ಈ ದಿನ ಸಂಪಾದಕೀಯ | ಜನಾರ್ದನ ರೆಡ್ಡಿಗೆ ಜೈಲು: ಇದು ಜನಸಾಮಾನ್ಯರ ಜಯ

Date:

Advertisements
ದೇಶದಲ್ಲಿರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ನಂಬಿಯೇ ಬದಲಾವಣೆಯನ್ನು ತರಬಹುದು; ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಮುಖ್ಯಮಂತ್ರಿಯಂತಹ ಬಲಾಢ್ಯನನ್ನೂ ಕುರ್ಚಿಯಿಂದ ಕೆಳಗಿಳಿಸಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡಿದ್ದಾರೆ. 

58 ವರ್ಷಗಳ ಜನಾರ್ದನ ರೆಡ್ಡಿ, ಬಳ್ಳಾರಿಯ ಸಾಮಾನ್ಯ ಪೊಲೀಸ್ ಪೇದೆಯೊಬ್ಬರ ಪುತ್ರ. ಓದಿದ್ದು ಪಿಯುಸಿ. ಗಣಿ ಗುತ್ತಿಗೆದಾರ. ಇವರ ದಿಢೀರ್ ಬೆಳವಣಿಗೆ, ಎಂತಹವರಿಗೂ ವಿಸ್ಮಯ ಹುಟ್ಟಿಸುತ್ತಿದೆ. ಅದಕ್ಕೆ ಪೂರಕವಾಗಿ ಅವರನ್ನು ಪೊರೆದ, ಪೋಷಿಸಿದ, ರಕ್ಷಿಸಿದ ಭಾರತೀಯ ಜನತಾ ಪಕ್ಷ, ಅವರನ್ನು ದೇಶದ ಅತಿದೊಡ್ಡ ಶ್ರೀಮಂತ- 246 ಕೋಟಿಯ ಒಡೆಯರನ್ನಾಗಿಸಿದೆ. ಪ್ರಭಾವಿ ಶಾಸಕನನ್ನಾಗಿಸಿದೆ. ಹಣ, ಆಸ್ತಿ, ಪ್ರಚಾರ, ಗಣ್ಯರ ಸ್ಥಾನಮಾನ ತಂದುಕೊಟ್ಟಿದೆ.

ಇವುಗಳ ಬಲದಿಂದ ಜನಾರ್ದನ ರೆಡ್ಡಿ 2008ರಲ್ಲಿ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ, ಅನೈತಿಕ ಮಾರ್ಗದಿಂದ ಸರ್ಕಾರ ರಚಿಸಿದ್ದು, ಕೆಟ್ಟ ಕೊಳಕು ರಾಜಕಾರಣದ ಮಾದರಿಗೆ ಕರ್ನಾಟಕವನ್ನು ದೂಡಿದ ಕುಖ್ಯಾತಿಗೂ ಕಾರಣರಾಗಿದ್ದಾರೆ. ಇವರ ಅಕ್ರಮ ಗಣಿ ಹಣ ಮತ್ತು ಶಾಸಕರ ಖರೀದಿಯಿಂದಾಗಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪನವರು ಸರ್ಕಾರ ರಚಿಸಿದ್ದು, ಮುಖ್ಯಮಂತ್ರಿಯಾಗಿದ್ದು, ಆ ನಂತರ ಭ್ರಷ್ಟಾಚಾರದ ಕೇಸಿನಲ್ಲಿ ಜೈಲು ಪಾಲಾಗಿದ್ದನ್ನು ಕೂಡ ಕರ್ನಾಟಕದ ಜನ ಕಂಡಿದ್ದಾರೆ.  

ಕರ್ನಾಟಕದ ಪ್ರಕೃತಿ ಸಂಪತ್ತನ್ನು ಲೂಟಿ ಮಾಡಿದ, ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ, ಅಧಿಕಾರಿ ವರ್ಗವನ್ನು ಭ್ರಷ್ಟಗೊಳಿಸಿದ, ರಾಜಕಾರಣಕ್ಕೆ ಕೆಟ್ಟ ಹೆಸರು ತಂದ ಜನಾರ್ದನ ರೆಡ್ಡಿ- ಮಾಡಿದ ಅನಾಹುತಕ್ಕೆ ಬೆಲೆ ತೆರುವ ಕಾಲ ಈಗ ಬಂದಿದೆ.

