ಒಳಮೀಸಲಾತಿ ಹಿನ್ನಲೆ ಸರಿಯಾದ ದತ್ತಾಂಶ ಸಂಗ್ರಹಕ್ಕೆ ಜನಗಣತಿ ಆರಂಭವಾಗಿದ್ದು ಸಾರ್ವಜನಿಕರು ಸಹಕರಿಸಿ ಗಣತಿದಾರರಿಗೆ ಸೂಕ್ತ ದಾಖಲೆ ಜೊತೆಗೆ ಸಮರ್ಪಕ ಮಾಹಿತಿ ನೀಡಿ ಗಣತಿ ಯಶಸ್ವಿಗೆ ಸಹಕರಿಸಿ ಎಂದು ತಹಶೀಲ್ದಾರ್ ಆರತಿ.ಬಿ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಮೊಬೈಲ್ ಮೂಲಕ 42 ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿ ಮುಖ್ಯ ಜಾತಿ ಹಾಗೂ ಮೂಲ ಜಾತಿ ಹೆಸರನ್ನು ಯಾವುದೇ ಮುಜುಗರ ಇಲ್ಲದೆ ನಮೂದಿಸಿ ವಿವರಣೆ ನೀಡುವಂತೆ ತಾಲ್ಲೂಕಿನ ಜನರಲ್ಲಿ ಮನವಿ ಮಾಡಿದರು.

ಗುಬ್ಬಿ ವಿಧಾನಸಭಾ ಕ್ಷೇತ್ರದ 198 ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ 48 ಮತಗಟ್ಟೆ ಸೇರಿದಂತೆ ತಾಲ್ಲೂಕಿನ 246 ಮತಗಟ್ಟೆಯ ವ್ಯಾಪ್ತಿಯಲ್ಲಿ ಗಣತಿ ಆರಂಭಿಸಲಾಗಿದೆ. ಈ ಕಾರ್ಯಕ್ಕೆ 297 ಗಣತಿದಾರರು ಹಾಗೂ 27 ಮೇಲ್ವಿಚಾರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಜೊತೆಗೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಸಹ ಸದಸ್ಯರಾಗಿ ತಹಶೀಲ್ದಾರ್, ತಾಪಂ ಇಓ, ಬಿಇಓ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಿದ್ದಾರೆ ಎಂದರು.
ಇದೇ ತಿಂಗಳ 17 ರವರೆಗೆ ಬೆಳಿಗ್ಗೆ 6.30 ರಿಂದ ಸಂಜೆ 6.30 ರವರೆಗೆ ನಿರಂತರ ನಡೆಯುವ ಗಣತಿಗೆ ಸಾಕಷ್ಟು ಸಮಯ ಬೇಕಿದೆ. ಒಂದು ಕುಟುಂಬ ಸದಸ್ಯರ ಎಲ್ಲಾ ಮಾಹಿತಿ ಅವಶ್ಯವಿರುವ ಕಾರಣ ಸಮಯ ಬೇಕಿದೆ. ಮೇ 18 ರಿಂದ 21 ರವರೆಗೆ ಆಯಾ ಮತಗಟ್ಟೆಯಲ್ಲಿ ಬಿಟ್ಟು ಹೋದ ಸದಸ್ಯರ ಮಾಹಿತಿ ನೋಂದಾಯಿಸಲು ಅವಕಾಶ ನೀಡಲಾಗಿದೆ. 18 ರಿಂದ 23 ರವರೆಗೆ ಆನ್ ಲೈನ್ ಮೂಲಕ ಸಹ ತಮ್ಮ ಮಾಹಿತಿ ರವಾನಿಸಿ ಗಣತಿಗೆ ಸೇರಿಸಬಹುದಾಗಿದೆ ಎಂದು ತಿಳಿಸಿದ ಅವರು ಗಣತಿದಾರರ ಸಮಯ ಅತ್ಯಮೂಲ್ಯವಾದ ಕಾರಣ ಎಲ್ಲಾ ದಲಿತ ಬಂಧುಗಳು ತನ್ನ ದಾಖಲೆ, ಮಾಹಿತಿಯನ್ನು ಬೇಗನೇ ನೀಡಿ ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಪಂ ಇಓ ಶಿವಪ್ರಕಾಶ್, ಬಿಇಓ ನಟರಾಜ್, ಎಸಿಡಿಪಿಓ ಕೃಷ್ಣಮೂರ್ತಿ, ಬಿಆರ್ ಸಿ ಮಧುಸೂದನ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ ಇತರರು ಇದ್ದರು.