ಪ್ರಬುದ್ಧತೆ ತೋರುತ್ತಿರುವ ಸರ್ಕಾರ – ಯುದ್ಧ ಬಯಸುತ್ತಿರುವ ಭಕ್ತರು ಮತ್ತು ಮಾಧ್ಯಮಗಳು

Date:

Advertisements

‘ಇನ್ನೇನು ಯುದ್ಧ ಶುರುವಾಗೇ ಹೋಯ್ತು’, ‘ಸೇನೆಯ ರಣಕಹಳೆ’, ‘ಪಾಕಿಸ್ತಾನದ ವಿರುದ್ಧ ಯುದ್ಧ ಯಾವಾಗ’, ‘ಯುದ್ಧ ಹೇಗಿರುತ್ತೆ’- ಮುಂತಾದ ಹತ್ತು ಹಲವು ಬಗೆಯ ನೂರಾರು ಥಂಬ್‌ನೈಲ್‌ ಹೆಡ್‌ಲೈನ್‌ಗಳು ಕಳೆದ 15 ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ, ಪಾಕಿಸ್ತಾನದ ಭಯೋತ್ಪಾದಕ ನೆಲೆಗಳು ಎಂದು ಗುರುತಿಸಲಾದ 9 ಸ್ಥಳಗಳ ಮೇಲೆ ಭಾರತವು ‘ಆಪರೇಷನ್ ಸಿಂಧೂರ’ ನಡೆಸಿದ ಮೇಲಂತೂ ಯುದ್ಧ ನಡೆದೇ ನಡೆಯುತ್ತದೆ ಎಂದು ಗೋದಿ ಮಾಧ್ಯಮಗಳು ಚೀರಾಡುತ್ತಿವೆ. ಯುದ್ಧದ ನೆಲದಲ್ಲೇ ನಿಂತಂತೆ ‘ಬ್ಯಾಕ್‌ಗ್ರೌಂಡ್’ ಎಡಿಟ್ ಮಾಡಿ ಸ್ಟುಡಿಯೋದಲ್ಲಿಯೇ ರಣರಂಗದ ದೃಶ್ಯ ನಿರ್ಮಿಸಿ, ಯುದ್ಧವನ್ನು ವೈಭವೀಕರಿಸುತ್ತಿವೆ. ಅಷ್ಟೇ ಅಲ್ಲ, ಪ್ರಚೋದಿಸುತ್ತಿವೆ ಕೂಡ.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸ್ಥಳೀಯರು, ಪ್ರವಾಸಿಗರು ಸೇರಿ 28 ಮಂದಿಯನ್ನು ಭಯೋತ್ಪಾದಕರು ಹತ್ಯೆಗೈದಿದ್ದಾರೆ. ಕ್ರೌರ್ಯ ಮೆರೆದ ಭಯೋತ್ಪಾದಕರ ವಿರುದ್ಧ ಭಾರತ ಪ್ರತಿದಾಳಿ ಮಾಡಿದೆ, ಕೆಲವು ಭಯೋತ್ಪಾದಕ ನೆಲೆಗಳನ್ನು ಧ್ವಂಸಗೊಳಿಸಿದೆ. ಭಾರತೀಯ ಸೇನೆಯ ಕಾರ್ಯಾಚರಣೆ ಮತ್ತು ಕೇಂದ್ರ ಸರ್ಕಾರದ ಪ್ರಬುದ್ಧ ನಡೆಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಭಾರತದ ರಾಜಕೀಯ ಪಕ್ಷಗಳೂ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳನ್ನು ಬೆಂಬಲಿಸುವುದಾಗಿ ಘೋಷಿಸಿವೆ. ಭಾರತೀಯ ಸೇನೆಯೊಂದಿಗೆ ನಾವಿದ್ದೇವೆಂದು ಭಾರತೀಯರು ಹೇಳುತ್ತಿದ್ದಾರೆ. ಆದಾಗ್ಯೂ, ಯುದ್ಧ ಬೇಡ – ಭಯೋತ್ಪಾದಕರ ನಿಗ್ರಹವಾಗಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲಿ ಎಂದು ಭಾರತೀಯ ನಾಗರಿಕರು ಹೇಳುತ್ತಿದ್ದಾರೆ.

