ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ದಿದೇ-ದಿನೇ ಹೆಚ್ಚುತ್ತಿದೆ. ಎರಡು ರಾಷ್ಟ್ರಗಳ ನಡುವೆ ದಾಳಿ-ಪ್ರತಿದಾಳಿಗಳು ನಡೆಯುತ್ತಿವೆ. ಇದೇ ವೇಳೆ, ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ನಕಲಿ ವಿಡಿಯೋಗಳು, ಹಳೆಯ ವಿಡಿಯೋಗಳು ಹಾಗೂ ಸುಳ್ಳು ಸುದ್ದಿಗಳು ವೈರಲ್ ಆಗುತ್ತಿವೆ. ಇದೀಗ, ಗುರುವಾರ ರಾತ್ರಿ ಭಾರತೀಯ ನೌಕಾಪಡೆಯು ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ ಎಂಬ ಸುಳ್ಳು ಸುದ್ದಿಯನ್ನು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ.
ಅರಬ್ಬೀ ಸಮುದ್ರದಲ್ಲಿ ನೆಲೆಗೊಂಡಿರುವ ನೌಕಾಪಡೆಯ ಪ್ರಬಲ ಐಎನ್ಎಸ್ ವಿಕ್ರಾಂತ್ ಯುದ್ಧ ನೌಕೆಯು ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ ಎಂಬ ಶೀರ್ಷಿಕೆ ಜೊತೆಗೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ಗಳು ವೈರಲ್ ಆಗಿದೆ.
ಆದರೆ, ಕರಾಚಿ ಮೇಲಿನ ದಾಳಿ ಬಗ್ಗೆ ಭಾರತ ಸೇನೆಯಾಗಲೀ ಅಥವಾ ಪಾಕಿಸ್ತಾನವಾಗಲೀ ದೃಢಪಡಿಸಿಲ್ಲ. ಅಧಿಕೃತ ಮಾಹಿತಿಯನ್ನೂ ನೀಡಿಲ್ಲ. ಅಧಿಕೃತ ವರದಿಗಳ ಪ್ರಕಾರ, ಭಾರತೀಯ ನೌಕಾಪಡೆ ಇನ್ನೂ ಯಾವುದೇ ದಾಳಿಯನ್ನು ಪ್ರಾರಂಭಿಸಿಲ್ಲ. ಆದರೆ ಭಾರತವನ್ನು ಸಮುದ್ರದಿಂದ ರಕ್ಷಿಸುತ್ತಿದೆ ಮತ್ತು ಪಾಕಿಸ್ತಾನದ ದಾಳಿಯನ್ನು ಎದುರಿಸಲು ಸಿದ್ಧವಾಗಿದೆ.
ವರದಿಗಳ ಪ್ರಕಾರ, ಕರಾಚಿ ಬಂದರಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ನಾಗರಿಕರು ತಮ್ಮ ಮನೆಗಳೊಳಗೆ ಇರಬೇಕೆಂದು ಎಚ್ಚರಿಕೆಯ ಸೈರನ್ಗಳು ನಿರಂತರವಾಗಿ ಸದ್ದು ಮಾಡುತ್ತಿವೆ.
ಈ ನಡುವೆ, ಗುರುವಾರ ಜಮ್ಮು ಮೇಲೆ ಪಾಕಿಸ್ತಾನ ದಾಳಿ ಮಾಡಿದೆ. ಜಮ್ಮುವಿನ ಸತ್ವಾರಿ, ಸಾಂಬಾ, ಆರ್ಎಸ್ ಪುರ ಮತ್ತು ಅರ್ನಿಯಾ ಕಡೆಗೆ ಪಾಕಿಸ್ತಾನ ಎಂಟು ಕ್ಷಿಪಣಿಗಳನ್ನು ಹಾರಿಸಿದೆ. ಅವೆಲ್ಲವನ್ನೂ ವಾಯು ರಕ್ಷಣಾ ಘಟಕಗಳು ತಡೆಹಿಡಿದು ನಿರ್ಬಂಧಿಸಿವೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
ಅಲ್ಲದೆ, ರಾಜಸ್ಥಾನದ ಬಿಕಾನೇರ್ ಮತ್ತು ಪಂಜಾಬ್ನ ಜಲಂಧರ್ನಲ್ಲಿ ಸಂಪೂರ್ಣ ಬ್ಲಾಕೌಟ್ ಜಾರಿಗೊಳಿಸಲಾಗಿದೆ. ಕಿಶ್ತ್ವಾರ್, ಅಖ್ನೂರ್, ಸಾಂಬಾ, ಅಮೃತಸರದಲ್ಲಿಯೂ ಬ್ಲಾಕೌಟ್ ಜಾರಿಗೊಳಿಸಲಾಗಿದೆ.