ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ಎಂಬ ಹೆಸರಿನ ಕಾರ್ಯಾಚರಣೆ ಆರಂಭಿಸಿದೆ.
ಈ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿವೆ ಎಂದು ಭಾರತದ ರಕ್ಷಣಾ ಸಚಿವಾಲಯ ತಿಳಿಸಿದೆ.
‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ಭಾರತೀಯ ಸೇನಾ ಕಾರ್ಯಾಚರಣೆಯ ಪರಿಣಾಮವಾಗಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಸ್ಫೋಟಗಳ ವರದಿಗಳು ಬಂದಿವೆ ಎಂದು ರಕ್ಷಣಾ ಸಚಿವಾಲಯ ದೃಢಪಡಿಸಿದ ಸ್ವಲ್ಪ ಸಮಯದ ನಂತರ, ಭಾರತೀಯ ಸೇನೆಯು ಎಕ್ಸ್ ಪೋಸ್ಟ್ನಲ್ಲಿ “ನ್ಯಾಯ ದೊರಕಿತು. ಜೈ ಹಿಂದ್!” ಎಂದು ತಿಳಿಸಿದೆ.
ಭಾರತೀಯ ಸೇನೆಯು ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿದೆ.
ಆಪರೇಷನ್ ಸಿಂಧೂರ್ ಅನ್ನು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ಜಂಟಿಯಾಗಿ ನಡೆಸಿವೆ. ಐಎಎಫ್ ಫೈಟರ್ ಜೆಟ್ಗಳು ವೈಮಾನಿಕ ದಾಳಿ ನಡೆಸಿದರೆ, ಸೇನೆಯು ಕ್ಷಿಪಣಿಗಳನ್ನು ಉಡಾಯಿಸಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಈ ದಾಳಿಯಲ್ಲಿ ಹಲವು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಬೆಳಗ್ಗೆ ರಕ್ಷಣಾ ಸಚಿವಾಲಯ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದು, ಈ ಬಗ್ಗೆ ನಿಖರ ಮಾಹಿತಿ ಸಿಗಲಿದೆ.
