇರೇನೂ ಅಲ್ಲʼ ಎಂದು, ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡರು.

Advertisements

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸುಹಾಸ್ ಶೆಟ್ಟಿ ಸಾವಿನಲ್ಲಿ ಬಿಜೆಪಿ ಕೆಟ್ಟ ರಾಜಕೀಯ

ಇಷ್ಟೇ ಆಕೆಯಿಂದಾದ ಪ್ರಮಾದ. ಮುಸ್ಲಿಮರನ್ನು ದ್ವೇಷಿಸುವ ಭಕ್ತರಿಗೆ ಅಷ್ಟು ಸಾಕಾಗಿತ್ತು. ಮುಸ್ಲಿಮರೆಂದರೆ ಉಗ್ರರು, ನುಸುಳುಕೋರರು, ಪಾಕಿಸ್ತಾನದವರು; ನಮ್ಮ ಅನ್ನ ಕಿತ್ತುಕೊಂಡು ತಿನ್ನುವ ಅನ್ಯರು ಎಂದು ಬಲವಾಗಿ ನಂಬಿರುವ ಭಕ್ತರು, ಪತಿ ಕಳೆದುಕೊಂಡ ಸಂತ್ರಸ್ತೆ ಎನ್ನುವುದನ್ನೂ ಮರೆತು, ಅಕ್ಷರಶಃ ರಣಹದ್ದುಗಳಾದರು. ಸುಲಭಕ್ಕೆ ಸಿಗುವ ಸೋಷಿಯಲ್‌ ಮೀಡಿಯಾಗಳಲ್ಲಿ ಅತ್ಯಂತ ಕೆಟ್ಟದಾಗಿ ಹಿಮಾನ್ಶಿ ನರ್ವಾಲ್‌ ಮೇಲೆ ದಾಳಿ ಮಾಡಿದರು. ಆಕೆ ಓದುತ್ತಿದ್ದ ಜೆಎನ್‌ಯು ವಿವಿ, ಅಲ್ಲಿನ ಮುಸ್ಲಿಂ ಗೆಳೆಯರು, ಆಗ ನಡೆದ ಘಟನೆಗಳು, ಚಿತ್ರಗಳು ಎಲ್ಲವನ್ನು ಕೆದಕಿ ಟ್ರೋಲ್‌ಗೆ ಬಳಸಿಕೊಂಡರು. ಹೊಟ್ಟೆಯೊಳಗಿರುವ ಕೊಳಕನ್ನೆಲ್ಲ ಕಾರಿಕೊಂಡರು. ಕಾಡು ಮೃಗಗಳು ಕೂಡ ನಾಚುವಂತೆ ವರ್ತಿಸಿದರು.

ಕೇವಲ ಒಂದು ವಾರದ ಹಿಂದೆ ಹಿಮಾನ್ಶಿ ಎಂಬ ಹೆಣ್ಣುಮಗಳ ಪರ ನಿಂತು ಕಣ್ಣೀರುಗರೆದಿದ್ದವರು, ಸ್ತ್ರೀ ಕುಲಕ್ಕೆ ಕೈ ಮುಗಿದು ಭಾರತೀಯ ಸಂಸ್ಕೃತಿ ಎಂದು ಸಾರಿದ್ದವರು, ಈಗ ರಣಹದ್ದುಗಳಾಗಿ ಕುಕ್ಕತೊಡಗಿದ್ದರು. ಇದಕ್ಕೆ ಕೆಲ ಮಹಿಳಾ ಪತ್ರಕರ್ತೆಯರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ, ಎಚ್ಚೆತ್ತ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ಕಿಶೋರ್ ರಹತ್ಕರ್ ಅವರು, ‘ಕೆಲವರಿಗೆ ಹಿಮಾನ್ಶಿ ನರ್ವಾಲ್ ಅವರ ಹೇಳಿಕೆಗಳು ಇಷ್ಟವಾಗದಿರಬಹುದು. ಆದರೂ ಅದನ್ನು ನಾವು ಗೌರವಿಸಬೇಕು. ಅಂತಹ ಅಭಿಪ್ರಾಯಗಳ ಕಾರಣಕ್ಕೆ ಅವರನ್ನು ಟ್ರೋಲ್ ಮಾಡುವುದು ಮತ್ತು ಗುರಿಯಾಗಿಸುವುದು ಸರಿಯಲ್ಲ’ ಎಂದು ತಿಳಿಹೇಳಿದರು.

