ಹಿರಿಯ ಹೋರಾಟಗಾರ, ದಾವಣಗೆರೆ ಜಿಲ್ಲಾ ಸಿಪಿಐ(ಎಂ) ಮಾಜಿ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಕೆ ಲಕ್ಷ್ಮೀನಾರಾಯಣ ಭಟ್ (ಕೆ.ಎಲ್.ಭಟ್) ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರ ಇಚ್ಛೆಯಂತೆಯೇ ಅವರ ಮೃತದೇಹವನ್ನು ಜೆಜೆಎಂ ವೈದ್ಯಕೀಯ ಕಾಲೇಜಿಗೆ ದಾನ ನೀಡಲಾಗುತ್ತದೆ ಎಂದು ಪಕ್ಷವು ತಿಳಸಿದೆ.
82 ವರ್ಷದ ಕೆ.ಎಲ್ ಭಟ್ ಅವರು ದಾವಣಗೆರೆಯ ಎಲ್‌ಐಸಿ ಕಾಲೋನಿಯಲ್ಲಿ ನೆಲೆಸಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅಸಂಖ್ಯಾತ ಚಳವಳಿಯ ಒಡನಾಡಿಗಳನ್ನು ಆಗಲಿದ್ದಾರೆ.
ಭಟ್ ಅವರು ಬದುಕಿದ್ದಾಗಲೇ, ತಮ್ಮ ನಿಧನದ ಬಳಿಕ ತಮ್ಮ ಮೃತದೇಹವನ್ನು ಜೆಜೆಎಂ ವೈದ್ಯಕೀಯ ಕಾಲೇಜಿಗೆ ನೀಡಬೇಕೆಂದು ಸೂಚಿಸಿದ್ದರು. ಅವರ ಇಚ್ಛೆಯಂತೆ ಅವರ ಮೃತದೇಹವನ್ನು ಶುಕ್ರವಾರ ಕಾಲೇಜಿಗೆ ವೈದ್ಯಕೀಯ ಸಂಶೋಧನೆಗಾಗಿ ಹಸ್ತಾಂತರಿಸಲಾಗುತ್ತದೆ ಎಂದು ಪಕ್ಷ ಮತ್ತುಕುಟುಂಬದ ಮೂಲಗಳು ತಿಳಿಸಿವೆ.
ಕೆ.ಎಲ್ ಭಟ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ. ಪ್ರಕಾಶ್.ಕೆ, “ಉಡುಪಿ ಜಿಲ್ಲೆಯ ಕೊಲ್ಲೂರು ಲಕ್ಷ್ಮೀನಾರಾಯಣ ಭಟ್ ಅವರು 1960ರ ದಶಕ ಕೊನೆಯಲ್ಲಿ ಭಾರತೀಯ ಜೀವ ವಿಮಾ ನಿಗಮದಲ್ಲಿ ದಾವಣಗೆರೆ ಶಾಖೆಯಲ್ಲಿ ಓರ್ವ ಗುಮಾಸ್ತನಾಗಿ ಕೆಲಸ ಆರಂಭಿಸಿದ್ದರು. ಬಳಿಕ ವಿಮಾ ನೌಕರರ ಸಂಘದ ನಾಯಕರಾಗಿ ನೌಕರರ ಮೇಲೆ ನಡೆಯುತ್ತಿದ್ದ ಶೋಷಣೆ ವಿರುದ್ದ ಹೋರಾಡುತ್ತಾ ಸಿಪಿಐ(ಎಂ) ಪಕ್ಷದಲ್ಲಿ ವಿವಿಧ ಹಂತಗಳಲ್ಲಿ ಕೆಲಸಮಾಡಿದರು. ಅದರ ಜತೆಗೆ ದಾವಣಗೆರೆಯಲ್ಲಿ ಸಮುದಾಯ ಸಾಂಸ್ಕೃತಿಕ ಸಂಘಟನೆ ಕಾರ್ಯದರ್ಶಿಯಾಗಿ ಅಪಾರ ಕೆಲಸಮಾಡಿದ್ದರು” ಎಂದು ಸ್ಮರಿಸಿದ್ದಾರೆ.
“ಭಟ್ ಅವರು ನಿವೃತ್ತಿ ಬಳಿಕಾವೂ ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮಪಂಚಾಯತ್ ನೌಕರರು ಸೇರಿ ವಿವಿಧ ಅಸಂಘಟಿತ ವಲಯದ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಲೇ ಸಿಐಟಿಯು ಜಿಲ್ಲಾಸಂಚಾಲಕರಾಗಿ ಬಳಿಕ ಸಿಪಿಎಂ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ದುಡಿಯುವ ಜನರ ಮೇಲೆ ನಡೆಯುತ್ತಿರುವ ನಿರಂತರವಾದ ದಾಳಿಗಳ ವಿರುದ್ದ ಚಳವಳಿಗಳನ್ನು ಮುನ್ನಡೆಸಿದ್ದರು. ವಿಶೇಷವಾಗಿ ದಾವಣಗೆರೆಯಲ್ಲಿ 90 ದಶಕದಲ್ಲಿ ನಡೆದ ಕೋಮುಸಂಘರ್ಘ ಮತ್ತುಕೋಮು ಗಲಭೆಗಳಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳ ಪರವಾಗಿ ಹಾಗೂ ಶಾಂತಿ ಸ್ಥಾಪನೆಯಾಗಿ ಮತ್ತು ಜನರನ್ನು ವಿಭಜಿಸುವ ಹಿಂದುತ್ವವಾದಿಗಳ ವಿರುದ್ದ ಮತ್ತು ಸಮಾಜದಲ್ಲಿ ಶಾಂತಿಸಾಮರಸ್ಯಕ್ಕಾಗಿ ದಾವಣಗೆರೆ ವಿವಿಧ ಜನಪರ,ಜೀವಪರ ಸಂಘಟನೆಗಳು ಹಾಗೂ ವ್ಯಕ್ತಿಗಳನ್ನು ಒಳಗೊಂಡು ಅವಿತರವಾಗಿ ಶ್ರಮಿಸಿದ್ದರು” ಎಂದು ತಿಳಿಸಿದ್ದಾರೆ.