ಅಂತಾರಾಷ್ಟ್ರೀಯವಾಗಿಯೂ ಶಾಂತಿ ಕಾಪಾಡಲು ಕರೆಗಳು ಬರುತ್ತಿವೆ. ಸಂಯಮ ಕಾಯ್ದುಕೊಳ್ಳುವಂತೆ ಉಭಯ ರಾಷ್ಟ್ರಗಳನ್ನು ವಿಶ್ವಸಂಸ್ಥೆ ಒತ್ತಾಯಿಸುತ್ತಿದೆ. ಬಿಕ್ಕಟ್ಟು ಶೀಘ್ರವೇ ಕೊನೆಗೊಳ್ಳುತ್ತದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಹಲವು ರಾಷ್ಟ್ರಗಳು ಶಾಂತಿಗೆ ಕರೆಕೊಟ್ಟಿವೆ.

Advertisements

ಆದರೆ, ಭಾರತೀಯ ಮಾಧ್ಯಮಗಳು ಮಾತ್ರ ಯುದ್ಧ ನಡೆದೇ ತೀರಬೇಕೆಂದು ಹಠಕ್ಕೆ ಬಿದ್ದಂತೆ ವರ್ತಿಸುತ್ತಿವೆ. ಯುದ್ಧವನ್ನು ಬಯಸುತ್ತಿವೆ. ಇದೇ ವೇಳೆ, ಚಕ್ರವರ್ತಿ ಸೂಲಿಬೆಲೆಯಂತಹ ಅರೆಬೆಂದ ಸುಳ್ಳು ಭಾಷಣಕಾರರು ಪಾಕಿಸ್ತಾನ ಬೆಂಗಳೂರಿನ ಮೇಲೂ ದಾಳಿ ಮಾಡಬಹುದು. ಬೆಂಗಳೂರು ಕೂಡ ಅಪಾಯದಲ್ಲಿದೆ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ಭಯ, ಆತಂಕಕ್ಕೆ ದೂಡುತ್ತಿದ್ದಾರೆ. ಅಂತಹವರ ಬಾಯಿಗೆ ಮೈಕ್ ಹಿಡಿದು, ಮಾಧ್ಯಮಗಳು ಭಯವನ್ನು ಮತ್ತಷ್ಟು ಹರಡಲು ಯತ್ನಿಸುತ್ತಿವೆ. ಜೊತೆಗೆ, ಮುಸ್ಲಿಮರ ವಿರುದ್ಧ ಕೋಮುದ್ವೇಷವನ್ನು ಪ್ರಚೋದಿಸುವ ಯತ್ನವನ್ನೂ ಮುಂದುವರೆಸಿವೆ.

ಆದಾಗ್ಯೂ, ಕೇಂದ್ರ ಸರ್ಕಾರವು ತನ್ನ ನಡೆಯಲ್ಲಿ ಪ್ರಬುದ್ಧತೆಯನ್ನು ತೋರಿಸುತ್ತಿದೆ. ‘ಆಪರೇಷನ್ ಸಿಂಧೂರ’ ದಾಳಿಯ ಕುರಿತು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್​ ಸೋಫಿಯಾ ಖುರೇಷಿ ಹಾಗೂ ವಿಂಗ್​ ಕಮಾಂಡರ್​ ವ್ಯೋಮಿಕಾ ಸಿಂಗ್ ಭಾಗಿಯಾಗಿದ್ದರು. ವಿಶೇಷವೆಂದರೆ, ಈ ಮೂವರು ವಿಭಿನ್ನ – ಹಿಂದು, ಮುಸ್ಲಿಂ ಹಾಗೂ ಸಿಖ್ – ಸಮುದಾಯದವರು. ಈ ಮೂವರ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಸರ್ಕಾರ, ತನ್ನ ಕೋಮುವಾದಿ ಚಾಳಿಯನ್ನು ತಾತ್ಕಾಲಿಕವಾಗಿಯಾದರೂ ಹೊರಗಿಟ್ಟಿತ್ತು.