Advertisements

ಕರ್ನಾಟಕ-ಆಂಧ್ರಪ್ರದೇಶದ ಗಡಿಯಲ್ಲಿರುವ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ 2007 ಮತ್ತು 2009ರ ನಡುವೆ ಅಂತರರಾಜ್ಯ ಗಡಿ ಗುರುತುಗಳನ್ನು ನಾಶ ಮಾಡಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗಿತ್ತು. ಆ ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 884 ಕೋಟಿ ನಷ್ಟ ಉಂಟಾಗಿತ್ತು. ಆ ಪ್ರಕರಣದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಇತರ ಮೂವರನ್ನು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ದೋಷಿಗಳೆಂದು ತೀರ್ಪು ನೀಡಿದೆ. ಅಪರಾಧಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಿದೆ.

ಇದನ್ನು ಓದಿದ್ದೀರಾ?: ಮೋದಿಯ ಅಮೃತಕಾಲದಲ್ಲಿ ದಾಳಿ ಮತ್ತು ದ್ವೇಷಕ್ಕಿದೆ ಮಾರುಕಟ್ಟೆ

ಜನಾರ್ದನ ರೆಡ್ಡಿಯನ್ನು ಜೈಲಿನ ಕಂಬಿಗಳ ಹಿಂದೆ ಕೂರಿಸಿದ್ದು ಈ ದೇಶದ ಸಾಂವಿಧಾನಿಕ ಸಂಸ್ಥೆಗಳೇ ಆದರೂ, ಅದಕ್ಕೆ ಕಾರಣಕರ್ತರು ಬಲಿಷ್ಠರಲ್ಲ, ಬಲಾಢ್ಯರಲ್ಲ, ಅಧಿಕಾರಸ್ಥ ರಾಜಕೀಯ ನಾಯಕರಲ್ಲ, ಪ್ರಭಾವಿಗಳೂ ಅಲ್ಲ; ಸಾಮಾನ್ಯರು.

ಆ ಸಾಮಾನ್ಯರ ಪಟ್ಟಿಯಲ್ಲಿ ಬಳ್ಳಾರಿಯ ಟಪಾಲ್‌ ಗಣೇಶ್‌ ಕುಟುಂಬವಿದೆ. ಮೊದಲ ಬಾರಿಗೆ ರೆಡ್ಡಿ ವಿರುದ್ಧ ತನಿಖೆಗೆ ಆದೇಶಿಸಿದ ಅಂದಿನ ಆಂಧ್ರ ಸಿಎಂ ರೋಸಯ್ಯನವರಿದ್ದಾರೆ. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ಮಾಡಲು ರಚಿಸಲಾಗಿದ್ದ ತನಿಖಾ ತಂಡದ ನೇತೃತ್ವ ವಹಿಸಿದ್ದ ಯು.ವಿ. ಸಿಂಗ್ ಎಂಬ ಅಧಿಕಾರಿ ಇದ್ದಾರೆ. ಆ ತಂಡ ಕೊಟ್ಟ ವರದಿಯನ್ನು ಆಧರಿಸಿ 2011ರಲ್ಲಿ ಅಂತಿಮ ವರದಿ ಸಿದ್ಧಪಡಿಸಿದ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ಇದ್ದಾರೆ. ಸಂತೋಷ್‌ ಹೆಗ್ಡೆಯವರ ವರದಿಯನ್ನು ಕೋರ್ಟಿನವರೆಗೂ ತೆಗೆದುಕೊಂಡು ಹೋದ ಸಾಮಾಜಿಕ ಹೋರಾಟಗಾರ ಎಸ್.‌ಆರ್.‌ ಹಿರೇಮಠರಿದ್ದಾರೆ. ಹಿರೇಮಠರನ್ನು ಬೆಂಬಲಿಸಿದ ಪತ್ರಕರ್ತರಿದ್ದಾರೆ. ಹೋರಾಟಗಾರರಿದ್ದಾರೆ. ನ್ಯಾಯದ ಪರ ವಕಾಲತ್ತು ವಹಿಸಿದ ವಕೀಲರಿದ್ದಾರೆ, ನ್ಯಾಯಾಧೀಶರಿದ್ದಾರೆ.

