ರಾಜ್ಯ ಸರ್ಕಾರ ಜಾತಿಗಣತಿ ಸಮೀಕ್ಷೆ ನಡೆಸುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಭಾಗಿಯಾಗಬೇಕು. ಮಾದಿಗ ಸಮಾಜದ ಮುಖಂಡರು ಮೇ 17ರವರೆಗೂ ಯಾವುದೇ ಒತ್ತಡ ಕೆಲಸಗಳನ್ನು ಬದಿಗಿಟ್ಟು, ಗಣತಿದಾರರು ತಮ್ಮ ಊರಿಗೆ ಹಾಗೂ ವಾರ್ಡ್‌ಗಳಿಗೆ ಬಂದಾಗ ಕಡ್ಡಾಯವಾಗಿ ಹಾಜರಾಗಿ ಜಾತಿ ಕಲ್ಂನಲ್ಲಿ ಮಾದಿಗ ಧೈರ್ಯದಿಂದ ಮತ್ತು ಯಾವುದೇ ಸಂಕೋಚವಿಲ್ಲದೆ ಬರೆಯಿಸಬೇಕು’ ಎಂದು ಸಾಮಾಜಿಕ ಹೋರಾಟಗಾರ ಕರಿಯಪ್ಪ ಗುಡಿಮನಿ ಮಾದಿಗ ಸಮುದಾಯಕ್ಕೆ ಮನವಿ ಮಾಡಿದರು.
ಈ ಕುರಿತು ಕೊಪ್ಪಳದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, “ನ್ಯಾ. ನಾಗಮೋಹನ್ ದಾಸ್ ಆಯೋಗ ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ನಡೆಸಲು ಗಣತಿದಾರರು, ಪರಿಶಿಷ್ಟ ಜಾತಿಗಳಲ್ಲಿನ ಮೂಲಜಾತಿಗಳ ಸಮೀಕ್ಷೆಗಾಗಿ ಮನೆ-ಮನೆ ಭೇಟಿ ನೀಡುತ್ತಾರೆ. ಆಗ ಮೂಲ ಜಾತಿಗಳ ಮಾಹಿತಿ ಕೇಳಿದಾಗ, ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ ಎಂದು ಹೇಳಬೇಡಿ ಬದಲಾಗಿ ‘ಮಾದಿಗ’ ಎಂದು ಹೇಳಿ ಬರೆಯಿಸಬೇಕು” ಎಂದಿದ್ದಾರೆ.
“ನಾಗಮೋಹನ್ ದಾಸ್ ಅವರು ನೀಡಿರುವ ವರದಿಯಂತೆ ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ಅದರಂತೆ ಮೇ 5ರಿಂದ ಜಾತಿಗಣತಿ ಆರಂಭವಾಗಿದ್ದು, ಯಾರೂ ಕೂಡ ಈ ಬಗ್ಗೆ ನಿರ್ಲಕ್ಷ್ಯ ಮಾಡದೆ ಮಾದಿಗ ಸಮುದಾಯದ ಎಲ್ಲ ಪ್ರಜ್ಞಾವಂತರು, ಹಿರಿಯರು, ರಾಜಕೀಯ ನಾಯಕರು, ವಿದ್ಯಾರ್ಥಿ ಸಮೂಹ, ಮುಖಂಡರು ದ್ವಂದ್ವ ನೀತಿ ಅನುಸರಿಸದೆ ಎಚ್ಚರಿಕೆಯಿಂದ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ಮಾದಿಗ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಬೇಕು” ಎಂದು ವಿನಂತಿಸಿದರು.
ಇದನ್ನೂ ಓದಿದ್ದೀರಾ? ಕೊಪ್ಪಳ | ಅಳಿಯದ ಅಸ್ಪೃಶ್ಯತೆ, ದೌರ್ಜನ್ಯ ಪ್ರಕರಣಗಳು; ಕ್ರಮ ಕೈಗೊಳ್ಳಬೇಕಾದವರಾರು?
“ಈ ಸಮೀಕ್ಷೆಯಲ್ಲಿ 101 ಸಮುದಾಯಗಳು ನಿಮ್ಮ ಸಮುದಾಯದ ಮೂಲ ಜಾತಿಯ ಹೆಸರನ್ನು ಬರೆಯಿಸುವುದನ್ನು ಮರೆಯಬೇಡಿ. ಅದರಲ್ಲಿ ಮಾದಿಗ ಸಮುದಾಯ ಕಡ್ಡಾಯವಾಗಿ ಸಮೀಕ್ಷೆಗೆ ಬರುವ ಸಿಬ್ಬಂದಿಗಳೊಂದಿಗೆ ಸಹಕರಿಸಿ, ಬೆಂಬಲಿಸಿ ನಿಮ್ಮ ಮೂಲ ಜಾತಿ ಮಾದಿಗ ಎಂದು ಬರೆಯಿಸಬೇಕು” ಎಂದು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯಿಂದ ಕರೆಕೊಟ್ಟರು.
ಕರಿಯಪ್ಪ ಗುಡಿಮನಿ, ಮುದಗಕಪ್ಪ ಎಂ ಹೊಸಮನಿ, ದುರಗೇಶ ಬರಗೂರ ಸೇರಿದಂತೆ ಇತರರು ಇದ್ದರು.