ಜಿಲ್ಲೆಯಲ್ಲಿರುವ ಸುರಿದ ಆಲಿಕಲ್ಲು ಮಳೆಯಿಂದಾಗಿ ಹಾಳಾಗಿರುವ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು. ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರಿಗೆ ಬಾಕಿ ಇರುವ ಹಣ ಶೀಘ್ರದಲ್ಲೇ ರೈತರ ಖಾತೆಗೆ ಜಮಾ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂಬಂಧ ಸೋಮವಾರ ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ ಬಿ. ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ವಿದ್ಯುತ್ ಪರಿಕರಗಳು ಹಳೆಯದಾಗಿದ್ದು, ಇದರಿಂದ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಹಳೆಯ ಪರಿಕರಗಳನ್ನು ಶೀಘ್ರದಲ್ಲೇ ನವೀಕರಿಸಬೇಕು. ರೈತರಿಗೆ ಹಗಲಿನ ವೇಳೆಯಲ್ಲಿ ವಿದ್ಯುತ್ ನೀಡಬೇಕು. ಕಡೇಚೂರು-ಬಾಡಿಯಾಳ ಗ್ರಾಮಗಳ ಸಮೀಪ ಇರುವ ಕೈಗಾರಿಕಾ ಕಂಪನಿಗಳಿಂದ ಆಗುತ್ತಿರುವ ಮಾಲಿನ್ಯ ತಡೆಗಟ್ಟಬೇಕು, ಕಂಪನಿಗಳಿಗೆ ಭೂಮಿ ನೀಡಿದ ರೈತರ ಕುಟುಂಬಗಳಿಗೆ ಉದ್ಯೋಗ ನೀಡಬೇಕುʼ ಎಂದು ಒತ್ತಾಯಿಸಿದರು.
ʼಬೆಳೆ ಹಾನಿ ಸಮೀಕ್ಷೆ ಪಾರದರ್ಶಕವಾಗಿ ನಡೆಸಬೇಕು. ಜಮೀನಿನ ಮಣ್ಣು ಪರೀಕ್ಷೆ ನಡೆಸಿ ಯಾವ ಬೆಳೆ ಬೆಳೆಯಲು ಭೂಮಿ ಸೂಕ್ತ ಎಂಬ ಕುರಿತು ರೈತರಿಗೆ ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಕಿರಣಾ ಅಂಗಡಿ, ಹೋಟೆಲ್ ಸೇರಿದಂತೆ ಇತರ ಕಡೆಗಳಲ್ಲಿ ಮಾರಾಟ ಆಗುತ್ತಿರುವ ಸರಾಯಿ ತಡೆಯಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಬುದ್ಧಗಯಾ ಮಹಾಬೋಧಿ ಬೌದ್ಧರಿಗೆ ಒಪ್ಪಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ
ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ನಾಗರತ್ನ ಯಕ್ಷಿಂತಿ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟ, ಯಾದಗಿರಿ ಜಿಲ್ಲಾ ಅಧ್ಯಕ್ಷ ಶರಣು ಮಂದಾರವಾಡ, ಜಿಲ್ಲಾ ಕಾರ್ಯದರ್ಶಿ ಹಣಮಂತ ಕೊಂಗಂಡಿ, ಗುರುಮಠಕಲ್ ತಾಲ್ಲೂಕಾಧ್ಯಕ್ಷ ಭೀಮರಾಯ, ಯಾದಗಿರಿ ತಾಲ್ಲೂಕಾಧ್ಯಕ್ಷ ಬಾಲಾಜಿ, ವಡಗೇರಾ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ತಾಲ್ಲೂಕಿನ ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.