ಇಸ್ಲಾಮ್ ಧರ್ಮಕ್ಕೆ ಸೇರಿದ ಸೇನಾಧಿಕಾರಿ ಸೋಫಿಯಾ ಅವರನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಸ್ತುತಪಡಿಸಿದ್ದು, ದೇಶದ ಮತ್ತು ಸೇನೆಯ ಧರ್ಮನಿರಪೇಕ್ಷತೆಗೆ ಸಾಕ್ಷಿಯಾಗಿದೆ. ವಿದೇಶಾಂಗ ಕಾರ್ಯದರ್ಶಿ ಮತ್ತು ಇಬ್ಬರು ಸೇನಾ ಅಧಿಕಾರಿಗಳು ಯಾವುದೇ ನಾಟಕೀಯತೆ ಇಲ್ಲದೆ, ಉದ್ವೇಗ, ವಿಜೃಂಭಣೆಯಿಲ್ಲದೆ, ಶಾಂತವಾಗಿ ನಿರುದ್ವಿಗ್ನವಾಗಿ, ನಿರ್ಭಾವುಕತೆಯಿಂದ ಮತ್ತು ಅತ್ಯಂತ ಸಂಯಮದಿಂದ ವಿವರಗಳನ್ನು ನೀಡಿದ್ದಾರೆ.

ಜೊತೆಗೆ, ಆಪರೇಷನ್ ಸಿಂಧೂರ ಕಾರ್ಯಾಚರಣೆ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳಿಗೆ ಸೀಮಿತವಾಗಿತ್ತು. ಮಿಲಿಟರಿ ಮತ್ತು ನಾಗರಿಕ ನೆಲೆಗಳ ಮೇಲೆ ಕಾರ್ಯಾಚರಣೆ ನಡೆದಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೂ, ಪಾಕಿಸ್ತಾನವನ್ನು ಒಳಗೆ ನುಗ್ಗಿ ಹೊಡೆಯಲಾಗಿದೆ ಎಂದು ಗೋದಿ ಮೀಡಿಯಾ ಅಬ್ಬರಿಸಿವೆ.

ಸಂಘರ್ಷದ ಸಮಯದಲ್ಲಿ ಮೋದಿ ಸರ್ಕಾರವೇ ಕೋಮುವಾದಿ ಧೋರಣೆಯನ್ನು ಹೊರಗಿಟ್ಟರೂ, ಬಿಜೆಪಿ ಬೆಂಬಲಿಗರು, ಮೋದಿ ಭಕ್ತರು ಹಾಗೂ ಗೋದಿ ಮಾಧ್ಯಮಗಳು ಮಾತ್ರ ಕೋಮುದ್ವೇಷವನ್ನು ಬದಿಗಿಡುತ್ತಿಲ್ಲ. ಸಂಘರ್ಷದ ವರದಿಗಳೊಳಗೆ ಎಲ್ಲೆಲ್ಲಿ ಸಾಧ್ಯವೋ, ಅಲ್ಲೆಲ್ಲ ಕೋಮುದ್ವೇಷವನ್ನು ತುರುಕುತ್ತಿವೆ.

ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಚರಣೆಯ ಯಶಸ್ಸನ್ನು ಸರ್ಕಾರವೇ ತನ್ನ ಸಾಧನೆಯೆಂದು ಹೇಳಿಕೊಳ್ಳದೇ ಇರುವ ಸಂದರ್ಭದಲ್ಲಿ, ಮೋದಿ ಭಕ್ತರು ಮೋದಿ ಅವರನ್ನು ಮತ್ತೆ ಆರಾಧಿಸುತ್ತಿದ್ದಾರೆ. ಮೋದಿಯಿಂದಲೇ ಕಾರ್ಯಾಚರಣೆ ನಡೆದಿದ್ದು ಎಂದು ಬಣ್ಣಿಸುತ್ತಿದ್ದಾರೆ, ಸಂಭ್ರಮಿಸುತ್ತಿದ್ದಾರೆ. ಸೇನೆಯ ಶ್ರಮ, ತಂತ್ರ, ಕಾರ್ಯಾಚರಣೆಯ ಶ್ರೇಯಸ್ಸನ್ನು ಮೋದಿ ಅವರ ಮುಡಿಗೇರಿಸಲು ಹವಣಿಸುತ್ತಿದ್ದಾರೆ. ಮೋದಿ ಅವರನ್ನು ಸಂಭ್ರಮಿಸುವ ಮತ್ತು ಮೋದಿ ಯುದ್ಧ ನಡೆಸಬೇಕು-ನಡೆಸುತ್ತಾರೆ ಎಂಬ ಹತ್ತಾರು, ನೂರಾರು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಈ ವರದಿ ಓದಿದ್ದೀರಾ?: ಆಪರೇಷನ್ ಸಿಂಧೂರ | ಮಹಿಳಾ ಅಧಿಕಾರಿಗಳಾದ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಯಾರು?

ಪಹಲ್ಗಾಮ್‌ನಲ್ಲಿ ಜೀವತೆತ್ತ 28 ಮಂದಿಯ ಹತ್ಯೆಯನ್ನು ಕೋಮುದ್ವೇಷ ಮತ್ತು ರಾಜಕೀಯಗೊಳಿಸಲು ಮಾಧ್ಯಮಗಳು ಯತ್ನಿಸುತ್ತಿವೆ. ಪಾಕಿಸ್ತಾನದ ಜೊತೆಗೆ ಯುದ್ಧ ನಡೆಯಲೇಬೇಕೆಂದು ಬಯಸುತ್ತಿವೆ. ಈ ಹಿಂದೆ, 2019ರಲ್ಲಿ ಪುಲ್ವಾಮ ದಾಳಿ ನಡೆದಾಗಲೂ ಈ ಯುದ್ಧದಾಹಿ ಮಾಧ್ಯಮಗಳು, ‘ಯುದ್ಧ ಫಿಕ್ಸ್‌’, ‘ಪಾಕಿಸ್ತಾನಕ್ಕೆ ಅಳಿವಿನ ಮುಹೂರ್ತ’ ಎಂಬಿತ್ಯಾದಿ ರೀತಿಯ ಥಂಬ್‌ನೈಲ್‌ಗಳ ಜೊತೆಗೆ ಅಬ್ಬರಿಸಿದ್ದವು. ಆದರೆ, ರಣೋತ್ಸಾಹಿಗಳು ಬಯಸುವ ರೀತಿಯ ಯುದ್ಧ ನಡೆದಿಲ್ಲ. ಮಾಧ್ಯಮಗಳ ಯುದ್ಧದಾಹ ತಣಿಯಲಿಲ್ಲ. ಈಗ ಮತ್ತೆ ಮಾಧ್ಯಮಗಳ ಯುದ್ಧದಾಹ ಹೆಚ್ಚಾಗಿದೆ.

