ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ₹5,000 ದಂಡ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಹೆಚ್ಚುವರಿ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ(ಪೋಕ್ಸೊ) ನ್ಯಾಯಾಲಯ ಆದೇಶ ಹೊರಡಿಸಿದೆ.
ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಬಸಾಪುರ ಗ್ರಾಮದ ಭೀಮೇಶ ಎಂಬಾತ ಶಹಾಪುರ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತ ಬಾಲಕಿ ಶಹಾಪುರ ಉರುಸಿಗೆ ಹೋದಾಗ ಆಕೆಯನ್ನು ಪರಿಚಯ ಮಾಡಿಕೊಂಡಿದ್ದು, ಕಾಲೇಜಿಗೆ ಹೋಗಿ ಬರುವಾಗ ಹಿಂಬಾಲಿಸಿ ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಬಾಲಕಿಯನ್ನು ಪುಸಲಾಯಿಸಿ 2022ರ ಆಗಸ್ಟ್ 13ರಂದು ಸಾಲು ಮರದ ತಿಮ್ಮಕ್ಕ ಪಾರ್ಕ್‌ನಲ್ಲಿ ಆಕೆಯ ಮೇಲೆ ಪ್ರಥಮ ಬಾರಿಗೆ ಸಂಭೋಗ ಮಾಡಿರುತ್ತಾನೆ.
ಆರೋಪಿತನು ಬೇರೆ ಬೇರೆ ಸ್ಥಳಗಳಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 2022ರ ಸೆಪ್ಟೆಂಬರ್ 1ರಂದು ಸಂತ್ರಸ್ತೆ ಕಾಲೇಜಿಗೆಂದು ಕೊಪ್ಪಳಕ್ಕೆ ಹೋಗಿ ಅಲ್ಲಿ ಪರೀಕ್ಷೆ ಬರೆದು ಗಂಗಾವತಿಗೆ ತೆರಳಿ ಯಾರಿಂದಲೋ ₹500 ಫೋನ್ ಪೇ ಮಾಡಿಸಿಕೊಂಡು ಮಂಡ್ಯಕ್ಕೆ ಹೋಗಿ ಅಲ್ಲಿಂದ ಮಳವಳ್ಳಿಗೆ ಹೋಗಿ ಅಲ್ಲಿನ ಒಂದು ನರ್ಸರಿಯಲ್ಲಿ ಹಾಕಿರುವ ಶೆಡ್ಡಿನಲ್ಲಿ ವಾಸವಾಗಿದ್ದು, ಆರೋಪಿ ಅಲ್ಲಿಯೂ ಅತ್ಯಾಚಾರ ಎಸಗಿದ್ದನು. ಈ ಆರೋಪದ ಹಿನ್ನೆಲೆಯಲ್ಲಿ ಮುನಿರಾಬಾದ್ ಪೋಲಿಸರು ದೂರು ಸ್ವೀಕರಿಸಿ ಶ್ರೀದೇವಿ ಸಿಎಚ್‌ಸಿ ಇವರು ಪ್ರಕರಣದ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ ಮುಂದಿನ ತನಿಖೆಯನ್ನು ಕೊಪ್ಪಳ ಸಿಪಿಐ ವಿಶ್ವನಾಥ ಹಿರೇಗೌಡರ ಅವರು ಪ್ರಕರಣ ನಿರ್ವಹಿಸಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ ನಗರದ ಸಮಗ್ರ ಅಭಿವೃದ್ಧಿಗಾಗಿ ಮೂಲಸೌಲಭ್ಯಗಳ ಹೆಚ್ಚಳ: ಸಚಿವ ಪ್ರಿಯಾಂಕ್ ಖರ್ಗೆ
ಸರ್ಕಾರದ ಪರವಾಗಿ ಗೌರಮ್ಮ ಎಲ್ ದೇಸಾಯಿ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ಮುನಿರಾಬಾದ್ ಪೊಲೀಸ್ ಠಾಣೆಯ ಸಿಬ್ಬಂದಿ ಹನುಮಂತಪ್ಪ ಸಿಎಚ್‌ಸಿ ಇವರು ಸಕಾಲಕ್ಕೆ ಸಾಕ್ಷಿದಾರರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಲ್ಲಿ ಸಹಕರಿಸಿರುತ್ತಾರೆ ಎಂದು ವಿ ಸರ್ಕಾರಿ ಅಭಿಯೋಜಕರು(ಪೋಕ್ಸೊ) ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.