ಅಂದಹಾಗೆ ರಾಷ್ಟ್ರೀಯ ಮಹಿಳಾ ಆಯೋಗ ಮೋದಿಯವರ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿ ಬರುವಂತಹ ಸಂಸ್ಥೆ. ಈ ಸಂಸ್ಥೆಯ ಮುಖ್ಯಸ್ಥೆ ವಿಜಯಾ ಅವರು, ಮೋದಿ ಭಕ್ತರು ಮಾಡಿರುವ ಮಾನಗೇಡಿ ಕೃತ್ಯಕ್ಕೆ ತಿಳಿಹೇಳಬೇಕಾಗಿ ಬಂದಿರುವುದು ದುರದೃಷ್ಟಕರ ಸಂಗತಿ. ಆದರೂ ಈಗಲೂ ಸನಾತನ ಸಂಸ್ಕೃತಿಯ ಈ ರಕ್ಷಕರು ತಮ್ಮ ಟ್ವೀಟ್‌ಗಳನ್ನು ತೆಗೆದುಹಾಕುತ್ತಿಲ್ಲ. ತಮ್ಮ ಅಭಿಪ್ರಾಯಗಳಿಗಾಗಿ ವಿಷಾದವನ್ನೂ ವ್ಯಕ್ತಪಡಿಸುತ್ತಿಲ್ಲ.

ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ನಿಧನದ ಬಳಿಕ ಅವರ ಪತ್ನಿ ಹಿಮಾನ್ಶಿ ನರ್ವಾಲ್ ಅವರು ದ್ವೇಷಾಸೂಯೆಗಳನ್ನು ಬಿಟ್ಟು ಪ್ರೀತಿಯ ಬಗ್ಗೆ ಮಾತನಾಡಿದರು. ಮನುಷ್ಯತ್ವ, ಮಾನವೀಯತೆ ಮತ್ತು ಸಹಬಾಳ್ವೆ ಕುರಿತು ಕಾಳಜಿ ವ್ಯಕ್ತಪಡಿಸಿದರು. ಆದರೆ ಮುಸ್ಲಿಂ ದ್ವೇಷದ ವಿಷ ಬೀಜ ಬಿತ್ತಿ, ದಾಳಿಯ ಬೆಳೆ ತೆಗೆಯುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಮಾನವೀಯತೆಯ ಪಾಠ ಹಿಡಿಸುವುದಿಲ್ಲ. ಅದನ್ನೇ ರೂಢಿಸಿಕೊಂಡಿರುವ ಭಕ್ತರು ಮೋದಿ ಭಾರತದ ಅಮೃತಕಾಲದ ಅರಿವುಗೇಡಿಗಳಾಗಿದ್ದಾರೆ. ನೊಂದ ಹಿಮಾನ್ಶಿಯವರನ್ನೂ ಬಿಡದೆ ಟ್ರೋಲ್ ಮಾಡುತ್ತಿದ್ದಾರೆ. ಆ ದ್ವೇಷದ ದಾಳಿಗಳನ್ನು ಬಿಜೆಪಿಯ ಐಟಿ ಸೆಲ್‌, ದೊಡ್ಡ ಮಟ್ಟದಲ್ಲಿ ಇಡೀ ಪ್ರಪಂಚಕ್ಕೆ ಹಂಚುವ ಜವಾಬ್ದಾರಿ ಹೊತ್ತುಕೊಂಡಿದೆ.

ಅಸಲಿಗೆ, ಸಂಕಟದ ಸಮಯದಲ್ಲಿಯೂ ದೇಶದ ಸೌಹಾರ್ದತೆ-ಸಹಬಾಳ್ವೆ ಬಗ್ಗೆ ಮಾತನಾಡಿರುವ ಹಿಮಾನ್ಶಿ ನಿಜಕ್ಕೂ ಮಾನವಂತೆ, ಧೈರ್ಯವಂತೆ. ಮಹಿಳೆಯ ಅಭಿಪ್ರಾಯಗಳಿಗಾಗಿ ಅಥವಾ ಅವರ ವೈಯಕ್ತಿಕ ಜೀವನದ ಬಗ್ಗೆ ಟ್ರೋಲ್ ಮಾಡುವುದು ಮಾನವಂತರ ಕೆಲಸವಲ್ಲ. ಅಲ್ಲದೆ ಯಾವುದೇ ಭಿನ್ನಾಭಿಪ್ರಾಯವನ್ನು ಯಾವಾಗಲೂ ಸಭ್ಯವಾಗಿ ಮತ್ತು ಸಾಂವಿಧಾನಿಕ ಮಿತಿಯೊಳಗೆ ವ್ಯಕ್ತಪಡಿಸಬೇಕು. ಮಹಿಳೆಯ ಗೌರವ ಮತ್ತು ಘನತೆಯನ್ನು ರಕ್ಷಿಸಬೇಕು. ಏಕೆಂದರೆ, ಮದುವೆಯಾಗಿ ನಾಲ್ಕೇ ದಿನಕ್ಕೆ ಪತಿಯನ್ನು ಕಣ್ಮುಂದೆಯೇ ಕಳೆದುಕೊಂಡ ಹಿಮಾನ್ಶಿಯವರಿಗೆ ಆಗಿರುವ ಆಘಾತ, ನೋವು, ಸಂಕಟವನ್ನು ನಾವು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ; ಅನುಭವಿಸಲು, ಹಂಚಿಕೊಳ್ಳಲು ಆಗುವುದೂ ಇಲ್ಲ.