1898ರಲ್ಲಿ ಸ್ಪೇಯ್ನ್ ಮತ್ತು ಅಮೆರಿಕ ನಡುವೆ ಯುದ್ಧ ನಡೆಯಿತು. ಆ ಯುದ್ಧಕ್ಕೆ ಕಾರಣೀಭೂತನಾಗಿದ್ದೇ ಮಾಧ್ಯಮ. ವಿಲಿಯಂ ರ್ಯಾಂಡಲ್ಫ್ ಹರ್ಸ್ಟ್ ಎಂಬ ಪತ್ರಕರ್ತ ತನ್ನ ಮಾಧ್ಯಮ ಸಂಸ್ಥೆ ‘ಹರ್ಸ್ಟ್ ಕಮ್ಯುನಿಕೇಷನ್ಸ್’ ಮತ್ತು ಕೆಲವು ಮಾಧ್ಯಮಗಳ ಮೂಲಕ ಕ್ಯೂಬಾದಲ್ಲಿ ಸ್ಪ್ಯಾನಿಷ್ ದೌರ್ಜನ್ಯಗಳ ಬಗ್ಗೆ ನಿರಂತರವಾಗಿ ಯುದ್ಧೋನ್ಮಾದದ ವರದಿ ಪ್ರಕಟಿಸಿದ. ಓದುಗರನ್ನು ಪ್ರಚೋದಿಸುವ, ಉತ್ಪ್ರೇಕ್ಷೆಗೊಳಿಸುವಂತಿದ್ದ ಆ ವರದಿಗಳು ಅಮೆರಿಕನ್ನರ ಅಭಿಪ್ರಾಯಗಳನ್ನೇ ಬದಲಿಸಿದವು, ಯುದ್ಧ ಮಾಡಬೇಕೆಂಬ ವಾದವನ್ನು ಬಲವಾಗಿ ಬಿತ್ತಿದವು. ಪ್ರಸಿದ್ದ ವ್ಯಂಗ್ಯಚಿತ್ರಕಾರ ಫ್ರೆಡೆರಿಕ್ ರೆಮಿಂಗ್ಟನ್ ಅವರನ್ನು ಕ್ಯೂಬಾಗೆ ಕಳುಹಿಸಿದ್ದ ಹರ್ಸ್ಟ್‌, ‘ನೀವು ಕೇವಲ ಚಿತ್ರಗಳನ್ನು ಕೊಡಿ, ನಾನು ಯುದ್ಧ ಮಾಡಿಸುತ್ತೇನೆ’ ಎಂದಿದ್ದ.

ಜನಾಭಿಪ್ರಾಯ ರೂಪಿಸುವಲ್ಲಿ ತನ್ನದೇ ಪಾತ್ರ ವಹಿಸುವ ಮಾಧ್ಯಮಗಳು ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯಬೇಕು ಎಂಬ ಅಭಿಪ್ರಾಯವನ್ನು ದೇಶದ ಉದ್ದಗಲಕ್ಕೂ ಹರಡಲು ಮುಂದಾಗಿವೆ. ಪ್ರತಿದಿನವೂ, ಪ್ರತಿಗಂಟೆಯೂ ಯುದ್ಧೋನ್ಮಾದದ ವರದಿಗಳನ್ನು ಪ್ರಸಾರ ಮಾಡುತ್ತಿವೆ.

ಆದರೆ, ಈಗಾಗಲೇ ಕಳೆದೆರಡು ವರ್ಷಗಳಿಂದ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್, ಉಕ್ರೇನ್ ಮೇಲೆ ರಷ್ಯಾ ನಿರಂತರ ದಾಳಿ ನಡೆಸುತ್ತಿವೆ. ಈ ಎರಡು ಸಂಘರ್ಷಗಳಲ್ಲಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ, ನಿರ್ಗತಿಕರಾಗಿದ್ದಾರೆ. ಆ ರಾಷ್ಟ್ರಗಳ ಸಂಪತ್ತು ನಾಶವಾಗಿದೆ. ಆರ್ಥಿಕತೆಗೆ ಭಾರೀ ಪೆಟ್ಟು ಬಿದ್ದಿದೆ. ಪ್ಯಾಲೆಸ್ತೀನ್ ಮತ್ತು ಉಕ್ರೇನ್ ಅಕ್ಷರಶಃ ನಲುಗಿ ಹೋಗಿವೆ, ದಾಳಿಕೋರ ಇಸ್ರೇಲ್ ಮತ್ತು ರಷ್ಯಾ ಕೂಡ ಸಾಕಷ್ಟು ತೊಂದರೆ ಅನುಭವಿಸಿವೆ.  

