ಪ್ರಸ್ತುತ ರಾಜ್ಯ ಬಜೆಟ್‌ನಲ್ಲಿ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘ ರಾಯಚೂರು ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ ಪ್ರತಿಭಟನೆ ನಡೆಸಿದರು.
“ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ 27,000 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 800 ಮಂದಿ ಪ್ರೌಢಶಾಲಾ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಶ್ಲಾಘನೀಯ. ಅತಿಥಿ ಶಿಕ್ಷಕರಿಗೆ ಖಾಯಂ ನೇಮಕ ಮಾಡಿ ಕನಿಷ್ಠ ವೇತನ, ಸಿಎಲ್ ರಜೆ ನೀಡಬೇಕು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸಿ ಮೊದಲ ಆದ್ಯತೆ ನೀಡಬೇಕು” ಎಂದು ಒತ್ತಾಯಿಸಿದರು.
“ಶಿಕ್ಷಕರ ವರ್ಗಾವಣೆ ಹಾಗೂ ಖಾಯಂ ನೇಮಕವಾದ ಸಂದರ್ಭದಲ್ಲಿ ಅತಿಥಿ ಶಿಕ್ಷಕರನ್ನು ಕೈಬಿಡುವ ಬದಲು ಶಿಕ್ಷಕರ ಕೊರತೆ ಇರುವ ಶಾಲೆಗೆ ವರ್ಗಾಯಿಸಬೇಕು. ಅತಿಥಿ ಶಿಕ್ಷಕರ ನೇಮಕಾತಿಯಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ವಾರ್ಷಿಕ ಶೇ.5ರಷ್ಟು ಕೃಪಾಂಕ ನೀಡಬೇಕು. ಜೊತೆಗೆ ಪ್ರತಿ ತಿಂಗಳು ವೇತನ ನೀಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನೇಮಕಾತಿ ಆದೇಶಕ್ಕೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಮನವಿ
ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಜೆ ಕೆ ನಾಗರಾಜ, ಉಪಾಧ್ಯಕ್ಷೆ ಸಲ್ಮಾ ಖಾನಂ, ರಾಮಲಿಂಗಮ್ಮ, ಶಿವಲೀಲಾ, ವಿದ್ಯಾಲಕ್ಷ್ಮಿ ಇದ್ದರು.