ಭಾರತದ 15 ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಯತ್ನಿಸಿರುವ ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸಿದ ಬೆನ್ನಲ್ಲೇ, ಪಾಕಿಸ್ತಾನ ದೇಶವು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳ ಮೇಲೆ ಅಗಾಧವಾದ ದಾಳಿಯನ್ನು ಪ್ರಾರಂಭಿಸಿದೆ. ಗಡಿಯಲ್ಲಿ ಯುದ್ಧ ಸ್ಥಿತಿ ನಿರ್ಮಾಣವಾಗಿದೆ.
ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿರುವ ಗಡಿ ಪ್ರದೇಶಗಳಾದ ಆರ್‌ಎಸ್ ಪುರ, ಅರ್ನಿಯಾ, ಸಾಂಬಾ, ಹಿರಾನಗರಗಳು ಭಾರೀ ಶೆಲ್ ದಾಳಿಗೆ ಒಳಗಾಗಿದ್ದರೆ, ಭಾರತೀಯ ವಾಯುಪಡೆ ಪಾಕ್ ದಾಳಿಯನ್ನು ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಆರ್‌ಎಸ್ ಪುರ, ಅರ್ನಿಯಾ, ಸಾಂಬಾ, ಹಿರಾನಗರ ಭಾರೀ ಮಿಲಿಟರಿ ಹೊಂದಿರುವ ಪ್ರದೇಶಗಳಾಗಿದ್ದು, ಈ ಪ್ರದೇಶಗಳ ಮೇಲೆ ಎಂಟು ಕ್ಷಿಪಣಿಗಳನ್ನು ಹಾರಿಸಲಾಗಿದೆ. ಈ ಎಲ್ಲವನ್ನೂ ಭಾರತೀಯ ವಾಯುಪಡೆ ತಡೆದು ನಿಲ್ಲಿಸಿದೆ.
ರಾತ್ರಿ 9 ಗಂಟೆಗೆ ಸ್ವಲ್ಪ ಮೊದಲು, ಜಮ್ಮುವಿನಿಂದ ಜೋರಾಗಿ ಸ್ಫೋಟಗಳು ಕೇಳಿಬಂದವು. ನಂತರ ಸೈರನ್‌ಗಳ ಕೂಗು ಹಾಕಿ, ಬ್ಲ್ಯಾಕೌಟ್ ಮಾಡಲಾಗಿದೆ.
ಸ್ಥಳೀಯರು ಕಳುಹಿಸಿದ ಸೆಲ್‌ಫೋನ್ ವಿಡಿಯೊಗಳು ಯುದ್ಧದ ಸ್ಥಿತಿಯನ್ನು ವಿವರಿಸುತ್ತಿವೆ.
ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನ ಮೂಲದ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಜಮ್ಮು, ಪಠಾಣ್‌ಕೋಟ್ ಮತ್ತು ಉಧಂಪುರದಲ್ಲಿರುವ ಮಿಲಿಟರಿ ನೆಲೆಗಳನ್ನು ಟಾರ್ಗೆಟ್ ಮಾಡಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಯಾವುದೇ ಸಾವುನೋವುಗಳು ಅಥವಾ ಆಸ್ತಿಪಾಸ್ತಿ ನಾಶವಾದ ಸಂಬಂಧ ವರದಿಯಾಗಿಲ್ಲ. ರಕ್ಷಣಾ ಸಚಿವಾಲಯವು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, “ಭಾರತವು ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಸಿದ್ಧವಾಗಿದೆ” ಎಂದು ತಿಳಿಸಿದೆ.
ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆಹಿಡಿಯಲಾಗಿದೆ. ಸ್ಫೋಟಗಳು ಕೇಳಿಬರುತ್ತಿವೆ.
ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನೂ ರದ್ದು ಮಾಡಲಾಗಿದೆ. ವಿಶೇಷ ರೈಲಿನ ಮೂಲಕ ಆಟಗಾರರು ಮತ್ತು ಸಿಬ್ಬಂದಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಯೋಜಿಸಲಾಗಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ ಭಾರತದ ಪ್ರತಿ ದಾಳಿಯ ಸಾಧ್ಯತೆಯಿಂದಾಗಿ ಪಾಕಿಸ್ತಾನದಲ್ಲಿ ಪಿಎಸ್‌ಎಲ್ ಪಂದ್ಯವನ್ನೂ ಮುಂದೂಡಲಾಗಿದೆ.