ಆಪರೇಷನ್ ಸಿಂಧೂರ್ ಘೋಷಣೆಯಡಿ ಭಯೋತ್ಪಾದನೆಯ ವಿರುದ್ಧ ಸದೃಢ ನಿಲುವು ತೆಗೆದುಕೊಂಡು ಉಗ್ರಗಾಮಿಗಳ ನೆಲೆಗಳ ಮೇಲೆ ದಾಳಿಗೈದ ಭಾರತೀಯ ಸೇನೆಗೆ ಡಿವೈಎಫ್‌ಐ ಕರ್ನಾಟಕ ಬಳ್ಳಾರಿ ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿ ಸ್ವಾಗತಿಸುತ್ತದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಈಡಗೇರ ಹೇಳಿದರು.
“ಪಹಲ್ಗಾಮ್‌ನಲ್ಲಿ ಅಮಾಯಕ ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದದ್ದು ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ. ಈ ಘೋರ ಕೃತ್ಯದ ನಂತರ ದೇಶದ ಜನತೆ ಭಯೋತ್ಪಾದನೆಯ ವಿರುದ್ಧ ಬಲವಾಗಿ ಪ್ರತಿರೋಧಿಸಿತು. ಡಿವೈಎಫ್‌ಐ ಸಂಘಟನೆಯು ಭಯೋತ್ಪಾದನೆಯ ವಿರುದ್ಧ ದೃಢ ನಿಲುವು ತೆಗೆದುಕೊಂಡು ಪ್ರತಿರೋಧ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷವು ಸರ್ಕಾರದ ಕ್ರಮಗಳಿಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದವು. ಇದು ಭಯೋತ್ಪಾದನೆಯ ವಿರುದ್ಧ ದೇಶದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ” ಎಂದರು.
“ಧಾರ್ಮಿಕ ಭಯೋತ್ಪಾದನೆ, ಕೋಮುವಾದ ಮತ್ತು ನಮ್ಮ ರಾಷ್ಟ್ರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವ ವಿಭಜಕ ಶಕ್ತಿಗಳ ವಿರುದ್ಧ ಡಿವೈಎಫ್‌ಐ ಯಾವಾಗಲೂ ನಿಂತಿದೆ. ತ್ಯಾಗ ಮತ್ತು ಪ್ರತಿರೋಧದ ಪರಂಪರೆಯೊಂದಿಗೆ, ನಮ್ಮ ದೇಶದ ಏಕತೆಯನ್ನು ಮುರಿಯುವ ಎಲ್ಲಾ ಪ್ರಯತ್ನಗಳನ್ನು ಡಿವೈಎಫ್‌ಐ ವಿರೋಧಿಸುವುದನ್ನು ಮುಂದುವರಿಸುತ್ತದೆ. ಕ್ರೂರ ಪಹಲ್ಗಾಮ್ ದಾಳಿಯ ಹಿಂದಿನ ನಿಜವಾದ ಅಪರಾಧಿಗಳು ಮತ್ತು ಮಾಸ್ಟರ್ ಮೈಂಡ್‌ಗಳನ್ನು ಗುರುತಿಸಿ ಮಟ್ಟಹಾಕಬೇಕಿದೆ” ಎಂದು ತಿಳಿಸಿದರು.
ಇದನ್ನೂ ಓದಿ: ಬಳ್ಳಾರಿ | ಮೇ 20ರಂದು ಅಂಗನವಾಡಿ ನೌಕರರ ಮುಷ್ಕರ
“ಪಹಲ್ಗಾಮ್‌ನಲ್ಲಿ ಅಮಾಯಕರ ಹತ್ಯಾಕಾಂಡಕ್ಕೆ ಕಾರಣರಾದವರನ್ನು ಹಸ್ತಾಂತರಿಸಲು ಮತ್ತು ಯಾವುದೇ ಭಯೋತ್ಪಾದಕ ಶಿಬಿರಗಳು ತನ್ನ ಭೂಪ್ರದೇಶದಿಂದ ಕಾರ್ಯನಿರ್ವಹಿಸದಂತೆ ನೋಡಿಕೊಳ್ಳಲು ಪಾಕಿಸ್ತಾನದ ಮೇಲೆ ಒತ್ತಡವನ್ನು ಮುಂದುವರೆಸಬೇಕು ಮತ್ತು ಭಾರತ ಸರ್ಕಾರವು ಜನರ ಏಕತೆ ಹಾಗೂ ದೇಶದ ಸಮಗ್ರತೆಯನ್ನು ರಕ್ಷಿಸುವುದನ್ನು ಖಚಿತಪಡಿಸಬೇಕು” ಎಂದು ಒತ್ತಾಯಿಸಿದರು.