ಹಾಗಾಗಿ ಇದು ಅಕ್ಷರಶಃ ಜನಸಾಮಾನ್ಯರ ಜಯ. ಆ ಸಾಮಾನ್ಯರ ಪ್ರತಿನಿಧಿಯಾದ ಎಸ್.ಆರ್. ಹಿರೇಮಠರ ಜಯ. ಹಿರೇಮಠರು ಮೆದು ಮಾತಿನ ಸಜ್ಜನರು. ಆದರೆ ಇವರ ಕೆಲಸಗಳು ಬಲಾಢ್ಯರ ಬುಡ ಅಲ್ಲಾಡಿಸಿವೆ. ಅವರ ಕರಾಳ ಕೃತ್ಯಗಳನ್ನು ಬುಡಮೇಲಾಗಿಸಿವೆ. ನಾಡನ್ನು ಉಳಿಸಿವೆ.

ಕರ್ನಾಟಕ-ಆಂಧ್ರಪ್ರದೇಶ ರಾಜ್ಯ ಸರ್ಕಾರಗಳನ್ನು ತಮ್ಮ ಬೆರಳ ತುದಿಯಲ್ಲಿ ಆಡಿಸುತ್ತಿದ್ದ ಬಳ್ಳಾರಿಯ ಗಣಿಕುಳಗಳ ಸದ್ದಡಗಿದ್ದರೆ, ಶಾಸಕರನ್ನು ಖರೀದಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದು ಪ್ರವಾಸೋದ್ಯಮ ಮಂತ್ರಿಯಾಗಿ ಮೆರೆದ ಜನಾರ್ದನ ರೆಡ್ಡಿ ಇವತ್ತು ಜೈಲು ಸೇರುವಂತಾಗಿದ್ದರೆ, ಗಣಿರೆಡ್ಡಿ ಸಾಮ್ರಾಜ್ಯ ಪತನದ ಅಂಚಿಗೆ ಸರಿದಿದ್ದರೆ ಅದರ ಹಿಂದೆ ಹಿರೇಮಠರ ಸತತ ಶ್ರಮ, ಪ್ರಾಮಾಣಿಕ ಹೋರಾಟ ಮತ್ತು ಸಾಮಾಜಿಕ ಕಳಕಳಿ ಇದೆ.

2009ರಿಂದ 2010ರವರೆಗೆ 17 ತಿಂಗಳ ಅವಧಿಯಲ್ಲಿ ಸುಮಾರು 37 ಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಅದಿರು ಬೇಲೆಕೇರಿ ಬಂದರಿನಿಂದ ನಾಪತ್ತೆಯಾದ ಪ್ರಕರಣದಲ್ಲಿ ಮಾಜಿ ಮಂತ್ರಿಗಳಾದ ಆನಂದ್ ಸಿಂಗ್, ಶ್ರೀರಾಮುಲು ಮತ್ತು ಕಾಂಗ್ರೆಸ್ ನಾಯಕರು ಭಾಗಿಯಾಗಿರುವುದನ್ನು ದಾಖಲೆಗಳ ಸಮೇತ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುವಂತೆ ಮಾಡಿದ್ದರ ಹಿಂದೆ, ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್‌ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸುವುದರ ಹಿಂದೆ ಹಿರೇಮಠರ ಸಮಾಜವನ್ನು ಎಚ್ಚರಿಸುವ ಇರಾದೆ ಇದೆ.

ಇವು ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನ ಕಂಡ, ಕೇಳಿದ ಕೆಲವು ಹಗರಣಗಳು. ಕರ್ನಾಟಕದ ಜನಪರ ಹೋರಾಟಕ್ಕೆ ಸಿಕ್ಕ ಗೆಲುವುಗಳು.

