ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕು ತಿಗಡಿ ಗ್ರಾಮದಲ್ಲಿರುವ ಶರಣೆ ಕಲ್ಯಾಣಮ್ಮನ ಐಕ್ಯಸ್ಥಳ ಇಂದು ದುಸ್ಥಿತಿಗೆ ತಲುಪಿದ್ದು, ಆಡಳಿತ ವ್ಯವಸ್ಥೆಯು ಶರಣ ಸಂಸ್ಕೃತಿಗೆ ನೀಡುತ್ತಿರುವ ಅನಾದರವನ್ನು ತೋರಿಸುತ್ತಿದೆ. ಬಸವಣ್ಣನವರ ನೇತೃತ್ವದಲ್ಲಿ ನಡೆದ ಐತಿಹಾಸಿಕ ಕಲ್ಯಾಣ ಕ್ರಾಂತಿಯ ಪ್ರಮುಖ ಶಕ್ತಿಗಳಲ್ಲಿ ಒಬ್ಬರಾಗಿದ್ದ ಶರಣೆ ಕಲ್ಯಾಣಮ್ಮ, ಜಾತಿ ಹಾಗೂ ವರ್ಣಾಶ್ರಮ ವ್ಯವಸ್ಥೆಗೆ ವಿರೋಧವಾಗಿ ಹೋರಾಡಿದ್ದರು. ಆದರೆ ಇಂದು ಅವರು ಐಕ್ಯರಾದ ಕಟ್ಟಡ ನಿರ್ಲಕ್ಷ್ಯಕ್ಕೆ ಒಳಗಾಗಿ ಧೂಳು ಹಿಡಿದಿದೆ.
ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿ ಪುತ್ರ ಶೀಲವಂತನಿಗೂ ಬ್ರಾಹ್ಮಣ ಸಮಾಜದ ಮಧುವರಸನ ಪುತ್ರಿ ಲಾವಣ್ಯವತಿಗೂ ಬಸವಣ್ಣನವರು ಮದುವೆ ಮಾಡಿಸುತ್ತಾರೆ. ಇದು ಕಲ್ಯಾಣದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಗುತ್ತದೆ. ಹೀಗೆ ಸಮಾಜದಲ್ಲಿನ ವರ್ಣಾಶ್ರಮ ಪದ್ದತಿಯ ವಿರುದ್ದದ ಕಲ್ಯಾಣ ಕ್ರಾಂತಿಗೆ ಕರಾಣವಾಗಿರುವ ಕಲ್ಯಾಣಮ್ಮ ಐಕ್ಯ ಸ್ಥಳವು ಇಂದು ದುಸ್ಥತಿಯಲ್ಲಿದ್ದು, ಈ ಕುರಿತು ಹಲವು ಬಾರಿ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಸಹ ದಲಿತ ಸಮುದಾಯದಿಂದ ಬಂದ ಶರಣೆ ಕಲ್ಯಾಣಮ್ಮ ಐಕ್ಯ ಸ್ಥಳವನ್ನು ರಕ್ಷಿಸದಿರುವದು ಇಲ್ಲಿನ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಈ ಕುರಿತು ಶರಣೆ ಕಲ್ಯಾಣಮ್ಮ ಟ್ರಸ್ಟ್ ಕಮಿಟಿಯ ಪಕೀರಪ್ಪ ಡೊಂಕನ್ನವರ ಈ ದಿನ.ಕಾಮ್ ಜೊತೆ ಮಾತನಾಡಿ, “ಅನೇಕ ವರ್ಷಗಳಿಂದ ಕಲ್ಯಾಣಮ್ಮ ಐಕ್ಯ ಸ್ಥಳದ ಸುಧಾರಣೆ ಮಾಡುವಂತೆ ಸ್ಥಳೀಯ ಶಾಸಕರು ಮತ್ತು ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಮುಖ್ಯ ಮಂತ್ರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಕಿತ್ತೂರು ಶಾಸಕರು ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದಾರೆ. ಆದರೆ, ಇದುವರೆಗೂ ಅವರು ಸಹ ಈ ಕುರಿತು ಮುಂದಿನ ಕ್ರಮ ಕೈಗೊಳ್ಳುತ್ತಿಲ್ಲ. ಶೀಘ್ರ ಶಾಸಕ ಬಾಬಾಸಾಹೇಬ್ ಪಾಟೀಲ್ ಅವರು ಕಲ್ಯಾಣಮ್ಮ ಐಕ್ಯ ಸ್ಥಳವನ್ನು ಅಭಿವೃದ್ಧಿ ಪಡಿಸಬೇಕು” ಎಂದು ಮನವಿ ಮಾಡಿದರು.
