ಯುದ್ಧ ಎಂಬುದು ವಿಜಯ ಅಥವಾ ಪ್ರತಿಷ್ಠೆಯ ಯಾನವಲ್ಲ; ಅದು ಮಾನವತೆಯ ಮಹಾ ವೈಫಲ್ಯ. ಇಂದಿನ ಅತ್ಯಾಧುನಿಕ ಅಸ್ತ್ರಗಳು ಕೇವಲ ಶತ್ರು ನೆಲೆಗಳನ್ನಷ್ಟೇ ಅಲ್ಲ, ಮನುಷ್ಯತ್ವವನ್ನೂ ಉರಿಸಿಬಿಡುತ್ತವೆ. ಯುದ್ಧ ಶುರುವಾದ ಮರುಕ್ಷಣದಲ್ಲೇ ಬದುಕು ಅಸ್ತವ್ಯಸ್ತವಾಗಿಬಿಡುತ್ತದೆ. ಶಾಲೆಯ ಬಾಗಿಲು ಮುಚ್ಚುತ್ತದೆ, ಮಕ್ಕಳ ಮುಗುಳ್ನಗೆಗಳು ಮೌನವಾಗುತ್ತವೆ, ಸ್ವಚ್ಛಂದವಾಗಿ ಕಲರವಗುಟ್ಟುವ ಹಕ್ಕಿ ಪಕ್ಷಿಗಳು ಕೀರಲು ಮೊದಲಾಗುತ್ತವೆ. ಪರಿಸ್ಥಿತಿ ಏನಾಗುತ್ತಿರಬಹುದೆಂಬ ಕಲ್ಪನೆಯೂ ಇರದ ಪ್ರಾಣಿ ಸಂಕುಲ ದಿಕ್ಕಾಪಾಲಾಗುತ್ತದೆ. ಇನ್ನೂ..
ಗಡಿರಾಜ್ಯ ಹಿಮಾಚಲದ ಧರ್ಮಶಾಲದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯವು ಇದ್ದಕ್ಕಿದ್ದಂತೆ ನಿಂತು ಹೋಯಿತು. ಖುಷಿಯಾಗಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ ಕ್ರಿಕೆಟ್ ಪ್ರೇಮಿಗಳು ಅರೆಕ್ಷಣದಲ್ಲಿ ಆತಂಕಕ್ಕೆ ಒಳಗಾದರು. ಪಾಕಿಸ್ತಾನವು ಭಾರತದ ನೆಲೆಗಳನ್ನು ಗುರಿಯಾಗಿಸಿಕೊಂಡು ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನದ ಹಲವು ಪ್ರದೇಶಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹಾರಿಸುತ್ತಿರುವ ಸುದ್ದಿ ರಾತ್ರಿಯಿಡೀ ಕಾಡ್ಗಿಚ್ಚಿನಂತೆ ಹಬ್ಬಿದಾಗ, ನಾಗರಿಕ ಸಮಾಜ ಹೇಗೆ ಆತಂಕಕ್ಕೆ ಒಳಗಾಗಬಹುದು ಎಂಬುದನ್ನು ಊಹಿಸಿದರೆ ನಮಗೆ ಯುದ್ಧ ತರುವ ಭೀಕರತೆ ಅರ್ಥವಾಗುತ್ತದೆ. ಈಗ ಐಪಿಎಲ್ ಪಂದ್ಯಾವಳಿಯನ್ನೇ ಸಂಪೂರ್ಣ ರದ್ದು ಮಾಡಲಾಗಿದೆ. ಇದು ಸ್ವಾಗತಾರ್ಹ ನಿರ್ಧಾರವೂ ಆಗಿದೆ. ಆದರೆ, ಸರಿಯಾಗಿ ನಡೆಯುತ್ತಿರುವ ಎಲ್ಲದರ ಮೇಲೂ ಯುದ್ಧವೆಂಬುದು ಕರಿನೆರಳ ಹಾಸುವುದು ನಿಶ್ಚಿತ.

