ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳ ರಕ್ಷಣೆಗೆ ಕೇಂದ್ರ ಸರಕಾರ ಮಂಗಳವಾರದಿಂದ (ಮೇ 6) ಹೊಸದಾಗಿ ನಗದು ರಹಿತ ಚಿಕಿತ್ಸೆ ಯೋಜನೆಯನ್ನು ಜಾರಿಮಾಡಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ನಗದುರಹಿತ ಚಿಕಿತ್ಸೆ ನೀಡುವ ಯೋಜನೆ ಇದಾಗಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಈ ಯೋಜನೆಯಡಿಯಲ್ಲಿ ಅಪಘಾತ ಸಂಭವಿಸಿದ ದಿನಾಂಕದಿಂದ ಏಳು ದಿನಗಳವರೆಗೆ ಗಾಯಾಳು ಕೇಂದ್ರ ಸರಕಾರ ಗುರುತಿಸಿದ ಆಸ್ಪತ್ರೆಯಲ್ಲಿ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ನಗದು ರಹಿತ ಚಿಕಿತ್ಸೆ ಪಡೆಯಲು ಅರ್ಹತೆ ಹೊಂದಿರುತ್ತಾರೆ.
ಅಧಿಸೂಚನೆಯ ಪ್ರಕಾರ ರಸ್ತೆ ಅಪಘಾತ ಸಂತ್ರಸ್ತರಿಗೆ ನಗದು ರಹಿತ ಚಿಕಿತ್ಸೆ ಯೋಜನೆ-2025 ಮೇ 5ರಂದಿಲೇ ಜಾರಿಗೆ ಬಂದಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕಳೆದ ಮಾರ್ಚ್ 14, 2024 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ನಗದು ರಹಿತ ಚಿಕಿತ್ಸೆ ನೀಡುವ ಪೈಲಟ್ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು.
ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಈ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು, ಇದು ಪೊಲೀಸ್, ಆಸ್ಪತ್ರೆಗಳು ಮತ್ತು ರಾಜ್ಯ ಆರೋಗ್ಯ ಇಲಾಖೆಗಳ ಅಧಿಕಾರಿಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತದೆ.
ರಸ್ತೆ ಅಪಘಾತ ಸಂಭವಿಸಿದಾಗ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಹಲವು ಮಂದಿ ಸಾವಿಗೀಡಾಗುತ್ತಿದ್ದಾರೆ. ಈ ಸಾವುಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಈ ಯೋಜನೆಯ ಗುರಿಯಾಗಿದೆ. ರಸ್ತೆ ಅಪಘಾತಕ್ಕಿಡಾದ ಯಾವುದೇ ವ್ಯಕ್ತಿ, ಈ ಯೋಜನೆಯ ನಿಬಂಧನೆಗಳಿಗೆ ಅನುಸಾರವಾಗಿ ನಗದು ರಹಿತ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.