ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಸಂವಿಧಾನ ವಿರೋಧಿ “ವಕ್ಫ್ ತಿದ್ದುಪಡಿ ಕಾಯ್ದೆ-2025” ರ ವಿರುದ್ಧ ಇದೇ ತಿಂಗಳ 13ನೇ ತಾರೀಖಿನಂದು ಮಂಗಳವಾರ ಸಂಜೆ 4:00 ಗಂಟೆಗೆ ಉಡುಪಿಯ ಮಿಷನ್ ಕಂಪೌಂಡಿನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು “ವಕ್ಫ್ ಉಳಿಸಿ, ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿಯು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದೂಡಿದ್ದೇವೆ ಎಂದು ಹೋರಾಟ ಸಮಿತಿಯ ಮುಷ್ತಾಕ್ ಹೆನ್ನಾಬೈಲ್ ಹೇಳಿದರು.
ಉಡುಪಿಯ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ಯತೀತ ಮನೋಭಾವದ ಸಂವಿಧಾನ ಪ್ರೇಮಿ ಸಮಾನ ಮನಸ್ಕ ಸಂಘಟನೆಗಳು, ರಾಜಕೀಯ ಪಕ್ಷಗಳು, ಚಿಂತಕರು ಮತ್ತು ಹೋರಾಟಗಾರರು ಒಂದುಗೂಡಿ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಿ ಸಾಕಷ್ಟು ತಯಾರಿ ಮತ್ತು ಪ್ರಚಾರಗಳನ್ನು ನಡೆಸಲಾಗಿತ್ತು. ಪ್ರತಿಭಟನೆಗೆ ಪೊಲೀಸ್ ಇಲಾಖೆಯ ಅನುಮತಿಯನ್ನೂ ಪಡೆಯಲಾಗಿತ್ತು. ಜಾತಿ, ಧರ್ಮ, ಲಿಂಗ, ಭಾಷೆ, ಪಂಗಡಗಳ ಭೇದವಿಲ್ಲದೆ ಜಿಲ್ಲೆಯ ಎಲ್ಲ ಭಾಗಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಕೇಂದ್ರ ಸರ್ಕಾರದ ಈ ಕರಾಳ ಕಾಯ್ದೆಯನ್ನು ವಿರೋಧಿಸುವವರು ಮತ್ತು ಸಂವಿಧಾನ ಪ್ರೇಮಿಗಳು ಆಗಮಿಸುವ ನಿರೀಕ್ಷೆಯಿತ್ತು. ಪ್ರಚಾರದ ಸಂದರ್ಭದಲ್ಲಿ ಸಮಾಜದ ಸರ್ವ ವರ್ಗದವರೂ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ಮಾತ್ರವಲ್ಲ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿತ್ತು..
ಆದರೆ ಈ ಮಧ್ಯೆ, ಕಾಶ್ಮೀರದ ಪೆಹಲ್ಗಾಮಿನಲ್ಲಿ ನಡೆದ ಉಗ್ರವಾದಿಗಳ ಭೀಕರ ಹತ್ಯಾಕಾಂಡಕ್ಕೆ ಪ್ರತಿಯಾಗಿ ಮೊನ್ನೆ ನಮ್ಮ ದೇಶದ ಸೇನೆಯು ಪಾಕಿಸ್ತಾನದಲ್ಲಿರುವ ಉಗ್ರವಾದಿ ನೆಲೆಗಳ ಮೇಲೆ ಯೋಜಿತ ಮತ್ತು ನಿಖರ ದಾಳಿಯನ್ನು ನಡೆಸಿತು. ಭಯೋತ್ಪಾದನೆಯ ವಿರುದ್ಧವಾಗಿ ನಡೆಸಿರುವ ಈ ವೈಮಾನಿಕ ದಾಳಿಯ ಸಂದರ್ಭದಲ್ಲಿ ದೇಶದ ಸೇನೆಗೆ ನೈತಿಕ ಬಲ ನೀಡುವುದು ನಮ್ಮೆಲ್ಲರ ಜವಾಬ್ದಾರಿ. ಈ ವಿಚಾರದಲ್ಲಿ ಸರ್ಕಾರದ ಪರ ನಮ್ಮ ಬೆಂಬಲವನ್ನು ಸೂಚಿಸುತ್ತಾ ನಾವು ಪೂರ್ವ ನಿಗದಿತವಾಗಿದ್ದ ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿರುತ್ತೇವೆ. ರಾಜಕೀಯ, ಸಾಮಾಜಿಕ, ಧಾರ್ಮಿಕ ಕಾರಣಗಳಿಂದಾಗಿ ದೇಶದೊಳಗೆ ಸರಕಾರದೊಂದಿಗೆ ಅಭಿಪ್ರಾಯ ಭೇದ ಅಥವಾ ವಿರೋಧ ವ್ಯಕ್ತವಾಗುತ್ತಿದ್ದರೂ, ಇಂತಹ ಪರಿಸ್ಥಿತಿಗಳಿಂದಾಗಿ ದೇಶದ ಸೇನೆಯ ನೈತಿಕ ಸ್ಥೈರ್ಯ ಕುಗ್ಗಬಾರದು ಮತ್ತು ಈ ಸಂಧರ್ಭದಲ್ಲಿ ದೇಶದಲ್ಲಿ ನಡೆಯುವ ಪ್ರತಿಭಟನೆಗಳು ಜಾಗತಿಕ ಮಟ್ಟದಲ್ಲಿ ದೇಶದ ವರ್ಚಸ್ಸಿಗೆ ಧಕ್ಕೆ ತರಬಾರದು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಸಮಿತಿಯು ಇಂದು ಸಭೆ ಸೇರಿ ಪ್ರತಿಭಟನೆಯನ್ನು ಮುಂದೂಡುವ ನಿರ್ಧಾರವನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಉಪಾಧ್ಯಕ್ಷ ರಫೀಕ್, ಉಡುಪಿ ನಗರ ಸಭಾ ಸದಸ್ಯ ರಮೇಶ್ ಕಾಂಚನ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಸುಂದರ್ ಮಾಸ್ಟರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಇದ್ರೀಸ್ ಹೂಡೆ, ಸಾಮಾಜಿಕ ಹೋರಾಟಗಾರ ನಾಗೇಶ್ ಉದ್ಯಾವರ್ ಉಪಸ್ಥಿತರಿದ್ದರು.