ಪಾಕಿಸ್ತಾನ ಮೂಲದ ಉಗ್ರರ ದಾಳಿ, ಅದಕ್ಕೆ ಭಾರತ ಕೊಟ್ಟ ಪ್ರತ್ಯುತ್ತರ- ಇಲ್ಲಿಗೆ ನಿಂತು ತಿಳಿಯಾಗಬೇಕಿತ್ತು. ಆದರೆ ಪಾಕಿಸ್ತಾನದ ಸೇನೆ ಕಾಲುಕೆರೆದು ನಿಂತಿದೆ. ಕ್ಷಿಪಣಿಗಳನ್ನು ಹಾರಿಸಿದ ಷಡ್ಯಂತ್ರವನ್ನು ಭಾರತೀಯ ವಾಯುಸೇನೆ ಸಶಕ್ತವಾಗಿ ತಡೆದು ನಿಲ್ಲಿಸಿದೆ. ಯುದ್ಧದ ಕಾರ್ಮೋಡ ವ್ಯಾಪಿಸಿದ್ದು, ನಾವೀಗ ಗಂಭೀರವಾಗಿ ಯುದ್ಧದ ಭೀಕರತೆಗಳನ್ನು ಯೋಚಿಸಬೇಕಾಗಿದೆ. ಈ ಬೆಳವಣಿಗೆಗಳು ಎಲ್ಲಿಗೆ ಕೊಂಡೊಯ್ಯುತ್ತವೆಯೋ ಎಂಬ ಆತಂಕ ಮನೆ ಮಾಡಿದೆ. ಎರಡೂ ದೇಶಗಳು ಅಣ್ವಸ್ತ್ರ ಬಲವನ್ನು ಹೊಂದಿರುವಾಗ, ನಾವೀಗ ನಾಗರಿಕ ಸ್ಥಾನದಲ್ಲಿ ನಿಂತು ಸಾವಧಾನದಿಂದ ಆಲೋಚಿಸಬೇಕಾಗಿದೆ.
ಉಭಯ ಸೇನೆಯ ಸೈನಿಕರು ಹತರಾಗುತ್ತಾರೆ ಎನ್ನುವುದು ಎಷ್ಟು ನಿಜವೋ ಅವರ ಜೊತೆಗೆ ಉಭಯ ದೇಶಗಳ ನಾಗರಿಕರೂ ಬಲಿಯಾಗುತ್ತಾರೆನ್ನುವುದು ಅಷ್ಟೇ ಸತ್ಯ. ಇದೀಗ ಗಡಿ ರಾಜ್ಯಗಳಲ್ಲಿ ಬ್ಲಾಕ್‌ಔಟ್ ಮಾಡಿದಾಗ ಅಲ್ಲಿನ ನಾಗರಿಕರು ನಿದ್ದೆ ಇಲ್ಲದೆ ಹೊರಳಾಡುವಂತಾಗಿದೆ. ಪಾಕಿಸ್ತಾನದ ಅಧಿಕಾರಶಾಹಿಯು ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಲೇ ಬಂದಿದ್ದು, ಯುದ್ಧಕ್ಕೆ ಹಾತೊರೆಯುತ್ತಿರುವಂತೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಕೊಂಚ ವಿವೇಚನೆಯಿಂದ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳದಿದ್ದರೆ ಅಪಾರ ಸಾವು ನೋವುಗಳನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲೂ, ಎದುರಾಳಿ ಪಾಕಿಸ್ತಾನದಲ್ಲೂ ನಾಗರಿಕರು ಬಲಿಯಾಗುತ್ತಾರೆ.