ಇದನ್ನು ಓದಿದ್ದೀರಾ?: ಆಪರೇಷನ್ ಸಿಂಧೂರ – ಪಾಕ್ ಭಯೋತ್ಪಾದನೆಗೆ ತಕ್ಕ ಶಾಸ್ತಿ!

ದೇಶದಲ್ಲಿರುವ ಕಾನೂನು, ನ್ಯಾಯ ವ್ಯವಸ್ಥೆಯನ್ನು ನಂಬಿಯೇ ಬದಲಾವಣೆಯನ್ನು ತರಬಹುದು; ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾನ್ಯ ವ್ಯಕ್ತಿ ಕೂಡ ಮುಖ್ಯಮಂತ್ರಿಯಂತಹ ಬಲಾಢ್ಯನನ್ನೂ ಕುರ್ಚಿಯಿಂದ ಕೆಳಗಿಳಿಸಬಹುದು ಎಂಬುದನ್ನು ಹಿರೇಮಠರು ಸಾಬೀತು ಮಾಡಿದ್ದಾರೆ. ಭಂಡರ, ಬಲಾಢ್ಯರ, ಭ್ರಷ್ಟರ ಮುಖದಲ್ಲಿ ಆತಂಕದ ಗೆರೆಗಳನ್ನು ಮೂಡಿಸಿದ್ದಾರೆ.  

”ಜನಪರ ಹೋರಾಟಗಳಲ್ಲಿ ತತ್ವ-ಸಿದ್ಧಾಂತಗಳಿಗಿಂತಲೂ ನಂಬಿಕೆ, ಪ್ರಾಮಾಣಿಕತೆ ಬಹಳ ಮುಖ್ಯ. ಅದಿದ್ದರೆ ಜನ ತಾನೇ ತಾನಾಗಿ ನಮ್ಮ ಬೆನ್ನ ಹಿಂದೆ ಇರುತ್ತಾರೆ. ನಮ್ಮ ಹೋರಾಟಗಳನ್ನು ಬೆಂಬಲಿಸುತ್ತಾರೆ. ಇಷ್ಟಿದ್ದರೆ, ಯಾವ ಬಲಾಢ್ಯ ಶಕ್ತಿಗಳಿಗೂ ಹೆದರಬೇಕಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದು ಹಾಗೂ ಕೆಟ್ಟದು- ಏನು ಬೇಕಾದರೂ ಆಗಬಹುದು. ಸಮಾಜದಲ್ಲಿ ಮೌಲ್ಯ, ನೈತಿಕತೆ ಇನ್ನೂ ಇದೆ. ಒಳ್ಳೆಯವರು, ಮಾನವಂತರು, ಪ್ರಾಮಾಣಿಕರು ಈಗಲೂ ಇದ್ದಾರೆ. ಅವರಿಂದಲೇ ನಮ್ಮ ಹೋರಾಟಗಳಿಗೆ ಜಯ ದೊರಕುತ್ತಿರುವುದು. ನಾನು ಇಲ್ಲಿ ನೆಪಮಾತ್ರವಷ್ಟೆ. ಸಮಾಜದ ಸಲುವಾಗಿ ಮಾಡುವ ಕೆಲಸಗಳಿಂದ ಸಂತೃಪ್ತಿ, ಸಮಾಧಾನ ಸಿಕ್ಕಿದೆ. ನ್ಯಾಯ ನೀತಿ ಧರ್ಮಗಳಿಗೆ ಬೆಲೆ ಬಂದಿದೆ. ಇದಕ್ಕಿಂತ ಇನ್ನೇನೂ ಬೇಕಿಲ್ಲ” ಎನ್ನುವ ಎಸ್.ಆರ್. ಹಿರೇಮಠರನ್ನು ಮುಂದಿನ ಪೀಳಿಗೆ ಮಾದರಿಯಾಗಿಟ್ಟುಕೊಂಡರೆ- ಆರೋಗ್ಯವಂತ ಸಮಾಜ ಮತ್ತು ಅಭಿವೃದ್ಧಿಶೀಲ ರಾಷ್ಟ್ರದ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X