ಇದನ್ನು ಓದಿದ್ದೀರಾ?: ಭಯ, ತರ್ಕ ಮತ್ತು ರಾಜಕಾರಣ

ಅಷ್ಟಕ್ಕೂ ಆಕೆ ಸಾಮಾನ್ಯ ಮಹಿಳೆಯಲ್ಲ. ದೇಶದ ರಕ್ಷಣೆಗಾಗಿ ಸೈನ್ಯ ಸೇರಿ ಸೇವೆ ಮಾಡಲು ಹೋದ ಯೋಧನ ಪತ್ನಿ. ಅಂತಹ ಯೋಧನ ಪತ್ನಿ, ಮುಸ್ಲಿಮರಿಗೆ ತೊಂದರೆ ಕೊಡಬೇಡಿ ಎಂದಾಕ್ಷಣ, ಹಿಂದೂ ವಿರೋಧಿಯಾದರು. ಆಕೆಯ ಮೇಲೆ ದಾಳಿ ಮಾಡುವುದು, ದ್ವೇಷ ಕಾರುವುದು ಏನನ್ನು ಸೂಚಿಸುತ್ತದೆ? ದೇಶಭಕ್ತಿಯ ನೆಪದಲ್ಲಿ ಯಾರು ಏನು ಬೇಕಾದರೂ ಮಾಡಬಹುದಾ?

ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ʼದೇಶ ಏನು ಬಯಸುತ್ತದೆಯೋ ಅದು ನಡೆಯುತ್ತದೆʼ ಎಂದು ಹೇಳಿದ್ದಾರೆ. ರಾಜನಾಥ್ ಸಿಂಗ್ ಸೂಚಿಸುವ ಆ ಬಯಕೆಯನ್ನು ದೇಶ ನಿಜವಾಗಿಯೂ ಬಯಸುತ್ತಿದೆಯೇ? ಅವರ ದೇಶದ ಕಲ್ಪನೆಯಲ್ಲಿ ಹಿಮಾನ್ಶಿ ನರ್ವಾಲ್ ಕೂಡ ಸೇರುತ್ತಾರೆಯೇ? ಅವರ ಬಗ್ಗೆ ಅವಮಾನಕರ ಟೀಕೆಗಳನ್ನು ಮಾಡುವವರ ಪೈಕಿ ರಾಷ್ಟ್ರವಾದಿ ಪುರುಷರು ಮತ್ತು ಮಹಿಳೆಯರು ಇದ್ದಾರೆ. ಅವರಲ್ಲಿ ಕೆಲವರು ತಮ್ಮನ್ನು ಸನಾತನಿಗಳು ಎಂದು ಕರೆದುಕೊಳ್ಳುತ್ತಾರೆ. ಮಹಿಳೆಯ ಬಗ್ಗೆ ಕೀಳುಮಟ್ಟದ ಭಾಷೆಯನ್ನು ಬಳಸುತ್ತಿದ್ದಾರೆ ಎಂಬುದು ರಕ್ಷಣಾ ಸಚಿವರಿಗೆ ಏಕೆ ಕಾಣಿಸಿಲ್ಲ? ಯೋಧನ ಪತ್ನಿ ಹಿಮಾನ್ಶಿಯನ್ನು ನಿಂದಿಸುವ ಡಿಜಿಟಲ್ ಭಯೋತ್ಪಾದಕರ ವಿರುದ್ಧ ರಕ್ಷಣಾ ಸಚಿವರು ಏಕೆ ಮಾತನಾಡುತ್ತಿಲ್ಲ?

ಬಿಜೆಪಿಯ ಮತೀಯ ರಾಜಕಾರಣ ದಿನದಿಂದ ದಿನಕ್ಕೆ ಎಲ್ಲೆ ಮೀರುತ್ತಿದೆ. ಮುಸ್ಲಿಂ ದ್ವೇಷ ಮತ್ತು ದಾಳಿ ಬುಲ್ಡೋಜರ್‌ವರೆಗೂ ಮುಟ್ಟಿದೆ. ಅವರ ಅಧಿಕಾರದಾಹ ಮನುಷ್ಯತ್ವವನ್ನೇ ಮರೆಸುತ್ತಿದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಪರವಾಗಿರುವ ಸುದ್ದಿ ಮಾಧ್ಯಮಗಳಿಗೆ ಈ ಮುಸ್ಲಿಂ ದ್ವೇಷ, ಮಾರಾಟದ ಸಮೃದ್ಧ ಸರಕಾಗಿದೆ. ಮುಸ್ಲಿಂ ದ್ವೇಷ ಮತ್ತು ದಾಳಿಯನ್ನು ಹೆಚ್ಚು ಮಾಡಿದಂತೆಲ್ಲ ಅವರಿಗೆ ಆದಾಯವಿದೆ, ಅಧಿಕಾರಸ್ಥರಿಂದ ಅಗ್ರತಾಂಬೂಲವಿದೆ.

ಇವುಗಳ ನಡುವೆ, ಸಬ್‌ ಕಾ ಸಾಥ್‌ ಸಬ್ ಕಾ ವಿಕಾಸ್‌ ಎಂಬುದು, ಘೋಷಿಸಿದವರನ್ನೇ ಅಣಕಿಸುತ್ತಿದೆ. ಇದು ಭಾರತ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X