ಇತ್ತೀಚಿನ ದಿನಗಳಲ್ಲಿ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರುಗಿಸುವ ಮತ್ತು ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಆರೋಪಿಗಳು ಯಾರೆಂಬುದರ ಗುರುತಿನ ಮೇಲೆ ವಿನಾಯಿತಿ ನೀಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಈಗಲೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ.
ಕೊಪ್ಪಳ ಜಿಲ್ಲಾ ಕೇಂದ್ರದಿಂದ ಏಳು ಕಿಮೀ ದೂರದಲ್ಲಿರುವ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿದ್ದು, ದಲಿತರು ಕ್ಷೌರ ಮಾಡುವಂತೆ ಕೇಳಿದ್ದರಿಂದ ಕ್ಷೌರದ ಅಂಗಡಿಗಳನ್ನೇ ಬಂದ್ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.
‘ಎಲ್ಲರಂತೆ ನಮಗೂ ಕ್ಷೌರ ಮಾಡಬೇಕು’ ಎಂದು ಗ್ರಾಮದ ದಲಿತ ಯುವಕರು ಕೇಳಿದ್ದು, ಅದಕ್ಕೆ ಮೊದಲು ಕ್ಷೌರಿಕರು ನಿರಾಕರಿಸಿದ್ದರು. ಎರಡು ತಿಂಗಳ ಹಿಂದೆ ಇದು ಜಟಾಪಟಿಗೂ ಕಾರಣವಾಗಿತ್ತು. ಆಗ ಮಧ್ಯಪ್ರವೇಶಿಸಿದ್ದ ಪೊಲೀಸರು ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿ ಎಲ್ಲರಿಗೂ ಕಡ್ಡಾಯವಾಗಿ ಕ್ಷೌರ ಮಾಡಬೇಕೆಂದು ಸೂಚಿಸಿದ್ದಾಗ ಒಪ್ಪಿಕೊಂಡಿದ್ದರು. ಈಗ ಮತ್ತೆ ದಲಿತರನ್ನು ಹೊರತುಪಡಿಸಿ ಉಳಿದವರ ಮನೆ ಮನೆಗೆ ಮಾತ್ರ ಹೋಗಿ ಕ್ಷೌರ ಮಾಡುತ್ತಿದ್ದಾರೆಂದು ಗ್ರಾಮಸ್ಥರು ದೂರಿದ್ದರು.
“ಮುದ್ದಾಬಳ್ಳಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದ ಘಟನೆ ತಿಳಿದ ಬಳಿಕ ಇಒ ಮತ್ತು ತಹಶೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ತಿಳಿಹೇಳಿದ್ದು, ಶಾಂತಿಸಭೆ ನಡೆಸಲಾಗಿದೆ” ಎಂದು ಕೊಪ್ಪಳ ಗ್ರಾಮಾಂತರ ಪಿಎಸ್‌ಐ ಈ ದಿನ.ಕಾಮ್‌ಗೆ ಮಾಹಿತಿ ನೀಡಿದರು.
“ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದ ದಲಿತ ಯುವಕನ ತಲೆಯಲ್ಲಿ ಸರ್ಪದ ಹುಣ್ಣುಗಳಾಗಿದ್ದು, ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎನ್ನುವ ನಿಟ್ಟಿನಲ್ಲಿ ಕ್ಷೌರ ಮಾಡುವುದಿಲ್ಲವೆಂದು ಹೇಳಿದ್ದಾರೆ. ಅದಕ್ಕಾಗಿ ಅವರು ನಾವು ದಲಿತರು ಎನ್ನುವ ಕಾರಣಕ್ಕೆ ನಮಗೆ ಕ್ಷೌರ ಮಾಡುತ್ತಿಲ್ಲವೆಂದು ದೂರಿದ್ದರು. ಇದೀಗ ಎಲ್ಲವನ್ನೂ ಸರಿಪಡಿಸಿ, ಎಚ್ಚರಿಕೆ ನೀಡಿ ಬಂದಿದ್ದೇವೆ. ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದೇವೆ” ಎಂದು ಹೇಳಿದರು.

ಒಳಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, “ಕೊಪ್ಪಳದಲ್ಲಿ ಇಂತಹ ಪ್ರಕರಣಗಳು ಪದೇ ಪದೆ ನಡೆಯುತ್ತಲೇ ಇರುತ್ತವೆ. ಅಂತದ್ದೇ ಪ್ರಕರಣ ಈಗಲೂ ನಡೆದಿದ್ದು, ಕ್ಷೌರಕ್ಕೆ ನಿರಾಕರಿಸಿದ್ದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುದ್ದಾಬಳ್ಳಿ ಗ್ರಾಮಕ್ಕೆ ಬಂದು ಶಾಂತಿ ಸಭೆ ನಡೆಸಿದ್ದಾರೆ. ನಾವೂ ಕೂಡ ಜಾಗೃತಿ ಅಭಿಯಾನ ಕೈಗೊಂಡಿದ್ದೇವೆ” ಎಂದು ಹೇಳಿದರು.
“ಇದೀಗ ಸವಿತಾ ಸಮಾಜದವರೇ ಮುಂದೆ ಬಂದಿದ್ದು, ನಾವು ಒಗ್ಗೂಡಿಕೊಂಡು ಸೌಹಾರ್ದದಿಂದ ಬದುಕೋಣವೆಂದು ಕೇಳಿಕೊಂಡಿದ್ದಾರೆ. ಎಲ್ಲರೂ ಒಗ್ಗೂಡಿ ಇದೀಗ ಅಭಿಯಾನ ನಡೆಸುತ್ತಿದ್ದೇವೆ. ಕೆಲವು ಪಟ್ಟಭದ್ರ ಹಿತಾಸಕ್ತಿ ಜನರು, ಸವಿತಾ ಸಮಾಜದವರಿಗೆ ಬೆದರಿಕೆ ಹಾಕುತ್ತಿದ್ದು, ದಲಿತರಿಗೆ ಕ್ಷೌರ ಮಾಡಿದರೆ ನೀವು ಈ ಊರಿನಲ್ಲಿ ನೆಮ್ಮದಿಯಿಂದ ಬದುಕಲು ಆಗುವುದಿಲ್ಲವೆಂದು ಹೆದರಿಸುತ್ತಿದ್ದಾರೆಂದು ತಿಳಿದುಬಂದಿದೆ. ಹಾಗಾಗಿ ಸರ್ಕಾರ, ಜಿಲ್ಲಾಡಳಿತ ಅರಿವು ಮೂಡಿಸುವ ಮೂಲಕ ನೆರವು ನೀಡಬೇಕು” ಎಂದು ಒತ್ತಾಯಿಸಿದರು.
“ಯಾವುದೇ ಜನಪ್ರತಿನಿಧಿಗಳು ಈ ಕುರಿತು ಮಾತನಾಡುವುದಿಲ್ಲ. ಅವರು ಮುಂದೆ ನಿಂತು ಈ ಕುರಿತು ಕೇಳಿದರೆ, ಎಚ್ಚರಿಸಿದರೆ ಮತಬ್ಯಾಂಕ್ ಕಳೆದುಕೊಳ್ಳುತ್ತೇವೆಂಬ ಭಯವಿರುತ್ತದೆ. ಹಾಗಾಗಿ ಅವರು ಇಂತಹ ವಿಷಯಗಳಿಗೆ ತಲೆ ಹಾಕುವುದಿಲ್ಲ. ಯಾವುದೇ ರೀತಿ ಜಾಗೃತಿಯನ್ನೂ ಮೂಡಿಸುವುದಿಲ್ಲ. ಇದೀಗ ಜಿಲ್ಲಾಡಳಿತವನ್ನು ಬಡಿದೆಚ್ಚರಿಸಿದ್ದೇವೆ. ಇಂತಹ ಅಸ್ಪೃಶ್ಯತೆ ಪ್ರಕರಣಗಳು ನಡೆದಾಗ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಶಾಂತಿಸಭೆಗಳನ್ನು ಮಾಡುತ್ತಾರೆ ಹೋಗುತ್ತಾರೆ. ಆದರೆ ಅಸ್ಪೃಶ್ಯತೆ ಆಚರಣೆ ತಡೆಗೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಮುಂದಾಗಬೇಕು. ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು. ಇಂತಹ ಕಾರ್ಯಗಳು ನಡೆಯುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ
ಮುದ್ದಾಬಳ್ಳಿ ಗ್ರಾಮದಲ್ಲಿ ಎರಡು ಕ್ಷೌರದ ಅಂಗಡಿಗಳು ಹಾಗೂ ಮೂರ್ನಾಲ್ಕು ಹೋಟೆಲ್‌ಗಳು ಇವೆ. ಹೋಟೆಲ್‌ಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ ಬಳಿಕ ಅಲ್ಲಿ ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ಈಗ ಗ್ರಾಮದ ಕ್ಷೌರದ ಅಂಗಡಿಗಳನ್ನು ಬಂದ್ ಮಾಡಿದ್ದರಿಂದ ಅಲ್ಲಿನ ದಲಿತರು ಕೊಪ್ಪಳಕ್ಕೆ ಬಂದು ಕ್ಷೌರ ಮಾಡಿಸಿಕೊಳ್ಳುತ್ತಿದ್ದರು.
