‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯಲ್ಲಿ ನಿಷೇಧಿತ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ನ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಲಾಗಿದ್ದು, ಭಾರತೀಯ ವಾಯುಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಒಂಬತ್ತು ಗುಪ್ತ ತಾಣಗಳನ್ನು ಧ್ವಂಸಗೊಳಿಸಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ನಿಖರವಾದ ಕಾರ್ಯಾಚರಣೆಯಲ್ಲಿ ಗುರಿಯಾಗಿಸಲಾದ ತಾಣಗಳಲ್ಲಿ ಜೈಶ್-ಎ-ಮೊಹಮ್ಮದ್‌ನ ಬಹವಾಲ್ಪುರ್‌ನ ಮರ್ಕಜ್ ಸುಭಾನ್ ಅಲ್ಲಾ, ತೆಹ್ರಾ ಕಲನ್‌ನ ಸರ್ಜಾಲ್, ಕೋಟ್ಲಿಯ ಮರ್ಕಜ್ ಅಬ್ಬಾಸ್ ಮತ್ತು ಮುಜಾಫರಾಬಾದ್‌ನ ಸೈಯದ್ನಾ ಬಿಲಾಲ್ ಶಿಬಿರ ಸೇರಿವೆ.
ಲಷ್ಕರ್-ಎ-ತೈಬಾದ ಮುರ್ದಿಕೆಯ ಮರ್ಕಜ್ ತೈಬಾ, ಬರ್ನಾಲಾದ ಮರ್ಕಜ್ ಅಹ್ಲೆ ಹದೀಸ್ ಮತ್ತು ಮುಜಾಫರಾಬಾದ್‌ನ ಶ್ವಾವಾಯ್ ನಲ್ಲಾ ಶಿಬಿರ ಹಾಗೂ ಹಿಜ್ಬುಲ್ ಮುಜಾಹಿದ್ದೀನ್‌ನ ಕೋಟ್ಲಿಯ ಮಕಾಜ್ ರಹೀಲ್ ಶಾಹಿದ್ ಮತ್ತು ಸಿಯಾಲ್ಕೋಟ್‌ನ ಮೆಹಮೂನಾ ಜೋಯಾ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಲಾಗಿದೆ.
ಭಾರತವು ಮುರಿಡ್ಕೆಯಲ್ಲಿರುವ ಲಷ್ಕರೆ ಅಡಗುತಾಣವನ್ನು ನಾಶಪಡಿಸಿದೆ ಎಂದು ಹೇಳಿಕೆ ನೀಡಿದೆ. ಈ ದಾಳಿಯಲ್ಲಿ ಲಷ್ಕರ್ ಮತ್ತು ಜೈಶ್‌ನ ಅನೇಕ ಉನ್ನತ ಕಮಾಂಡರ್‌ಗಳು ಸಾವನ್ನಪ್ಪಿದ್ದಾರೆ. ಆದರೆ, ಈ ದಾಳಿಯಲ್ಲಿ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ಸಾವನ್ನಪ್ಪಿದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಈ ಸುದ್ದಿ ಓದಿದ್ದೀರಾ? ಭಾರೀ ಮಿಲಿಟರಿ ಕಾರ್ಯಾಚರಣೆಗೆ ಉಭಯ ದೇಶಗಳಿಂದ ತಯಾರಿ: ಯುದ್ಧದ ನಂತರ ಆಗುವ ಅನಾಹುತಗಳೇನು?
ಭಾರತದ ದಾಳಿಯ ನಂತರ, ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ತುರ್ತು ಸಭೆ ಕರೆದಿದ್ದು, ದಾಳಿಯನ್ನು ದೃಢಪಡಿಸಿದ್ದಾರೆ. ಭಾರತ ನಮ್ಮ ಮೇಲೆ ಯುದ್ಧ ಹೇರಿದೆ ಎಂದ ಅವರು, ನಮಗೆ ಪ್ರತೀಕಾರ ತೀರಿಸಿಕೊಳ್ಳುವ ಹಕ್ಕಿದೆ ಎಂದಿದ್ದಾರೆ.
ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸಿರುವ ಕುರಿತು ಮಾಹಿತಿ ಬೆಳಗಿನ ಜಾವ ಸುಮಾರು 1 ಗಂಟೆ ಸುಮಾರಿಗೆ ಹೊರಬಂದಿದೆ. ಮಂಗಳವಾರ ಮಧ್ಯರಾತ್ರಿಯ ನಂತರ ಮುಜಫರಾಬಾದ್ ನಗರದ ಸುತ್ತಮುತ್ತಲಿನ ಪರ್ವತಗಳ ಬಳಿ ಹಲವಾರು ದೊಡ್ಡ ಸ್ಫೋಟಗಳು ಕೇಳಿಬಂದವು ಎಂದು ಹಲವಾರು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಫೋಟದ ನಂತರ ನಗರದಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿತು.
ಇದಾದ ಸ್ವಲ್ಪ ಸಮಯದ ನಂತರ, ಪಾಕಿಸ್ತಾನ ಸೇನೆಯಿಂದ ಒಂದು ಹೇಳಿಕೆ ಬಂದಿತು. ಭಾರತದ ಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಅವರು ಹೇಳಿದರು.
ಮೂಲಗಳ ಪ್ರಕಾರ, ಇಂದು ಶ್ರೀನಗರ ವಿಮಾನ ನಿಲ್ದಾಣದಿಂದ ಯಾವುದೇ ಪ್ರಯಾಣಿಕ ವಿಮಾನಗಳು ಕಾರ್ಯನಿರ್ವಹಿಸುವುದಿಲ್ಲ. ಇಂದಿನ ಎಲ್ಲ ವಿಮಾನಗಳನ್ನು ರದ್ದುಪಡಿಸಲಾಗಿದೆ. ಏತನ್ಮಧ್ಯೆ, ಇಂಡಿಗೊ ಏರ್ಲೈನ್ಸ್ ಕೂಡ ಪ್ರಯಾಣ ಪ್ರಕಟಣೆ ಹೊರಡಿಸಿದೆ. ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾಕ್ಕೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ಇಂಡಿಗೋ ಅಧಿಕೃತ ಪ್ರಕಟಣೆ ತಿಳಿಸಿದೆ.