ತುಮಕೂರಿನ ಕುಣಿಗಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಬಾರಿಯ ಪ್ರಥಮ ಸೆಮಿಸ್ಟರ್ ಫಲಿತಾಂಶದಲ್ಲಿ ಕಳಪೆ ಫಲಿತಾಂಶ ಹೊರಬಿದ್ದಿದೆ. ಮೂಲಸೌಕರ್ಯ ಕೊರತೆ ಹಾಗೂ ಕಾಲೇಜಿನ ಅವ್ಯವಸ್ಥೆಯ ಕುರಿತು ಸ್ಥಳೀಯರಿಂದ ದೂರು ಬಂದ ಹಿನ್ನೆಲೆ, ತಾಲೂಕು ಉಸ್ತುವಾರಿ ಅಧಿಕಾರಿ ವಿಶ್ವನಾಥ್ ನಿನ್ನೆ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಒಟ್ಟು 190 ವಿದ್ಯಾರ್ಥಿಗಳು ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆದಿದ್ದರು. ಈ ಪೈಕಿ ಕೇವಲ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇಷ್ಟು ಕಡಿಮೆ ಫಲಿತಾಂಶದ ಕುರಿತು ಆತಂಕ ವ್ಯಕ್ತಪಡಿಸಿರುವ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುರಿತ ವೈಯಕ್ತಿಕ ಮಾಹಿತಿ ಹಾಗೂ ವಿಷಯವಾರು ಉಪನ್ಯಾಸಕರ ಫಲಿತಾಂಶದ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕಾಲೇಜಿನ ಪ್ರಾಂಶುಪಾಲ ಮಾಯಾ ಸಾರಂಗ ಪಾಣಿಯವರಿಗೆ ಸೂಚಿಸಿದ್ದಾರೆ.
ಸುಮಾರು ರೂ 5 ಕೋಟಿ ವೆಚ್ಚದಲ್ಲಿ ಕಾಲೇಜಿನ ಆವರಣದಲ್ಲಿ ಸುಸಜ್ಜಿತ ಗ್ರಂಥಾಲಯ ಮತ್ತು ಪ್ರಯೋಗಾಲಯಗಳು ನಿರ್ಮಾಣಗೊಂಡಿವೆ. ಉದ್ಘಾಟನೆಯಾಗಿ ತಿಂಗಳುಗಳೇ ಕಳೆದರು ಬಳಕೆಗೆ ಸಿಗದಿರುವಷ್ಟು ದುಸ್ಥಿತಿಗೆ ತಲುಪಿರುವುದ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತುಮಕೂರು | “ನಮ್ಮ ಕನಸು, ನಮ್ಮ ತುಮಕೂರು ಶೃಂಗಸಭೆ” : ಜಿಲ್ಲೆಯ ಸಮಗ್ರ ಅಭಿವೃದ್ದಿ ಕುರಿತು ಚರ್ಚೆ
ತಾಲೂಕಿನಲ್ಲಿರುವ ಏಕೈಕ ಸರ್ಕಾರಿ ಪ್ರಥಮ ಕಾಲೇಜು ಶೈಕ್ಷಣಿಕ ಕುಂಠಿತ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಶಾಸಕರ ಸಹಿತ ನಿರಂತರವಾಗಿ ಕಾಲೇಜಿಗೆ ಭೇಟಿ ನೀಡಿ ಸಭೆ ನಡೆಸಲಾಗುವುದು. ಶೈಕ್ಷಣಿಕ ಪ್ರಗತಿಗೆ ಪೂರಕವಾದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದಾರೆ.