ಹದಿಮೂರು ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ಆಗಿನ ಬಿಜೆಪಿ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿ ಅವರು ಜಾಮೀನಿನ ಮೇಲೆ ಹೊರಬಂದು, 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಪಕ್ಷದಿಂದ ಗಂಗಾವತಿ ಕ್ಷೇತ್ರದಿಂದ ಗೆದ್ದು ಶಾಸಕರಾಗಿ ಸದ್ಯ ಬಿಜೆಪಿಯಲ್ಲಿದ್ದಾರೆ. ಅವರ ಮೇಲಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ಸಿಬಿಐ ಕೋರ್ಟು ಇಂದು ತೀರ್ಪು ಪ್ರಕಟಿಸಿದೆ. ಜನಾರ್ದನ ರೆಡ್ಡಿ ಅಪರಾಧಿ ಎಂದು ಘೋಷಿಸಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ, ಸಿಬಿಐ ವಿಶೇಷ ನ್ಯಾಯಾಧೀಶರಿಗೇ ಲಂಚ ನೀಡಿ ಜಾಮೀನು ಪಡೆದಿರುವ ಆರೋಪ ಕೇಳಿಬಂದಿತ್ತು.
ಗಣಿ ಹಗರಣದಲ್ಲಿ ಜೈಲು ಪಾಲಾಗಿದ್ದ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಪಡೆಯಲು 2012ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಿಗೆ ಐದು ಕೋಟಿ ರುಪಾಯಿ ಮತ್ತು ನಾಲ್ಕೂವರೆ ಕೋಟಿ ರುಪಾಯಿ ಲಂಚ ನೀಡಲಾಗಿತ್ತು. ಲಂಚ ಪಡೆದು ಜಾಮೀನು ನೀಡಿದ ಪ್ರಕರಣ ಎಂದೇ ಹೆಸರಾಗಿರುವ ಈ ಹಗರಣ ಬಯಲಾಗಿ ಜಾಮೀನು ಆದೇಶವನ್ನು ಹೈಕೋರ್ಟು ರದ್ದು ಮಾಡಿತ್ತು. ಲಂಚ ನೀಡಿದ ರೆಡ್ಡಿ ಸೋದರ ಮತ್ತು ಸಂಗಾತಿಗಳು ಹಾಗೂ ಲಂಚ ಪಡೆದ ನ್ಯಾಯಾಧೀಶರು ಹಾಗೂ ಮಧ್ಯವರ್ತಿಗಳ ಮೇಲೆ ಸಿಬಿಐ ಈಗಾಗಲೆ ಆಪಾದನಾಪಟ್ಟಿ ಸಲ್ಲಿಸಿತ್ತು.
ಲಂಚ ನೀಡಿದ್ದ ನಡೆಯ ಕುರಿತು ಸುಪ್ರೀಮ್ ಕೋರ್ಟು (2015ರ ಫೆಬ್ರವರಿ 19ರಂದು) ಕಿಡಿ ಕಾರಿತ್ತು. ಗಣಿ ಹಗರಣದಲ್ಲಿ ಜೈಲು ಪಾಲಾಗಿದ್ದ ಗಾಲಿ ಜನಾರ್ದನ ರೆಡ್ಡಿ ಅವರನ್ನು ಜಾಮೀನಿನ ಮೇಲೆ ಹೊರಗೆ ತರಲು ಅವರ ತಮ್ಮ ಸೋಮಶೇಖರ ರೆಡ್ಡಿ ಬಹುವಾಗಿ ಶ್ರಮಿಸಿದ್ದರು. 2012ರಲ್ಲಿ ಹೈದರಾಬಾದಿನ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ತಲ್ಲೂರಿ ಪಟ್ಟಾಭಿರಾಮರಾವ್ ಅವರಿಗೆ ಐದು ಕೋಟಿ ರುಪಾಯಿ ಮತ್ತು ಇತರೆ ಮಧ್ಯವರ್ತಿಗಳಿಗೆ ನಾಲ್ಕೂವರೆ ಕೋಟಿ ರುಪಾಯಿ ಲಂಚ ನೀಡಿ ಜಾಮೀನಿನ ಆದೇಶವನ್ನು ಪಡೆದಿದ್ದರು.
ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ನ್ಯಾಯಪೀಠ ರೆಡ್ಡಿ ಸೋದರರ ಈ ನಡೆಯ ಕುರಿತು ಕೆಂಡಾಮಂಡಲ ಆಗಿತ್ತು. ನ್ಯಾಯಾಂಗವನ್ನು ಭ್ರಷ್ಟಗೊಳಿಸುವ ಇಂತಹ ಪ್ರಯತ್ನವನ್ನು ಸಹಿಸುವುದು ಸಾಧ್ಯವಿಲ್ಲ, ಕಡೆಯ ಪಕ್ಷ ನ್ಯಾಯಾಂಗವನ್ನಾದರೂ ಭ್ರಷ್ಟಾಚಾರದ ಕೊಳಕಿನಿಂದ ದೂರ ಇರಿಸಬೇಕಿತ್ತು. ವ್ಯವಸ್ಥೆಯನ್ನೇ ಅಪಹರಿಸುವ ಮತ್ತು ಅದನ್ನು ಬುಡಮೇಲು ಮಾಡುವ ದುಷ್ಟ ಕೃತ್ಯವಿದು. ಟನ್ನುಗಟ್ಟಲೆ ಹಣ ಇರಿಸಿಕೊಂಡಿರುವ ನೀವು ನ್ಯಾಯಧೀಶರಿಗೆ ಆಮಿಷ ಒಡ್ಡುವ ಕೀಳು ಮಟ್ಟಕ್ಕೆ ಇಳಿಯುತ್ತೀರಿ ಎಂದು ಸಿಡಿಮಿಡಿಗೊಂಡಿದ್ದರು.
