ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸೇನೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಪ್ರದೇಶಗಳಲ್ಲಿನ ಉಗ್ರರ ನೆಲೆಗಳ ಮೇಲೆ ನಡೆಸಿರುವ ದಾಳಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ದೇಶದ ಸೇನೆ ಬೆನ್ನಿಗೆ ನಿಂತು ಬೆಂಬಲ ನೀಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ನವದೆಹಲಿಯಲ್ಲಿ ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ಭದ್ರತಾ ಪಡೆಗಳ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ. ಅವರು ದೇಶದ ಘನತೆ, ಹಿತಾಸಕ್ತಿಯನ್ನು ಕಾಪಾಡುತ್ತಿದ್ದು, ಅವರಿಗೆ ನಾವೆಲ್ಲರೂ ನಮಿಸೋಣ. ಈ ಸಂದರ್ಭದಲ್ಲಿ ನಾವು ಅವರ ಬೆನ್ನಿಗೆ ನಿಲ್ಲೋಣ. ಕಾಂಗ್ರೆಸ್ ಪಕ್ಷ ದೇಶದ ಹಿತರಕ್ಷಣೆ ವಿಚಾರದಲ್ಲಿ ಸೇನೆ ಬೆನ್ನಿಗೆ ನಿಂತು ಬೆಂಬಲ ನೀಡಲಿದೆ” ಎಂದು ತಿಳಿಸಿದರು.
“ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕರ ಹೇಡಿತನದ ಕೃತ್ಯಕ್ಕೆ ಆಪರೇಷನ್ ಸಿಂಧೂರ ಉತ್ತಮ ಪ್ರತ್ಯುತ್ತರವಾಗಿದೆ. ಪಹಲ್ಗಾಮ್ ದಾಳಿಯಲ್ಲಿ ನಮ್ಮ ರಾಜ್ಯ ಮಾತ್ರವಲ್ಲ, ದೇಶದ ಇತರೆ ಭಾಗಗಳ ಜನರು ಮೃತರಾಗಿದ್ದರು. ಈ ವಿಚಾರದಲ್ಲಿ ಕೇವಲ ಕರ್ನಾಟಕ ಎಂದು ನೋಡಬಾರದು, ಇಡೀ ದೇಶವೇ ಒಂದು ಎಂದು ನೋಡಬೇಕು. ನಾವೆಲ್ಲರೂ ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕು, ಅದೇ ರೀತಿ ಒಟ್ಟಾಗಿ ನಿಂತಿದ್ದೇವೆ” ಎಂದರು.
ಪಹಲ್ಗಾಮ್ ದಾಳಿಯಲ್ಲಿ ಮೃತರ ಕುಟುಂಬದವರು ಈ ಆಪರೇಷನ್ ನಿಂದ ನೆಮ್ಮದಿ ಪಡೆಯುವರೇ?, ವಿರೋಧ ಪಕ್ಷ ಕೂಡ ಸರ್ಕಾರದ ಬೆನ್ನಿಗೆ ನಿಂತಿದೆಯಲ್ಲವೇ ಎಂದು ಕೇಳಿದಾಗ, “ಹೌದು, ನಾವು ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ನಿಂತಿದ್ದೇವೆ. ಬೆಲೆ ಏರಿಕೆ ವಿಚಾರವಾಗಿ ಇಂದು ರಾಯಚೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಅದನ್ನು ನಾವು ರದ್ದುಗೊಳಿಸಿದ್ದೇವೆ. ಈ ಸಂದರ್ಭದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಹೀಗಾಗಿ ಈ ಪ್ರತಿಭಟನಾ ಸಮಾವೇಶವನ್ನು ಮುಂದೂಡಿದ್ದೇವೆ” ಎಂದು ತಿಳಿಸಿದರು.