“ಮುದ್ದಾಬಳ್ಳಿ ಗ್ರಾಮದಲ್ಲಿ ಎರಡು ಕ್ಷೌರದ ಅಂಗಡಿಗಳಷ್ಟೇ ಇವೆ. ಅದರಲ್ಲಿ ಒಬ್ಬರಿಗೆ ಅನಾರೋಗ್ಯವಿದೆ. ಇನ್ನೊಬ್ಬರು ಹೊಲದ ಕೆಲಸ ಮಾಡುತ್ತಿದ್ದಾರೆ. ದಲಿತರಿಗೆ ಕ್ಷೌರ ನಿರಾಕರಿಸಿಲ್ಲ” ಎನ್ನುವ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್ ಅರಸಿದ್ಧಿಯವರು ಸಮರ್ಥನೆ ನೀಡಿದ್ದರು.
ಕೊಪ್ಪಳ ಜಿಲ್ಲೆಯಲ್ಲಿ ಆಗಾಗ ಸಾರ್ವಜನಿಕ ಅಸ್ಪೃಶ್ಯತೆ ಮತ್ತು ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಯಲಬುರ್ಗಾ ತಾಲೂಕಿನ ಕವಳಕೇರಿ ಗ್ರಾಮದಲ್ಲಿ ಇತ್ತೀಚೆಗೆ ಒಂದು ಘಟನೆ ನಡೆದಿದ್ದು, ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳಿಂದ ಅಂಬೇಡ್ಕರ್ ನಾಮಫಲಕದ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಅಪಮಾನಗೊಳಿಸಿದ ಘಟನೆ ಕಳವಳಕಾರಿ ಘಟನೆಯಾಗಿದೆ. ಅಪಮಾನಿಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೋಲೀಸರು ಇನ್ನೂ ಹಲವರನ್ನು ಬಂಧಿಸಲು ಮೀನಮೇಷ ಎಣಿಸುತ್ತಿದ್ದಾರೆಂದು ಸ್ಥಳೀಯ ದಲಿತ ಸಮುದಾಯ ಆರೋಪಿಸಿತ್ತು.
ಕೊಪ್ಪಳ ಜಿಲ್ಲೆಯಲ್ಲಿ ತಗ್ಗದ ಅಸ್ಪೃಶ್ಯತೆ ಆಚರಣೆ
ಒಟ್ಟಾರೆಯಾಗಿ ಕೊಪ್ಪಳ ಜಿಲ್ಲೆಯಲ್ಲಿ 2024ರ ಒಂದೇ ವರ್ಷದಲ್ಲಿ ಅಸ್ಪೃಶ್ಯತೆ ಆಚರಿಸಿದ ಹಾಗೂ ಪರಿಶಿಷ್ಟ ಜಾತಿ/ಪಂಗಡದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ 62 ಪ್ರಕರಣಗಳು ದಾಖಲಾದವು. ಅದರಲ್ಲಿ 18 ಪ್ರಕರಣಗಳನ್ನು ಮಾತ್ರ ಎಫ್‌ಐಆರ್ ಮಾಡಲಾಯಿತು. ಇದೀಗ ಮತ್ತೆರೆಡು ಪ್ರಕರಣಗಳು ಕಂಡುಬಂದಿವೆ.
ನಿರಂತರ ಅಸ್ಪೃಶ್ಯತೆ ಆಚರಣೆ ವಿರುದ್ಧ ಆಕ್ರೋಶಗೊಂಡ ಅನೇಕ ದಲಿತಪರ ಸಂಘಟನೆಗಳು ಹಾಗೂ ಪ್ರಗತಿಪರ ಹೋರಾಟಗಾರರು ಸಂಗನಾಳ ಚಲೊ ನಡೆಸಿದರು. ವಿಠಲಾಪುರದಲ್ಲಿ ನಡೆದ ಘಟನೆಯನ್ನೂ ಯಾತ್ರೆಯ ಮೂಲಕ ಎಚ್ಚರಿಸಿದರು. ಕೊಪ್ಪಳ ತಾಲೂಕಿನ ಹಾಲವರ್ತಿಯಲ್ಲಿ ಘಟನೆ ನಡೆದಾಗ ಅಧಿಕಾರಿಗಳು ಗ್ರಾಮದಲ್ಲಿ ಸಮಾನತೆಯ ಸಂದೇಶ ಸಾರಿದರು. ಇವೆಲ್ಲಕ್ಕಿಂತ ಹೆಚ್ಚಾಗಿ ಮರಕುಂಬಿ ಘಟನೆ ದೇಶದಾದ್ಯಂತ ಸುದ್ದಿ ಮಾಡಿತು.
2014ರಲ್ಲಿ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ದಲಿತರ ಮೇಲೆ ದೌರ್ಜನ್ಯ, ಗುಡಿಸಲುಗಳಿಗೆ ಬೆಂಕಿ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯ 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇನ್ನುಳಿದ ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇದರಲ್ಲಿ ರಾಮಣ್ಣ ಭೋವಿ ಎಂಬಾತ ನ್ಯಾಯಾಲಯದ ಆದೇಶದ ಮರುದಿನವೇ ಮೃತಪಟ್ಟರು. ಜಾತಿನಿಂದನೆ ಹಾಗೂ ಗಲಭೆಗೆ ಸಂಬಂಧಿಸಿ ಒಂದೇ ಪ್ರಕರಣದಲ್ಲಿ ಇಷ್ಟೊಂದು ಜನಕ್ಕೆ ಶಿಕ್ಷೆಯಾಗಿದ್ದು ಇದೇ ಮೊದಲು. ಬಳಿಕ ಇವರಿಗೆ ಹೈಕೋರ್ಟ್ ಜಾಮೀನು ನೀಡಿತು.
10 ವರ್ಷದ ಹಿಂದೆ ನಡೆದಿರುವ ಪ್ರಕರಣ ಸಂಬಂಧ 98 ಜನರಿಗೆ ಜೀವಾವಧಿ ಶಿಕ್ಷೆಯಾಗಿದೆ. ಅಸ್ಪೃಶ್ಯತೆ ಆಚರಣೆ, ಜಾತಿ ದೌರ್ಜನ್ಯ ಮಾಡುವವರಿಗೆ ಇದೊಂದು ತಕ್ಕ ಪಾಠ. ಈ ಪ್ರಕರಣದಿಂದ ಇನ್ಮುಂದೆ ಇಂತಹ ಪ್ರಕರಣಗಳು ನಡೆಯುವುದಿಲ್ಲ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ಆದರೆ, ಕೊಪ್ಪಳ ಜಿಲ್ಲೆಯಲ್ಲಿಯೇ ಮತ್ತೆ ಮತ್ತೆ ಅಸ್ಪೃಶ್ಯತೆ ಆಚರಣೆ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನವೆಸಗಿರುವ ಘಟನೆ ನಡೆದಿರುವುದು ಮೇಲ್ಜಾತಿಗಳ ಮನಸ್ಥಿತಿಯನ್ನು ತೋರ್ಪಡಿಸುತ್ತದೆ. ಕಾನೂನು ಕಟ್ಟಳೆಗಳು ಕೇವಲ ನೆಪಮಾತ್ರಕ್ಕೆ ಹಾಗೂ ತಾತ್ಕಾಲಿಕ ಕ್ರಮಕ್ಕಷ್ಟೇ ಹೊರತು ಪೂರ್ಣ ಪ್ರಮಾಣದಲ್ಲಿ ಕಟ್ಟುನಿಟ್ಟಿನ ಜಾರಿಗಳಾಗಿಲ್ಲವೆಂಬುದು ಸ್ಪಷ್ಟ.