ನ್ಯಾಯಮೂರ್ತಿಯವರ ಸಾತ್ವಿಕ ಆಕ್ರೋಶವನ್ನು ಎದುರಿಸಿದವರು ಜನಾರ್ದನ ರೆಡ್ಡಿಯವರ ಪರ ನ್ಯಾಯವಾದಿ ವಿಶ್ವನಾಥ ಶೆಟ್ಟಿ. ಹತ್ತು ಕೋಟಿ ರುಪಾಯಿಗಳ ಲಂಚ ಕೊಟ್ಟಿದ್ದೀರಿ…ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಕೂಡ ಎಂಬುದಾಗಿ ನ್ಯಾಯಮೂರ್ತಿಯವರು ಒಂದು ಹಂತದಲ್ಲಿ ಟಿಪ್ಪಣಿ ಮಾಡಿದರು. ನಮ್ಮ ಕಕ್ಷಿದಾರ ಆ ಸಂದರ್ಭದಲ್ಲಿ ಜೈಲಿನ ಒಳಗಿದ್ದರು ಎಂಬುದಾಗಿ ವಿಶ್ವನಾಥ ಶೆಟ್ಟಿ ಅವರು ನೀಡಲು ಯತ್ನಿಸಿದ ಸಮಜಾಯಿಷಿಯನ್ನು ನ್ಯಾಯಮೂರ್ತಿ ಖಾರವಾಗಿ ತುಂಡರಿಸಿದರು. ಹೌದು.. ಜೈಲಿನಲ್ಲಿದ್ದರು…ಅವರನ್ನು ಹೊರಕ್ಕೆ ತರಲೆಂದೇ ಲಂಚ ಕೊಟ್ಟಿದ್ದೀರಿ.
ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಕಳೆದ ಮೇ 11ರಂದು ಜನಾರ್ದನರೆಡ್ಡಿಗೆ ಲಂಚಕ್ಕಾಗಿ ಜಾಮೀನು ನೀಡಿದ ನ್ಯಾಯಾಧೀಶ ಪಟ್ಟಾಭಿರಾಮರಾವ್್ ಅವರನ್ನು ತಾವು ಸಲ್ಲಿಸಿರುವ ಆಪಾದನಾ ಪಟ್ಟಿಯಲ್ಲಿ ಪ್ರಥಮ ಆರೋಪಿಯನ್ನಾಗಿ ಹೆಸರಿಸಿದ್ದರು. ಲಂಚಕ್ಕಾಗಿ ಜಾಮೀನು ನೀಡಲು ಪಟ್ಟಾಭಿರಾಮರಾವ್ ಅವರನ್ನು ಒಪ್ಪಿಸಿ ಮಧ್ಯವರ್ತಿಯ ಪಾತ್ರ ವಹಿಸಿದವರು ಮತ್ತೊಬ್ಬ ನಿವೖತ್ತ ನ್ಯಾಯಾಧೀಶ ಟಿ.ವಿ.ಚಲಪತಿರಾವ್. ಕಾರ್ಪೊರೇಷನ್್ ಬ್ಯಾಂಕಿನಲ್ಲಿ ಐದು ಲಾಕರುಗಳನ್ನು ತೆರೆದು ಅವುಗಳಲ್ಲಿ ಹಣ ಇಟ್ಟು, ಚಾವಿಗಳನ್ನು ಪಟ್ಟಾಭಿರಾಮರಾವ್ ಮಗ ರವಿಚಂದ್ರನಿಗೆ ಒಪ್ಪಿಸಿದವರು ಇದೇ ಚಲಪತಿರಾವ್. ಈತನನ್ನು ಪೊಲೀಸರು ಏಳನೆಯ
ಆರೋಪಿಯನ್ನಾಗಿ ಹೆಸರಿಸಿದ್ದರು.
