ಬೆಂಗಳೂರಿನಲ್ಲಿರುವ ಡಾ. ರಾಜ್‌ಕುಮಾರ್ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಡಿ ಅಭಿವೃದ್ಧಿ ಕಾರ್ಯಕ್ರಮ ಕುರಿತು ವಿಷಯ ಪ್ರಸ್ತಾಪಿಸಿದ ಅವರು, “2015-16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪಿಸಲು ಘೋಷಿಸಲಾಗಿತ್ತು. ನಂತರದ ಸರ್ಕಾರವು ಸದರಿ ಚಿತ್ರನಗರಿಯನ್ನು ಬೆಂಗಳೂರಿಗೆ ಸ್ಥಳಾಂತರಗೊಳಿಸಲು ಉದ್ದೇಶಿಸಿತ್ತು. ಆದರೆ ಇಲ್ಲಿಯವರೆಗೂ ಅನುಷ್ಠಾನಗೊಳಿಸಿರುವುದಿಲ್ಲ. ನಮ್ಮ ಸರ್ಕಾರವು ಹಿಂದೆ ಘೋಷಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲಿದೆ” ಎಂದರು.
ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ, ಆಯ್ಕೆ ಸಮಿತಿಗಳನ್ನು ರಚಿಸಿ, ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು.
ಪತ್ರಕರ್ತರಿಗೆ 12 ಸಾವಿರ ರೂ ಮಾಸಾಶನ
ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ನೀಡಲಾಗುವ ಮಾಸಾಶನ ಮೊತ್ತವನ್ನು 10 ಸಾವಿರ ರೂ. ಗಳಿಂದ 12 ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು. ಮಾಸಾಶನ ಪಡೆಯುವ ಪತ್ರಕರ್ತರು ಮೃತಪಟ್ಟಾಗ ನೀಡಲಾಗುವ ಕುಟುಂಬ ಮಾಸಾಶನ ಮೊತ್ತವನ್ನು ಮೂರು ಸಾವಿರ ರೂ. ಗಳಿಂದ ಆರು ಸಾವಿರ ರೂ. ಗಳಿಗೆ ಹೆಚ್ಚಿಸಲಾಗುವುದು.