ಜಗತ್ತು ಯುದ್ಧದಿಂದ ಯಾವತ್ತೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎಂಬುದು ಎಲ್ಲ ಜಾಗತಿಕ ಯುದ್ಧಗಳ ಇತಿಹಾಸ ನಮಗೆ ಕೊಟ್ಟಿರುವ ಪಾಠ. ಎರಡನೇ ವಿಶ್ವ ಮಹಾಯುದ್ಧದಲ್ಲಿ (1939- 1945) ಸತ್ತವರ ಸಂಖ್ಯೆ ಅಂದಾಜು ಬರೋಬ್ಬರಿ 8.5 ಕೋಟಿ. ಮೊದಲ ಮಹಾಯುದ್ಧದಲ್ಲಿ ಸತ್ತವರು (1914-1918) 2 ಕೋಟಿ 20 ಲಕ್ಷ ಜನ. ರಷ್ಯನ್ ನಾಗರಿಕ ಯುದ್ಧ (1917-1922) ಬಲಿ ಪಡೆದದ್ದು 1 ಕೋಟಿ ಜನರನ್ನು. ಚೀನಾದ ಸಿವಿಲ್ ವಾರ್‌ನಲ್ಲಿ (1927- 1949) ಮಡಿದವರು ಸುಮಾರು 90 ಲಕ್ಷ ಜನ. ವಿಯಟ್ನಾಮ್ ವಾರ್‌ನಲ್ಲಿ (1955-1975) ಸುಮಾರು 24 ಲಕ್ಷ ಜನ, ಕೊರಿಯನ್ ವಾರ್‌ನಲ್ಲಿ (1950-1953) ಸುಮಾರು 35 ಲಕ್ಷ ಜನ, ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ (1971) ಸುಮಾರು 30 ಲಕ್ಷ ಜನ ಸಾವಿಗೀಡಾಗಿದ್ದಾರೆ. ಅಷ್ಟೇ ಯಾಕೆ, ಬಗೆಹರಿಯದೆ ಉಳಿದಿರುವ ಪ್ಯಾಲೆಸ್ತೀನ್-ಇಸ್ರೇಲ್ ಸಂಘರ್ಷದಲ್ಲಿ ಇತ್ತೀಚಿನ ವರ್ಷಗಳಲ್ಲಿ ಯುದ್ಧ ಬಿಗಡಾಯಿಸಿದ ಬಳಿಕ ಸತ್ತವರು ಸುಮಾರು 55,000 ಜನ.

ಯಾವುದೇ ಯುದ್ಧದ ಚರಿತ್ರೆಯನ್ನು ತೆಗೆದು ನೋಡಿದರೂ ಇಂತಹದ್ದೇ ಸಾವು ನೋವಿನ ಭೀಕರತೆಯಷ್ಟೇ ಕಣ್ಣಿಗೆ ರಾಚುತ್ತದೆ. ಯದ್ಧ ಬಿಗಡಾಯಿಸಿದಾಗಲೆಲ್ಲ ಮೊದಲು ಅದನ್ನು ವಿರೋಧಿಸಬೇಕಾಗಿರುವುದು ನಾಗರಿಕ ಸಮಾಜ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸದ್ಯ ಭಾರತ-ಪಾಕಿಸ್ತಾನ ಯುದ್ಧದ ಸನ್ನಿವೇಶ ನಿರ್ಮಾಣವಾಗಿರುವ ಹೊತ್ತಿನಲ್ಲಿ ಜನರು ಈಗ ಮಾತನಾಡಲು ಆರಂಭಿಸಿದ್ದಾರೆ.
ಬರಹಗಾರ ನಾಗೇಗೌಡ ಕೀಲಾರ ಅವರ ಎಫ್‌ಬಿ ಪೋಸ್ಟ್ ಹೀಗಿದೆ..