ಜನಾರ್ದನ ರೆಡ್ಡಿ ಸೋದರ ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಅವರ ಸಮೀಪದ ಸಂಬಂಧಿ ಮತ್ತು ಶಾಸಕ ಟಿ.ಎಚ್.ಸುರೇಶ್ ಬಾಬು ಅವರನ್ನು ಅನುಕ್ರಮವಾಗಿ ಎರಡನೆಯ ಮತ್ತು ನಾಲ್ಕನೆಯ ಆರೋಪಿಗಳನ್ನಾಗಿ ಹೆಸರಿಸಲಾಗಿತ್ತು. ಬಂಧಿಸಿ ವಿಚಾರಣೆ ನಡೆಸಿದ ನಂತರ ನ್ಯಾಯಾಧೀಶ ಪಟ್ಟಾಭಿರಾಮರಾವ್ ಲಂಚಕ್ಕಾಗಿ ಜಾಮೀನು ನೀಡಿದ ತಪ್ಪನ್ನು ಒಪ್ಪಿಕೊಂಡಿದ್ದರು. ಶರ್ಮ ಎಂಬ ಮತ್ತೊಬ್ಬ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಲು ಚಲಪತಿರಾವ್ ಅವರಿಗೆ ಗಾಲಿ ಸೋಮಶೇಖರರೆಡ್ಡಿ ಹಣ ಕೊಟ್ಟರು. ಆದರೆ ಈ ಶರ್ಮ ಯಾರೆಂದು ತನಗೆ ತಿಳಿದಿಲ್ಲ ಎಂದು ಈ ಹಗರಣದಲ್ಲಿ ಮತ್ತೊಬ್ಬ ಮಧ್ಯವರ್ತಿಯ ಪಾತ್ರ ವಹಿಸುವ ಪಿ.ಯಾದಗಿರಿ ಎಂಬಾತ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಆರೋಪಪಟ್ಟಿಯಲ್ಲಿ ಹೇಳಲಾಗಿತ್ತು.
ಅಟ್ಟದ ಮೇಲೆ ಬಚ್ಚಿಟ್ಟಿದ್ದ ಕೋಟಿ ಕೋಟಿ ರುಪಾಯಿ
ಅಣ್ಣ ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ಪಡೆಯಲು ಬಿಜೆಪಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ನೀಡಿದ್ದ ಲಂಚದ ಹಣದ ಪೈಕಿ ಮೂರೂಮುಕ್ಕಾಲು ಕೋಟಿ ರುಪಾಯಿಗಳನ್ನು ಹೈದರಾಬಾದಿನ ದಲ್ಲಾಳಿ ಪಿ.ಯಾದಗಿರಿ ರಾವ್ ತನ್ನ ಮನೆಯ ಪೂಜಾ ಕೊಠಡಿಯ ಅಟ್ಟದ ಮೇಲೆ ಬಚ್ಚಿಟ್ಟಿದ್ದ!
ಲಂಚದ ಹಣ ಪಡೆದು ಜಾಮೀನು ನೀಡಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಟ್ಟಾಭಿರಾಮರಾವ್ ಅವರ ಮಗನಿಗೆ ರೆಡ್ಡಿ ಸೋದರರ ಪರವಾಗಿ ಲಂಚದ ಹಣ ಒಪ್ಪಿಸಿದ್ದ ಮಧ್ಯವರ್ತಿಯೇ ಪಿ.ಯಾದಗಿರಿ ರಾವ್. ಸೋಮಶೇಖರ ರೆಡ್ಡಿ, ದಶರಥ ರಾಮಿರೆಡ್ಡಿ ಹಾಗೂ ಸುರೇಶ್ ಬಾಬು ಅವರಿಂದ 11.05.12 ಮತ್ತು 18.05.12ರ ನಡುವೆ ಒಟ್ಟು 9.5 ಕೋಟಿ ರುಪಾಯಿಗಳನ್ನು ಕಂತುಗಳಲ್ಲಿ ತಾನು ಪಡೆದದ್ದಾಗಿ ಆತ ತನಿಖೆಯ ಸಂದರ್ಭದಲ್ಲಿ ಒಪ್ಪಿಕೊಂಡಿದ್ದಾನೆ.
ಉಳಿದ ಆರೋಪಿಗಳಿಗೆ ಹಂಚಿ ಉಳಿದ ತನ್ನ ಪಾಲಿನ ಒಂದಷ್ಟು ಹಣವನ್ನು ತನ್ನ ಮನೆಯಲ್ಲಿ ಅವಿಸಿಟ್ಟಿದ್ದಾಗಿ ಹೇಳಿದ ಯಾದಗಿರಿ ರಾವ್, ಪೊಲೀಸರನ್ನು ತನ್ನ ಮನೆಗೆ ಕರೆದೊಯ್ದು ಸ್ಥಳವನ್ನೂ ತೋರಿಸಿದ್ದಾನೆ. ಮೂರೂ ಮುಕ್ಕಾಲು ಕೋಟಿ ರುಪಾಯಿಗಳನ್ನು ಆತನ ಮನೆಯ ಪೂಜಾ ಕೋಣೆಯ ಅಟ್ಟದಿಂದ ವಶಪಡಿಸಿಕೊಂಡ ಪೊಲೀಸರಿಗೆ ನಾಲ್ಕು ಸೆಲ್ ಫೋನ್‌ಗಳು ಹಾಗೂ ಒಂದು
ಲ್ಯಾಪ್‌ಟಾಪ್ ಕೂಡ ದೊರೆತಿವೆ. ಅವುಗಳನ್ನೂ ವಶಪಡಿಸಿಕೊಂಡಿದ್ದರು.