ಬೌದ್ಧರಿಗೆ ತಮ್ಮ ಧಾರ್ಮಿಕ ಪವಿತ್ರ ಕ್ಷೇತ್ರ ಬುದ್ಧಗಯಾವನ್ನು ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಸಂವಿಧಾನದ ಕಲಂ 13, 25, ಮತ್ತು 29 ಅನ್ನು ಜಾರಿಗೊಳಿಸಲು ಅಡ್ಡಿಯಾಗಿರುವ ಬಿ.ಟಿ.ಆ್ಯಕ್ಟ್ 1949 ಅನ್ನು ರದ್ದುಪಡಿಸಬೇಕು. ಬುದ್ಧಗಯಾ ಮಹಾಬೋಧಿ ಮಹಾವಿಹಾರದ ಆಡಳಿತಮಂಡಳಿಯನ್ನು ಸಂಪೂರ್ಣವಾಗಿ ಬೌದ್ಧರಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಬುದ್ಧಗಯಾ ಮಾಹಬೋಧಿ ಮಹಾವಿಹಾರ ಸಂಘಟನೆಯಿಂದ ಯಾದಗಿರಿಯಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಿಂದ ತಹಸೀಲ್ ಕಚೇರಿ, ಶಾಸ್ರ್ತಿ ಸರ್ಕಲ್ ಮಾರ್ಗವಾಗಿ ನೇತಾಜಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆ ಉದ್ದೇಶಿಸಿ ಮುಖಂಡರು ಮಾತನಾಡಿ, ʼಬುದ್ಧಗಯಾ ಜಗತ್ತಿನ ಬೌದ್ಧರಿಗೆಲ್ಲಾ ಪರಮ ಪವಿತ್ರವಾದ ಸ್ಥಳ, ರಾಜಕುಮಾರ ಸಿದ್ದಾರ್ಥ ಬೋಧಿ ಜ್ಞಾನ ಪಡೆದು ಭಗವಾನ್ ಬುದ್ಧನಾದ ಪಾವನ ಸ್ಥಳ, ಈ ಕ್ಷೇತ್ರ ಬುದ್ಧನ ಕಾಲದಿಂದಲೂ ಪೂಜ್ಯನೀಯವಾಗಿದೆ. ಸಾಮ್ರಾಟ್ ಅಶೋಕ ಸೇರಿ ಈ ದೇಶದ ಅನೇಕ ರಾಜ ಮಹಾರಾಜರು ಬರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಮತ್ತು ಇನ್ನಿತರ ದೇಶಗಳ ರಾಜರು ಹಾಗೂ ಬೌದ್ಧ ಉಪಾಸಕರು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರದ್ಧಾ ಪೂರ್ವಕವಾಗಿ ಅಪಾರ ಕೊಡುಗೆ ನೀಡಿರುವುದು ಇತಿಹಾಸ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಬುದ್ಧಗಯಾ ಮಹಾವಿಹಾರವನ್ನು ಬೌದ್ಧರಿಗೆ ಬಿಟ್ಟುಕೊಡಬೇಕುʼ ಎಂದು ಆಗ್ರಹಿಸಿದರು.
ʼಭಾರತದ ಸಂವಿಧಾನದ ಪ್ರಕಾರ ಎಲ್ಲಾ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ.
ಸಿಖ್ ಗುರುದ್ವಾರ ಕಾಯ್ದೆ 1925 ರ ಪ್ರಕಾರ ಕೇಶಧಾರಿ ಸಿಖ್‌ರಲ್ಲದವರು ಗುರುದ್ವಾರ ಅಡಳಿತ ಮಂಡಳಿ ಸದಸ್ಯರಾಗುವಂತಿಲ್ಲ. ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರ ಕಾಯ್ದೆ (ವಾರಣಾಸಿ) 1983, ಕಾಶ್ಮೀರದ ಶ್ರೀ ಮಾತಾ ವೈಷ್ಣವಿದೇವಿ ಮಂದಿರ ಕಾಯ್ದೆ-1988 ಮತ್ತು ತಿರುಪತಿ, ಶ್ರೀಶೈಲ ಹಾಗೂ ಇನ್ನಿತರ ಹಿಂದೂ ಧಾರ್ಮಿಕ ಕ್ಷೇತ್ರಗಳ ಕಾನೂನು ಪ್ರಕಾರ ಕೇವಲ ಹಿಂದುಗಳು ಮಾತ್ರ ಆಡಳಿತ ಸದಸ್ಯರಾಗಿದ್ದಾರೆ. ಆದರೆ ಬುದ್ಧಗಯಾ ಟೆಂಪಲ್ ಆ್ಯಕ್ಟ್ 1949 ರ ಪ್ರಕಾರ ಬೌದ್ಧರಿಗೆ ವಿಹಾರ ನಿರ್ವಹಣೆ ಮಾಡಲು ಅಧಿಕಾರವಿಲ್ಲ. ಇದು ಬೌದ್ಧ ಧರ್ಮಿಯರ ಮತ್ತು ಡಾ.ಅಂಬೇಡ್ಕರ್ ಅನುಯಾಯಿಗಳ, ಭಾರತದ ಸಂವಿಧಾನದ ಹಾಗೂ ಪ್ರಗತಿ ಪರ ಚಿಂತಕರ ಸ್ವಾಭಿಮಾನದ ಪ್ರಶ್ನೆಯಾಗಿದೆʼ ಎಂದರು.

