ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕಾಂತರಾಜ ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷಾ ವರದಿಗೆ ಪ್ರಬಲ ಜಾತಿಗಳಿಂದ ಎಷ್ಟೇ ವಿರೋಧ, ಆಕ್ಷೇಪ ಇದ್ದರೂ ಅದರಲ್ಲಿರುವ ಪ್ರಮುಖ ಶಿಫಾರಸುಗಳ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದ್ಯತೆ ನೀಡಬೇಕು ಎಂದು ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟದ ಸಂಚಾಲಕ ಮಾವಳ್ಳಿ ಶಂಕರ್ ಒತ್ತಾಯಿಸಿದರು.
ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಕಾಂತರಾಜು ವರದಿ ಜಾರಿ ಮಾಡುವುದಾಗಿ ಹೇಳಿಕೊಂಡಿತ್ತು. ಇದೇ ಆಧಾರದ ಮೇಲೆ ಚುನಾವಣೆ ಎದುರಿಸಿ, ಗೆಲುವು ಸಾಧಿಸಿ ಶಾಸಕ, ಸಚಿವರಾದವರು ಇದೀಗ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ” ಎಂದರು.
ಶಾಮನೂರು ಶಿವಶಂಕರಪ್ಪ ಅವರಂತಹ ಹಿರಿಯರು ಕಾಂತರಾಜು ವರದಿ ಅವೈಜ್ಞಾನಿಕವಾಗಿದೆ, ನಮ್ಮ ಸಮಾಜದ ಜನ ಸಂಖ್ಯೆ ಕಡಿಮೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಅತ್ಯಂತ ಬಾಲಿಷ. ಯಾವುದೇ ವರದಿಯಾದರೂ ನೂರಕ್ಕೆ ನೂರು ಪರಿಪೂರ್ಣವಾಗಿರುವುದಿಲ್ಲ. ಶೇ 5-6 ಪ್ರಮಾಣದಷ್ಟು ಆಚೀಚೆ ಇರುತ್ತದೆ. ಆದರೆ, ಅದನ್ನೇ ನೆಪ ಮಾಡಿಕೊಂಡು ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಪಹಲ್ಗಾಮ್ ಉಗ್ರ ದಾಳಿಗೆ ಬಲಿಯಾದವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಅಹಿಂದ ಮುಖಂಡ ಎಸ್ ಎಂ ಪಾಟೀಲ ಗಣಿಹಾರ ಮಾತನಾಡಿ, “ಸಿದ್ದರಾಮಯ್ಯ ಅವರು ಜಾತಿ ವರದಿ ಅನುಷ್ಠಾನಕ್ಕೆ ಮುಂದಾದರೆ ಜಾತಿ ಒಡೆಯುತ್ತಿದ್ದಾರೆ ಎಂದು ಬಿಜೆಪಿ, ಸಂಘ ಪರಿವಾರದವರು ಆರೋಪಿಸುತ್ತಿದ್ದಾರೆ. ಆದರೆ, ಇದೆ ಜಾತಿ ಗಣತಿಯನ್ನು ಪ್ರಧಾನಿ ಮೋದಿ ಅವರು ಮಾಡಲು ಮುಂದಾಗಿರುವುದನ್ನು ಸ್ವಾಗತಿಸುವ ಮೂಲಕ ದ್ವಂದ್ವ ನಿಲುವು ತಾಳಿರುವುದು ಹಾಸ್ಯಾಸ್ಪದ” ಎಂದರು.
ಈ ವೇಳೆ ಸೋಮನಾಥ ಕಳ್ಳಿಮನಿ, ಪ್ರಭುಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.