ಬೆಳಗಾವಿ ಮತ್ತು ಬೆಂಗಳೂರು ಮಧ್ಯೆ ಹೊಸ ವಂದೇ ಭಾರತ್ ರೈಲು ಸೇವೆ ಆರಂಭವಾಗಲಿದ್ದು, ಇದು ರಾಜ್ಯಕ್ಕೆ ಬರುವ 11ನೇ ವಂದೇ ಭಾರತ್ ರೈಲಾಗಲಿದೆ.
ಇದು ಪೂರ್ತಿಯಾಗಿ ಹೊಸ ರೈಲಿನ ಓಡಾಟ. ಈಗಾಗಲೇ ಅಸ್ತಿತ್ವದಲ್ಲಿರುವ ಬೆಂಗಳೂರು-ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿನ ವಿಸ್ತರಣೆಯಾಗಿರುವುದಿಲ್ಲ ಎಂದು ರೈಲ್ವೆ ಹೇಳಿದೆ. ಈ ಮೊದಲು ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲನ್ನು ಬೆಳಗಾವಿಗೂ ವಿಸ್ತರಿಸಲಾಗುತ್ತದೆ ಎನ್ನುವ ಮಾತುಕತೆ ನಡೆದಿತ್ತು. ಆದರೆ ಈ ಬಾರಿ, ಅದರ ಬದಲಿಗೆ ಹೊಸ ರೈಲು ಓಡಾಟ ನಡೆಸಲು ನಿರ್ಧರಿಸಲಾಗಿದೆ.
ಪ್ರಸ್ತುತ ನೈರುತ್ಯ ರೈಲ್ವೆಗಾಗಿ ಮೀಸಲಾದ ರೇಕ್ ಅನ್ನು ಮಂಜೂರು ಮಾಡುವ ಮೂಲಕ ಬೆಂಗಳೂರು ಮತ್ತು ಬೆಳಗಾವಿ ಮಧ್ಯೆ ಸಂಪೂರ್ಣವಾಗಿ ಹೊಸ ಸೇವೆಯನ್ನು ಪ್ರಾರಂಭಿಸಲು ರೈಲ್ವೆ ನಿರ್ಧರಿಸಿದೆ. ಹಿರಿಯ ಅಧಿಕಾರಿಯೊಬ್ಬರು ಇದು ಹೊಸ ವಂದೇ ಭಾರತ್ ರೈಲು ಸೇವೆಯಾಗಿರಲಿದೆ ಎಂದು ಡೆಕ್ಕನ್ ಹೆರಾಲ್ಡ್‌ಗೆ ದೃಢಪಡಿಸಿರುವುದಾಗಿ ವರದಿಯಾಗಿದೆ.
ಬೆಂಗಳೂರು-ಬೆಳಗಾವಿಗೆ ಆರಂಭದಲ್ಲಿ ಒಟ್ಟು ಎಂಟು ಬೋಗಿಗಳ ರೈಲಅನ್ನು ನಿಯೋಜಿಸಲಾಗುವುದು ಮತ್ತು ಬೇಡಿಕೆಯ ಆಧಾರದ ಮೇಲೆ ಹೆಚ್ಚಿನ ಬೋಗಿಗಳನ್ನು ಸೇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮತ್ತು ಬೆಳಗಾವಿ ನಡುವೆ ಪ್ರೀಮಿಯಂ ರೈಲು ಸೇವೆಗೆ ಬೇಡಿಕೆ ಹೆಚ್ಚುತ್ತಿದೆ. ಹೊಸ ರೈಲು ಬೆಳಗ್ಗೆ ಬೆಳಗಾವಿಯಿಂದ ಹೊರಟು ಮಧ್ಯಾಹ್ನ ಕೆಎಸ್ಆರ್ ಬೆಂಗಳೂರನ್ನು ತಲುಪುತ್ತದೆ.
ಇದನ್ನೂ ಓದಿ: ಬೆಳಗಾವಿ | ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಪ್ರದರ್ಶನ; ಇಬ್ಬರು ಯುವಕರ ಬಂಧನ