ಸ್ಥಳಿಯ ಸಂತೋಷ ಮಾತನಾಡಿ, “ಬಸವಣ್ಣನವರ ಕಲ್ಯಾಣ ಕ್ರಾಂತಿಗೆ ಮೌಲ್ಯವಿದ್ದ ಶರಣೆಯ ಸಮಾಧಿಯು ಇಂತಹ ನಿರ್ಲಕ್ಷ್ಯ ಸ್ಥಿತಿಯಲ್ಲಿ ಇರುವುದನ್ನು ನೋಡಲು ನಮಗೆ ನೋವಾಗುತ್ತದೆ. ಕಲ್ಯಾಣದ ಸಾಮಾಜಿಕ ಕ್ರಾಂತಿಗೆ ಕಾರಣರಾದ ಶರಣೆ ಕಲ್ಯಾಣಮ್ಮ ಐಕ್ಯ ಸ್ಥಳವನ್ನು ಅಭಿವೃದ್ದಿ ಪಡಿಸಬೇಕಿದೆ. ಇದು ಕೇವಲ ನಮ್ಮ ಗ್ರಾಮದ ಗೌರವವಲ್ಲ, ಶರಣ ಸಂಸ್ಕೃತಿಯ ಆದರ್ಶಗಳ ಪ್ರತೀಕವೂ ಹೌದು. ಇಲ್ಲಿ ಸೂಕ್ತ ಸ್ಮಾರಕ, ಪ್ರವಾಸಿಗರಿಗೆ ಮಾಹಿತಿ ಫಲಕಗಳು, ಶುದ್ಧ ನೀರು, ಶೌಚಾಲಯ ಹಾಗೂ ಶ್ರದ್ಧಾಪೂರ್ವಕವಾಗಿ ಐಕ್ಯ ದಿನ ಆಚರಣೆಗೆ ವೇದಿಕೆ ಬೇಕು. ಈ ಕುರಿತು ಶಾಸಕರು ಖುದ್ದು ಗಮನಹರಿಸಿ ಮುಂದಿನ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

ಈ ಕುರಿತು ಈ ದಿನ.ಕಾಮ್ ಜತೆ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್ ಮಾತನಾಡಿ, “ಸ್ಥಳೀಯರ ಜತೆ ಚರ್ಚೆ ಮಾಡಲಾಗಿದೆ ಮತ್ತು ಐಕ್ಯ ಸ್ಥಳದ ಭೂಮಿಯ ವಿಚಾರವಾಗಿ ಭೂಮಿಯ ಮಾಲಿಕರ ಜತೆ ಮಾತನಾಡಲಾಗಿದೆ. ಶಾಸಕರ ಅನುದಾನದಲ್ಲಿ ಆದಷ್ಟು ಬೇಗನೆ ಕಲ್ಯಾಣಮ್ಮ ಐಕ್ಯ ಸ್ಥಳವನ್ನು ಅಭಿವೃದ್ದಿ ಪಡಿಸಲಾಗುವುದು” ಎಂದು ತಿಳಿಸಿದರು.
ಶರಣರ ತತ್ವ, ಸಾಮಾಜಿಕ ಸಮಾನತೆ ಮತ್ತು ಮಾನವೀಯ ಮೌಲ್ಯಗಳ ಕುರಿತು ಪ್ರಚಾರ ಮಾಡುವಾಗ, ಅವರು ನೆಲೆಸಿದ ಪವಿತ್ರ ಸ್ಥಳಗಳನ್ನು ನಿರ್ಲಕ್ಷ್ಯ ಮಾಡುವುದೆಂತ? ಶರಣ ಸಂಸ್ಕೃತಿಗೆ ಗೌರವ ನೀಡಲು ಶಬ್ದಗಳಿಂದಷ್ಟೇ ಸಾಲದು. ಕಾರ್ಯರೂಪದಲ್ಲೂ ತೋರಿಸಬೇಕು. ಇದು ಇತಿಹಾಸದ ಗೌರವದ ಜತೆ ಭವಿಷ್ಯದ ಪಾಠವೂ ಹೌದು. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಶೀಘ್ರ ಸ್ಪಂದಿಸಿ ಈ ಐತಿಹಾಸಿಕ ತಾಣಕ್ಕೆ ನ್ಯಾಯ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.


ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು