ಪಾಕಿಸ್ತಾನ ಉಗ್ರಗಾಮಿ ನೆಲೆಗಳ ಮೇಲೆ ನಮ್ಮ ರಕ್ಷಣಾ ಇಲಾಖೆಯು ದಾಳಿ ನಡೆಸಿರುವುದಕ್ಕೆ ನಮ್ಮೆಲ್ಲರ ಬೆಂಬಲವಿದೆ. ರಾಜ್ಯ ಗುಪ್ತದಳವು ಕೇಂದ್ರದ ಇಂಟಲಿಜೆನ್ಸ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ಗುಂಡಿನ ದಾಳಿ ಬಳಿಕ ಪ್ರತ್ಯುತ್ತರಕ್ಕೆ ನಮ್ಮೆಲ್ಲರ ಬೆಂಬಲವಿದೆ. ದೇಶದ ಹಿತವನ್ನು ಕಾಪಾಡಲು ನಾವೆಲ್ಲ ಒಟ್ಟಾಗಿರುತ್ತೇವೆ. ಇಡೀ ಜನಸಮುದಾಯ ದೇಶದ ರಕ್ಷಣೆಗೆ ಜೊತೆಯಾಗಿ ನಿಲ್ಲಲಿದೆ” ಎಂದರು.
“ನಮಗೆ ಈಗಾಗಲೇ ಕೇಂದ್ರ ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಯಿಂದ ಕೆಲವು ಸೂಚನೆಗಳು ಬಂದಿವೆ. ನಾಗರಿಕರ ರಕ್ಷಣೆ ಮಾಡುವ ಕುರಿತ ತಯಾರಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ವಿದ್ಯುತ್ ಸ್ಥಾವರ, ಅಣೆಕಟ್ಟು, ವಿಮಾನ ನಿಲ್ದಾಣಗಳ ಸೇರಿದಂತೆ ಇನ್ನಿತರ ಪ್ರಮುಳ ಸ್ಥಳಗಳಲ್ಲಿ ಕೆಎಸ್‌ಐಎಸ್ ತಂಡವನ್ನು ನಿಯೋಜಿಸಲಾಗಿದೆ. ರಾಜ್ಯ ಗುಪ್ತದಳವು ಕೇಂದ್ರದ ಇಂಟಲಿಜೆನ್ಸ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಸೂಚಿಸಲಾಗಿದೆ. ಇಂದು ಸಂಜೆ ನಾಲ್ಕು ಗಂಟೆಗೆ ಸಿವಿಲ್ ಡಿಫೆನ್ಸ್ ವತಿಯಿಂದ ಡ್ರಿಲ್ ಮಾಡಲಿದ್ದಾರೆ” ಎಂದು ಹೇಳಿದರು.
“ಈಗಾಗಲೇ ಕೇಂದ್ರ ಸರ್ಕಾರ ಭದ್ರತೆ ನೀಡುತ್ತಿರುವ ಸ್ಥಳಗಳನ್ನು ಅವರೇ ಭದ್ರತೆ ನೀಡಲಿದ್ದಾರೆ. ನಮ್ಮ ಜವಾಬ್ಧಾರಿ ಇರುವ ಕಡೆ ನಾವು ಮಾಡುತ್ತೇವೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ. ಈಗಾಗಲೇ ಪಾಕಿಸ್ತಾನ ಪ್ರಜೆಗಳನ್ನು ಕಳಿಸಲಾಗಿದೆ. ಎಫ್‌ಆರ್‌ಆರ್‌ಒ ಸಂಪರ್ಕದಲ್ಲಿದ್ದು, ಅವರು ನೀಡುವ ಮಾಹಿತಿ ಆಧಾರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ತಿಳಿಸಿದರು.
ರಾಯಚೂರಿನಲ್ಲಿನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಪಡಿಸಿರುವ ಕುರಿತು ಮಾತನಾಡಿ, “ಬೇರೆ ಎಲ್ಲ ಕಾರ್ಯಕ್ರಮಗಳಿಗಿಂತ ರಕ್ಷಣೆ ವಿಚಾರ ಮುಖ್ಯ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ರದ್ದುಪಡಿಸಿದ್ದಾರೆ. ದೇಶದ ಭದ್ರತೆ ಪ್ರಶ್ನೆ. ಈ ಸಂದರ್ಭದಲ್ಲಿ ನಮ್ಮ ನಡುವೆ ಸಣ್ಣಪುಟ್ಟ ವ್ಯತ್ಯಾಸ, ಅಭಿಪ್ರಾಯಗಳಿದ್ದರೆ ಅದೆಲ್ಲವನ್ನು ಬದಿಗೊತ್ತಿ ದೇಶದ ರಕ್ಷಣೆಗೆ ಕೈಜೋಡಿಸಬೇಕು” ಎಂದು ಹೇಳಿದರು.