- ಮಧ್ಯಪ್ರದೇಶ ಗ್ರಾಮದಲ್ಲಿ ಯುವಕರಿಗೆ ಮಲ ತಿನ್ನಿಸಿದ ಪ್ರಕರಣದಲ್ಲಿ ಆರು ಮಂದಿ ಬಂಧನ
- ಪ್ರವೇಶ್ ಶುಕ್ಲಾ ಎಂಬಾತ ಸಿಗರೇಟ್ ಸೇದುತ್ತಾ ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ
ಕೆಳ ಜಾತಿಯ ಇಬ್ಬರು ಯುವಕರ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿ ಬಲವಂತವಾಗಿ ಮಲ ತಿನ್ನಿಸಿದ ಹೀನ ಕೃತ್ಯ ಎಸಗಿರುವ ಘಟನೆ ಮಧ್ಯಪ್ರದೇಶ ಶಿವಪುರಿಯಲ್ಲಿ ನಡೆದಿರುವುದಾಗಿ ಶುಕ್ರವಾರ (ಜುಲೈ 7) ವರದಿಯಾಗಿದೆ.
ಸಂತ್ರಸ್ತ ಯುವಕರಲ್ಲಿ ಒಬ್ಬ ಜಾಟವ ಎಂಬ ದಲಿತ ಸಮುದಾಯಕ್ಕೆ ಸೇರಿದ್ದು, ಇನ್ನೊಬ್ಬ ಹಿಂದುಳಿದ ವರ್ಗ ಕೇವತ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಯುವಕರು ಕ್ರೂರ ಚಿತ್ರಹಿಂಸೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಧ್ಯಪ್ರದೇಶ ಶಿವಪುರಿಯ ನರ್ವಾರ್ ಪ್ರದೇಶದ ವಾರ್ಖಾಡಿಯಲ್ಲಿ ಜೂನ್ 30 ರಂದು ಈ ಘಟನೆ ನಡೆದಿದೆ. ಇಬ್ಬರು ಯುವಕರನ್ನು ಮನಬಂದಂತೆ ಥಳಿಸಿ, ಅವರ ಕುತ್ತಿಗೆಗೆ ಚಪ್ಪಲಿ ಹಾರ ಹಾಕಿ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಗಿದೆ. ಬಳಿಕ ಬಲವಂತವಾಗಿ ಮಲವನ್ನು ತಿನ್ನಿಸಲಾಗಿದೆ ಎಂದು ವರದಿಯಾಗಿದೆ.
ದಲಿತ ಸಮುದಾಯಕ್ಕೆ ಸೇರಿದ ಸಂತ್ರಸ್ತನ ಸಹೋದರ ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಶಿವಪುರಿ ಜಿಲ್ಲೆಯ ಪೊಲೀಸರು ಸ್ಥಳೀಯ ಅಲ್ಪಸಂಖ್ಯಾತ ಕುಟುಂಬದ ಏಳು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಈಗಾಗಲೇ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶ ಸ್ಥಳೀಯ ಪೊಲೀಸರ ತನಿಖೆಯ ನಂತರ ಯುವಕರ ಮೇಲಿರುವ ಲೈಂಗಿಕ ದೌರ್ಜನ್ಯದ ಆರೋಪಗಳು ಆಧಾರ ರಹಿತವೆಂದು ದೃಢಪಡಿಸಿವೆ. ಆಸ್ತಿ ಸಂಬಂಧಿತ ವಿವಾದಕ್ಕೆ ಆರೋಪಿಗಳು ಹೀಗೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಘಟನೆಯನ್ನು ಖಂಡಿಸಿದ್ದಾರೆ.
“ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿ ಪ್ರಕರಣ ದಾಖಲಿಸಲು ಮತ್ತು ಅವರು ಅಕ್ರಮವಾಗಿ ನಿರ್ಮಿಸಿದ ಆಸ್ತಿಗಳನ್ನು ಕೆಡವಲು ಶಿವಪುರಿ ಸ್ಥಳೀಯ ಆಡಳಿತಕ್ಕೆ ಸೂಚನೆ ನೀಡಲಾಗಿದೆ” ಎಂದು ಅವರು ಹೇಳಿದರು.
ಮಧ್ಯಪ್ರದೇಶ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಬೆನ್ನಲ್ಲೇ ಮಲ ತಿನ್ನಿಸಿದ ಘಟನೆ ವರದಿಯಾಗಿದೆ.
ಪ್ರವೇಶ್ ಶುಕ್ಲಾ ಎಂಬಾತ ಸಿಗರೇಟ್ ಸೇದುತ್ತಾ, ಸಿಧಿ ಜಿಲ್ಲೆಯ ಕುಬರಿ ಮಾರುಕಟ್ಟೆಯಲ್ಲಿ ಕುಳಿತಿದ್ದ ಆದಿವಾಸಿ ವ್ಯಕ್ತಿಯನ್ನು ನಿಂದಿಸಿ, ಆತನ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಆದೇಶದ ಮೇರೆಗೆ ಜುಲೈ 4ರ ಮಧ್ಯರಾತ್ರಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ಪ್ರವೇಶ್ ಶುಕ್ಲಾ ಮನೆಯನ್ನೂ ಜುಲೈ 5 ರಂದು ಧ್ವಂಸಗೊಳಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಪುಣೆ | ಹಿಂದೂ ಸಂಘಟನೆ ಕಾರ್ಯಕರ್ತರಿಂದ ಪ್ರಾಂಶುಪಾಲರ ಮೇಲೆ ಹಲ್ಲೆ
ಮೂತ್ರ ವಿಸರ್ಜನೆ ಪ್ರಕರಣದ ಸಂತ್ರಸ್ತ, ಆದಿವಾಸಿ ಜನಾಂಗ್ ದಶ್ಮತ್ ರಾವತ್ ಅವರ ಪಾದವನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೊಳೆದಿದ್ದಾರೆ.
ಭೋಪಾಲ್ನ ನಿವಾಸಕ್ಕೆ ಸಂತ್ರಸ್ತನನ್ನು ಕರೆಯಿಸಿಕೊಂಡ ಮುಖ್ಯಮಂತ್ರಿ ತಾವು ಕೆಳಗೆ ಕುಳಿತು, ಸಂತ್ರಸ್ತನನ್ನು ಕುರ್ಚಿ ಮೇಲೆ ಕೂರಿಸಿ ಪಾದ ತೊಳೆದಿದ್ದಾರೆ. ಬಳಿಕ ಸಂತ್ರಸ್ತನಿಗೆ ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನ ಮಾಡಿದ್ದಾರೆ.