ನಗರ ಸುಂದರೀಕಣ ಮತ್ತು ಪ್ರವಾಸೋದ್ಯಮಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಬಳ್ಳಾರಿ ನಗರದ ಗಡಗಿ ಚೆನ್ನಪ್ಪ (ರಾಯಲ್) ಸರ್ಕಲ್‌ನಲ್ಲಿ ಲೆಬನಾನ್ ದೇಶದ ಮಾದರಿಯಲ್ಲೇ ಸುಮಾರು ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಲಾಕ್ ಟವರ್ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಬಳ್ಳಾರಿ ಜಿಲ್ಲೆ ವಿಭಜನೆ ಆಗಿ ಹೊಸದಾಗಿ ವಿಜಯನಗರ ಜಿಲ್ಲೆಯಾದ ಬಳಿಕ ಬಳ್ಳಾರಿಯಲ್ಲಿ ಪ್ರವಾಸೋದ್ಯಮ, ವ್ಯಾಪಾರ ವಹಿವಾಟು ಉತ್ತೇಜನಕ್ಕೆ ಕ್ಲಾಕ್ ಟವರ್ ಅನ್ನು ಬಳ್ಳಾರಿ ಅಸ್ಮಿತೆಯನ್ನಾಗಿ ಮಾಡಲು ಕ್ಲಾಕ್ ಟವರ್‌ಗೆ ಚಾಲನೆ ನೀಡಲಾಯಿತು.
ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿನ ರಾಯಲ್ ವೃತ್ತದಲ್ಲಿನ ʼಕ್ಲಾಕ್ ಟವರ್ʼ ನಿರ್ಮಾಣ ಕಾಮಗಾರಿಗೆ ಮಾಜಿ ಸಚಿವ ಬಿ ಶ್ರೀರಾಮುಲು 2022ರ ಆಗಸ್ಟ್ 15ರಂದು ಭೂಮಿ ಪೂಜೆ ನೆರವೇರಿಸಿದ್ದರು. ಶರವೇಗದಲ್ಲಿ ಕಾಮಗಾರಿಯೂ ನಡೆಯುತ್ತಿತ್ತು. ಇದೀಗ 7 ಕೋಟಿ ವೆಚ್ಚದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ರಾಯಲ್ ಗಡಗಿ ಚನ್ನಪ್ಪ ಸರ್ಕಲ್ ನಗರದಲ್ಲಿನ ಮೋತಿ (ಗವಿಯಪ್ಪ ವೃತ್ತ, ಸಂಗಮ್ ಇಂದಿರಾಗಾಂಧಿ ವೃತ್ತಿ) ದುರ್ಗಮ್ಮ ಗುಡಿ, ಬೆಂಗಳೂರು ರೋಡ್ ನಗರದ ಮುಂತಾದ ಪ್ರಮುಖ ವೃತ್ತಗಳಿಗೆ ಸಂಪರ್ಕವಾಗಿದೆ.
ಕ್ಲಾಕ್ ಟವರ್ ವಿಶೇಷತೆ
ಲೆಬನಾನ್ ದೇಶದ ಗಡಿಯಾರದ ಮಾದರಿಯಲ್ಲೇ ಅಂದಾಜು ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಲಾಕ್ ಟವರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಹಾಗೂ ಈ ಕ್ಲಾಕ್ ಟವರ್‌ಗೆ ಲಿಫ್ಟ್, ಮೆಟ್ಟಿಲು ವ್ಯವಸ್ಥೆ ಮಾಡಲಾಗಿದೆ. ಗೋಪುರ 120 ಅಡಿ ಎತ್ತರ 16 ಮೀಟರ್ ರೆಡಿಯಾಸ್ ಇದೆ.
ಕ್ಲಾಕ್ ಟವರ್ ಇತಿಹಾಸ
1946ರಲ್ಲಿ ಬಳ್ಳಾರಿಯ ಗಡಗಿ ಚನ್ನಪ್ಪ ಸರ್ಕಲ್ ನಲ್ಲಿ ಆಂಧ್ರ- ಕರ್ನಾಟಕ ಸೌಹಾರ್ದತೆ ಸಂಕೇತವಾಗಿ ಗಡಿಯಾರ ಗೋಪುರ ನಿರ್ಮಿಸಲಾಗಿತ್ತು. ಆದರೆ 2008ರಲ್ಲಿ ದುಷ್ಕರ್ಮಿಗಳು ರಾತೋರಾತ್ರಿ ಧ್ವಂಸಗೊಳಿಸಿದ್ದರು. ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅದೇ ಸ್ಥಳದಲ್ಲಿ ಕ್ಲಾಕ್ ಟವರ್ ನಿರ್ಮಿಸಿತ್ತು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಸ್ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳ ಆಕ್ರೋಶ
ಸರ್ಕಾರದಿಂದ ಅನುದಾನ ತಡೆ
“5 ಕೋಟಿ ಅನುದಾನ ಕ್ಲಾಕ್ ಟವರ್ ನಿರ್ಮಾಣಕ್ಕೆ, 2 ಕೋಟಿ ಅನುದಾನ ರಸ್ತೆ ಕಾಮಗಾರಿಗೆ ನೀಡಲಾಗಿದೆ. ಕ್ಲಾಕ್ ಟವರ್ ನಿರ್ಮಾಣ ಕಾಮಗಾರಿಗೆ ಈಗಾಗಲೇ 1.80 ಕೋಟಿ ಅನುದಾನ ವೆಚ್ಚವಾಗಿದೆ. 72 ಅಡಿ ಗೋಪುರ ಎತ್ತರ ಈಗಾಗಲೇ ನಿರ್ಮಾಣವಾಗಿದೆ. ಉಳಿದ ಅನುದಾನ ಸರ್ಕಾರದಿಂದ ಬಿಡುಗಡೆ ಆಗಿಲ್ಲ” ಎಂದು ಬಳ್ಳಾರಿ ಸಹಾಯಕ ಎಂಜಿನಿಯರ್ ಎಂ ಗವಿಯಪ್ಪ ತಿಳಿಸಿದ್ದಾರೆ.