ಇಂತಹ ಭೀಕರ ಉದಾಹರಣೆಗಳು ಕಣೆದುರು ಇರುವಾಗ, ಅಂತಹ ಮತ್ತೊಂದು ಸಂಘರ್ಷ ಜಗತ್ತಿಗೆ ಬೇಕಿಲ್ಲ. ಅದರಲ್ಲೂ ಭಾರತವು ಹಿಂಸೆ, ಕ್ರೌರ್ಯ, ಯುದ್ಧವನ್ನು ಬಯಸುವುದಿಲ್ಲ. ಸಂಘರ್ಷವನ್ನು ಕೊನೆಗಾಣಿಸುವ ಕುರಿತು ಜಗತ್ತಿನ ಪ್ರಭಾವಿ ರಾಷ್ಟ್ರಗಳ ಮತ್ತು ಅವುಗಳ ನಾಯಕರು ಮಾತನಾಡುತ್ತಿದ್ದಾರೆ. ಕರೆ ಕೊಡುತ್ತಿದ್ದಾರೆ. ಭಾರತವು ಜಗತ್ತಿನ ಮಾತಿಗೆ ಕಿವಿಗೊಡುತ್ತಿದೆ. ಜೊತೆಗೆ, ಅನಿವಾರ್ಯ ಸಂದರ್ಭಕ್ಕಾಗಿ ಸೇನಾ ಸಿದ್ದತೆಯನ್ನೂ ನಡೆಸುತ್ತಿದೆ. ಆದರೆ, ಭಕ್ತರು ಮಾತ್ರ ಯುದ್ಧವನ್ನು ಬಯಸುತ್ತಿದ್ದಾರೆ. ಮಾಧ್ಯಮಗಳು ಭಕ್ತರನ್ನು ಪ್ರಚೋದಿಸುವ ಕೃತ್ಯಕ್ಕಿಳಿದಿವೆ.

ಇದೇ ಹೊತ್ತಿನಲ್ಲಿ ಆಲ್ಟ್‌ ನ್ಯೂಸ್‌ನ ಸಹ ಸಂಸ್ಥಾಪಕ ಮೊಹಮ್ಮದ್ ಝುಬೇರ್ ಅವರು ಮಾಧ್ಯಮಕ್ಕೆ ಯುದ್ಧೋನ್ಮಾದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮಗಳು ಬಿತ್ತಿರಿಸುವ ಸುಳ್ಳು ವರದಿಗಳು, ಪ್ರಸಾರ ಮಾಡುವ ನಕಲಿ ಅಥವಾ ಹಳೆಯ ವಿಡಿಯೋಗಳ ಹಿಂದಿನ ಸತ್ಯಾಸತ್ಯತೆಯನ್ನು ಬಯಲಿಳೆಯುತ್ತಿದ್ದಾರೆ. ಜನರಿಗೆ ವಾಸ್ತವವನ್ನು ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಝುಬೇರ್ ಮಾಡುತ್ತಿರುವ ರೀತಿಯ ಕೆಲಸಗಳು ಹೆಚ್ಚಾಗಬೇಕಿರುವ ತುರ್ತು ಇದೆ.

ಭಾರತದ ಈ ಕ್ರಮ ಪಾಕಿಸ್ತಾನಿ ನೆಲೆಯ ಭಯೋತ್ಪಾದಕ ಕೃತ್ಯಗಳಿಗೆ ಪ್ರತಿಕ್ರಮವೇ ವಿನಾ ತಾನಾಗಿ ಮೇಲೆ ಬಿದ್ದು ನಡೆಸಿದ ದಾಳಿಯಲ್ಲ. ಹೀಗಾಗಿ ಪಾಕಿಸ್ತಾನ ಇನ್ನಷ್ಟು ಚೇಷ್ಟೆಯ ದುಸ್ಸಾಹಸ ಮಾಡುವುದು ತನಗೇ ಒಳಿತಲ್ಲ. ದಾಳಿ ಪ್ರತಿದಾಳಿಗಳ ಈ ಸರಣಿ ಇಲ್ಲಿಗೆ ಕೊನೆಗೊಳ್ಳುವುದೇ ಸರಿ. ಯುದ್ಧವೆಂಬುದು ವ್ಯರ್ಥದ ಕಸರತ್ತು. ಈ ನಿರರ್ಥಕ ಬಡಿದಾಟದಲ್ಲಿ ಸೋತು ಸೊರಗುವವರು ದೇಶಗಳ ಜನಸಾಮಾನ್ಯರೇ ಎಂಬುದನ್ನು ಮರೆಯುವಂತಿಲ್ಲ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X