ಇದನ್ನೂ ಓದಿದ್ದೀರಾ? ಭಾರೀ ಮಿಲಿಟರಿ ಕಾರ್ಯಾಚರಣೆಗೆ ಉಭಯ ದೇಶಗಳಿಂದ ತಯಾರಿ: ಯುದ್ಧದ ನಂತರ ಆಗುವ ಅನಾಹುತಗಳೇನು?
ಮರುಕುಂಬಿ ಪ್ರಕರಣದ ಅಪರಾಧಿಗಳಿಗೆ ಜಾಮೀನು ಸಿಕ್ಕಿದ್ದು, ಏನೇ ಮಾಡಿದರೂ ಕ್ಷಣಾರ್ಧದಲ್ಲಿ ಹೊರಬರಬಹುದೆಂಬ ಮನಸ್ಥಿತಿಯ ಮೇಲ್ಜಾತಿಗಳು ಯಾವುದೇ ದೌರ್ಜನ್ಯ ನಡೆಸಲು ಹೇಸುವುದಿಲ್ಲ. ಇದರಿಂದಾಗಿ ಜಾತಿ ದೌರ್ಜನ್ಯ ತಡೆ ಸಾಧ್ಯವಿಲ್ಲವೆಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ.
ಜಾತಿ ದೌರ್ಜನ್ಯ ತಡೆ ಸಫಲವಾಗಬೇಕಾದರೆ ಅಧಿಕಾರಿಗಳು ಪದೇ ಪದೆ ಶಾಂತಿ, ಸಂಧಾನ ಸಭೆ ನಡೆಸುವುದನ್ನು ಬಿಟ್ಟು ತಪ್ಪಿತಸ್ಥರನ್ನು ಕಾನೂನಿಗೆ ಒಳಪಡಿಸಬೇಕು. ಜಾಮೀನು ರಹಿತ ಕಠಿಣ ಶಿಕ್ಷೆ ವಿಧಿಸಬೇಕು. ಮಾಡಿದ ತಪ್ಪಿಗೆ ಬೆಲೆ ತೆರಲೇಬೇಕು. ಅಸ್ಪೃಶ್ಯತೆಯಂತಹ ಘಟನೆಗಳಿಗೆ ಕಾರಣಕರ್ತರಾದವರ ವಿರುದ್ಧ ಈ ಹಿಂದೆ ಕಾನೂನು ಕ್ರಮ ಜರುಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರಗಿಸುವ ಮತ್ತು ಕಾನೂನಿನ ಕುರಿತು ಭಯ ಇರುವಂತೆ ನೋಡಿಕೊಳ್ಳುವ ಅಧಿಕಾರಿಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ ಆರೋಪಿಗಳು ಬಲಿಷ್ಠರು, ಬಲಾಢ್ಯರು ಮತ್ತು ಬಹುಸಂಖ್ಯಾತ ಸಮುದಾಯಕ್ಕೆ ಸೇರಿದವರಾದರೆ ವಿನಾಯಿತಿ ನೀಡಲಾಗುತ್ತಿದೆ. ಈ ಕಾರಣಕ್ಕಾಗಿಯೇ ಈಗಲೂ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಅಧಿಕಾರಕ್ಕೆ ಏರುವಾಗ ಸ್ವೀಕರಿಸುವ ಪ್ರಮಾಣವಚನವನ್ನೇ ಮರೆಯುತ್ತಾರೆ. ಮರೆತುಕೂತವರ ಬಳಿ ನ್ಯಾಯ ದೊರೆಯುವುದುಂಟೇ?