ʼದೇಶವನ್ನಾಳುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂವಿಧಾನ ಜಾರಿಮಾಡುವ ಮಾತನಾಡುತ್ತಿವೆ. ಈ ದೇಶದ ಬೌದ್ಧ ಸಮುದಾಯ ಮತ್ತು ಡಾ.ಅಂಬೇಡ್ಕರ್ ಅನುಯಾಯಿಗಳು ಸಂವಿಧಾನ ದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿದ್ದಾರೆʼ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡ ಮರೆಪ್ಪ ಹಳ್ಳಿ, ಬುದ್ಧಘೋಷ ದೇವೇಂದ್ರ ಹೆಗಡೆ, ನೀಲಕಂಠ ಬಡಿಗೇರ, ಹಣಮಂತ ಬೋದನಕರ್, ರಾಹುಲ್ ಹುಲಿಮನಿ, ಶರಣು ನಾಟೀಕರ್, ಭಂತೆ ಮೆತ್ತೆಪಾಲ್ , ಕಮಲರತ್ನ ಬಂತೇಜಿ, ಅಜಪಾಲ್ ಬಂತೇಜಿ, ಹಣಮಂತ ಯಳಸಂಗಿ, ಬಸವರಾಜ ಬೆಣ್ಣೂರ್, ಸುರೇಶ್ ಬೊಮ್ಮನ್, ಚಂದ್ರಕಾಂತ ಛಲವಾದಿ, ನಾಗಣ್ಣ ಕಲ್ಲದೇವನಹಳ್ಳಿ, ರಾಮಣ್ಣ ಕಲ್ಲದೇವನಹಳ್ಳಿ, ಭೀಮರಾಯ ಠಾಣಗುಂದಿ, ಮಲ್ಲಿಕಾರ್ಜುನ ಕ್ರಾಂತಿ, ಮಾಳಪ್ಪ ಕಿರದಹಳ್ಳಿ, ರಾಹುಲ್ ಹುಲಿಮನಿ, ನಿಲ್ಲಮ್ಮ ಬಿ ಮಲ್ಲೆ, ಪರಶುರಾಮ ಕುರಕುಂದಿ, ಭೀಮನಾಯಕ, ವಿಜಯ ಶಿರಗೋಳ, ಬಾಬಾ ತಲಾರಿ, ಭಗವಂತ ಅನವಾರ, ಪರಶುರಾಮ ಒಡೆಯರ್, ಭೀಮರಾಯ ಸಿಂದಗೇರಿ, ಶಿವಪುತ್ರ ಜವಳಿ, ರಾಮಣ್ಣ ಸಾದ್ಯಾಪೂರ, ಹಣಮಂತ ಬೊದನಕರ್, ವೆಂಕಟೇಶ ನಾಯ್ಕಲ್, ಮರೆಪ್ಪ ಬುಕ್ಕಲ್, ರಣಧೀರ ಸನ್ನತಿ, ಮಲ್ಲಿಕಾರ್ಜುನ ಪೂಜಾರಿ, ಬಾಬುರಾವ್ ಬುತಾಳೆ, ಆದ್ಯಪ್ಪ ಹೊಸ್ಮನಿ, ಸುನಿಲ್ ಮಾನಪಡೆ, ಭೀಮರಾಯ ಹೊಸ್ಮನಿ, ಹುಲಗಪ್ಪ ಒಡೆಯರ್, ಕಾಶಿನಾಥ ನಾಟೇಕಾರ್, ನಿಂಗಪ್ಪ ಬೀರನಾಳ, ವೆಂಕಟೇಶ ಹೊಸ್ಮನಿ, ಸದ್ದಮ್ ಹುಸೇನ್, ಆಂಜನೇಯ ಯಾದಗಿರಿ, ಶ್ರೀಕಾಂತ್ ಸುಂಗಲಕರ್, ಸಂಪತ್ ಚಿನ್ನಕಾರ, ಆದಪ್ಪ ಹೊಸ್ಮನಿ, ಮರೆಪ್ಪ ಜಾಲಿಮಂಚಿ, ಸೌಭಾಗ್ಯ ಮಾಲಗತ್ತಿ, ಮಹಾಲಿಂಗಪ್ಪ ಮಾಲಗತ್ತಿ, ಶಿವಕುಮಾರ್ ಪೋತೆ, ವಿಶ್ವನಾಥ ನಾಟ್ಟೇಕರ್, ಮಿಲಿಂದ್ ಸಾಗರ್ ಮತ್ತಿತರರು ಪಾಲ್ಗೊಂಡಿದ್ದರು.