ರೈತನ ಮೇಲೆ ಕ್ರೂರತನದ ದೌರ್ಜನ್ಯ ಎಸಗಿದ್ದು, ಗುಂಡಿನ ದಾಳಿ ನಡೆಸಿರುವುದು ಅಸ್ವೀಕಾರ ಮತ್ತು ಅಕ್ಷಮ್ಯ. ಇದು ಕಂದಾಯ ಇಲಾಖೆ ಮತ್ತು ಗಣಿ ಇಲಾಖೆಯ ಕುಕೃತ್ಯ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಕಣಗಾನಕೊಪ್ಪ ಗ್ರಾಮದ ಸ.ನಂ.178ರಲ್ಲಿ ಮತ್ತು ಸ.ನಂ.34ರಲ್ಲಿ ಕ್ರಷರ್‌ಗೆ ಅನುಮತಿ ಕೊಟ್ಟಿದ್ದಾರೆ. ಪಿನಾಕಿನಿ ಜಲಾನಯನ ಪ್ರದೇಶಕ್ಕೆ ಸೇರಿದ್ದು, ಮಂಚೇನಹಳ್ಳಿ ಗ್ರಾಮಕ್ಕೆ ಹತ್ತಿರವಾದ ಜಾಗ ಎಂದು ಹೇಳಿದರು.

ಕೆಲವರು ಗಣಿಗಾರಿಕೆ ಮಾಡಿ ಜೀವನ ನಡೆಸಬೇಕೆಂದು ಬಂದಿದ್ದಾರೆ. ಆದ್ದರಿಂದಲೇ ಇಲ್ಲಿನ ಬೆಟ್ಟ, ಪರಿಸರವನ್ನು ನಾಶ ಮಾಡಲು ಮುಂದಾಗಿದ್ದಾರೆ. ರವಿಕುಮಾರ್ ಎಂಬ ರೈತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ದೇಶದಲ್ಲಿ ಮಾಡಬಾರದ ಕೆಲಸಗಳನ್ನು ಮಾಡುತ್ತಿದ್ದು, ಇಂತಹ ಕಿಡಿಗೇಡಿಗಳಿಗೆ ತಕ್ಷ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.
ಅಧಿಕೃತ ದಾಖಲಿಗಳಿಲ್ಲದೆ ನಾನು ಯಾರ ಮೇಲೂ ಆರೋಪ ಮಾಡುವುದಿಲ್ಲ. ಆದರೆ, ದಾಖಲೆ ಸಿಕ್ಕರೆ ಮಾತ್ರ ಬಿಡುವುದಿಲ್ಲ. ಜನರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವುದು ನ್ಯಾಯ ಕೊಡಿಸುವ ಶಕ್ತಿಯಿಂದ ಸಾಧ್ಯ. ಹಾಗಾಗಿ ಎಲ್ಲರೂ ದೃಢಸಂಕಲ್ಪ ಮಾಡಿ ಜನರಿಗೆ ಮೋಸ ಮಾಡುವ ಕಡೆ ಜನಪ್ರತಿನಿಧಿಗಳಿಗೆ ಬುದ್ಧಿ ಕಲಿಸುವ ಕೆಲಸಕ್ಕೆ ಮುಂದಾಗಬೇಕು. ಬಿಜೆಪಿಯವರಿಗೆ ಭೂಮಿ ಹದಮಾಡಿಕೊಟ್ಟಿದ್ದು ಕಾಂಗ್ರೆಸ್‌ನವರು. ಎಲ್ಲಾ ಪಕ್ಷಗಳಲ್ಲೂ ಇಂತಹವರು ಇದ್ದಾರೆ. ಸದಾ ಜಾಗೃತರಾಗಿದ್ದರೆ ಮಾತ್ರ ನಾವು ಸ್ವತಂತ್ರರಾಗಿರಲು ಸಾಧ್ಯ ಎಂದು ಎಸ್.ಆರ್.ಹಿರೇಮಠ್ ಹೇಳಿದರು.
ಇದನ್ನೂ ಓದಿ : ಶಿಡ್ಲಘಟ್ಟ | ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಜಪ್ತಿಹೊಸಹಳ್ಳಿ ಪ್ರಕಾಶ್ ಅವಿರೋಧ ಆಯ್ಕೆ
ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣ ಮಾತನಾಡಿ, ಕಂದಾಯ ಇಲಾಖೆ ವರದಿ ಮೇಲೆ ಅನುಮತಿ ಕೊಟ್ಟಿದ್ದೇವೆ ಎಂದು ಗಣಿ ಇಲಾಖೆ ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಷ್ಟೆಲ್ಲಾ ಆಗಿದೆ. ಗಣಿ ಪರವಾನಗಿ ರದ್ದಾಗುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘ ನರಸಿಂಹಮೂರ್ತಿ, ಲೋಕೇಶ್ ಹಾಗೂ ಇತರರಿದ್ದರು.