ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ವರ್ಗಾವಣೆ ದಂಧೆ ನಡೆಸಿರುವ ಬಗ್ಗೆ ತನ್ನ ಬಳಿ ದಾಖಲೆ ಇದ್ದು, ಸ್ಪೀಕರ್ ಒಪ್ಪಿದರೆ ಸದನದಲ್ಲೇ ಪೆನ್ಡ್ರೈವ್ನಲ್ಲಿರುವ ಆಡಿಯೋ ಕೇಳಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ವಿಧಾನಸಭೆ ಅಧಿವೇಶನದ ನಾಲ್ಕನೆ ದಿನವಾದ ಗುರುವಾರದ ಕಲಾಪದಲ್ಲಿ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ವಿರುದ್ಧ ವರ್ಗಾವಣೆ ದಂಧೆ ಆರೋಪ ಮಾಡಿದರು, ಇದಕ್ಕೆ ಬಿಜೆಪಿ ಸದಸ್ಯರು ಬೆಂಬಲ ಸೂಚಿಸಿದರು. ಬಳಿಕ ವಿಧಾನಸಭೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ವಿಧಾನಸಭೆಯಲ್ಲಿ ಇಂಧನ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆರೋಪಿಸುತ್ತಿರುವ ಎಚ್ ಡಿ ಕುಮಾರಸ್ವಾಮಿ ಮತ್ತು ಇಂಧನ ಸಚಿವ ಕೆ ಜೆ ಜಾರ್ಜ್ ಅವರ ನಡುವೆ ತೀವ್ರ ವಾಗ್ವಾದ ನಡೆಯಿತು.
ನನ್ನ ಬಳಿ ಪೆನ್ಡ್ರೈವ್ ಇದೆ, ಅದರಲ್ಲಿ ಸಾಕ್ಷ್ಯವಿದೆ ಎಂದು ಹೇಳುತ್ತಿದ್ದೀರಿ. ನಿಮ್ಮ ಬಳಿ ಯಾವ ಸಾಕ್ಷ್ಯವಿದೆ, ಅದನ್ನು ಸ್ಪೀಕರ್ಗೆ ನೀಡಿ, ಅಕ್ರಮ ನಡೆದಿದೆ ಎನ್ನುವುದು ನಿಜವಾದರೆ, ನಿಮ್ಮ ಬಳಿ ಸಾಕ್ಷಿ ಇದ್ದರೂ ಅದನ್ನು ಬಹಿರಂಗಪಡಿಸದೆ ಮುಚ್ಚಿಡುವುದು ಅಪರಾಧ ಅಲ್ಲವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪೆನ್ಡ್ರೈವ್ನಲ್ಲಿರುವ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ. ಸ್ಪೀಕರ್ ಒಪ್ಪಿಗೆ ಕೊಟ್ಟರೆ ಸದನದಲ್ಲೇ ಪೆನ್ ಡ್ರೈವ್ ಪ್ರದರ್ಶನ ಮಾಡುತ್ತೇನೆ ಎಂದು ತಿರುಗೇಟು ನೀಡಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿಯಿಂದ ಸುಪಾರಿ ಪಡೆದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಆರೋಪ: ಎಂ ಲಕ್ಷ್ಮಣ್ ವಾಗ್ದಾಳಿ