“ಯುದ್ಧ ಉಲ್ಬಣಗೊಳ್ಳುತ್ತಿರುವಾಗ ಯುದ್ಧದ ಬಗೆಗಿನ ಸರಿಯಾದ ಮಾಹಿತಿ ತಿಳಿದುಕೊಳ್ಳುವ ಬಗೆ ಹೇಗೆ? 1. ಇಂಡಿಯಾ ಮಿಲಿಟರಿ ಹೊರಡಿಸುವ ಪತ್ರಿಕಾ ಪ್ರಕಟಣೆಯನ್ನು ಮೊದಲು ಗಮನಿಸಬೇಕು. 2. ಪಾಕಿಸ್ತಾನ ಮಿಲಿಟರಿ ಹೊರಡಿಸುವ ಪತ್ರಿಕಾ ಪ್ರಕಟಣೆಯನ್ನು ಅನಂತರ ಗಮನಿಸಬೇಕು. 3. ಈ ಎರಡೂ ಪತ್ರಿಕಾ ಪ್ರಕಟಣೆಗಳು ಸತ್ಯಕ್ಕೆ ಎಷ್ಟು ಹತ್ತಿರವಾಗಿವೆ ಎಂದು ತಿಳಿಯಲು ಸಿಎನ್‌ಎನ್, ಬಿಬಿಸಿ ಅಂತಹ ನ್ಯೂಸ್ ಚಾನಲ್‌ಗಳನ್ನು ನೋಡಬೇಕು. 4. ಇಷ್ಟು ಮಾಡಿದರೆ ನಮಗೆ ಅಲ್ಪ ಪ್ರಮಾಣದ ಸತ್ಯ ಏನು ಅಂತ ಗೊತ್ತಾಗುತ್ತದೆ. ಅನಂತರ ನಮಗೆ ಯುದ್ಧ ಯಾವ ಮಟ್ಟದಲ್ಲಿ ಉಲ್ಬಣಗೊಳ್ಳುತ್ತಿದೆ ಅನ್ನುವ ಅಂದಾಜು ಸಿಗುತ್ತದೆ. 5. ಮೇಲೆ ತಿಳಿಸಿದ ಅಷ್ಟೂ ಕೆಲಸ ಮಾಡಿದ ನಂತರ ಎರಡು ದಿನಕ್ಕೊಮ್ಮೆ ಸರ್ವ ಪಕ್ಷಗಳ ಸಭೆ ಕರೆಯುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿರಬೇಕು. 6. ಯುದ್ಧವನ್ನು ಉಲ್ಬಣಗೊಳಿಸಲೇಬೇಕು ಅನ್ನುವ ಪರಿಸ್ಥಿತಿ ಇದ್ದರೆ ಸರ್ಕಾರ ತನ್ನ ಪ್ರಮುಖ ನಿರ್ಧಾರಗಳನ್ನು ಸರ್ವಪಕ್ಷಗಳ ಸಭೆಯ ಗಮನಕ್ಕೆ ತಂದು ಒಪ್ಪಿಗೆ ಪಡೆಯಬೇಕು. 7. ನಾಗರಿಕರಾದ ನಮಗೆ ಯುದ್ಧದ ಬಗ್ಗೆ ಸ್ಪಷ್ಟವಾದ ಅರಿವು ಇರಬೇಕು. ಯುದ್ಧ ಶುರುಮಾಡುವುದು ಮಾತ್ರ ನಮ್ಮ ಕೈಯಲ್ಲಿ ಇರುತ್ತದೆ; ಯುದ್ಧದ ಅಂತ್ಯ ಹೇಗೆ ಇರುತ್ತದೆ ಅನ್ನೋದು ಯಾರಿಗೂ ಗೊತ್ತಿರುವುದಿಲ್ಲ. ಆದ್ದರಿಂದ ನಾಗರಿಕರು ಯುದ್ಧ ಉಲ್ಬಣಗೊಳ್ಳುತ್ತಿದೆ ಅಂದಾಗ ಎಚ್ಚರಿಕೆಯಿಂದ ಅದನ್ನು ಗಮನಿಸಬೇಕು. ನಾಗರಿಕರಿಗೆ ಯುದ್ಧ ಕೊನೆಯ ಆಯ್ಕೆಯಾಗಿರಬೇಕು. ಮೊದಲ ಆಯ್ಕೆ ಯಾವಾಗಲೂ ಆರ್ಥಿಕ ದಿಗ್ಭಂದನ, ಅಂತಾರಾಷ್ಟ್ರೀಯ ಒತ್ತಡ ಹೇರಿಸುವುದು, ಶತ್ರು ರಾಷ್ಟ್ರವನ್ನು ರಾಜತಾಂತ್ರಿಕವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಣಿಸುವುದು ಆಗಿರಬೇಕು.”
ಬರಹಗಾರ, ಹೋರಾಟಗಾರ ಹರ್ಷಕುಮಾರ್ ಕುಗ್ವೆ ಹೀಗೆನ್ನುತ್ತಾರೆ..
“ನಾನು ಈ ವರೆಗೆ ಸುಮಾರು ನೂರು ವಾರ್ ಸಿನಿಮಾಗಳನ್ನು ನೋಡಿರಬಹುದು, 10-15 ವಾರ್ ಡಾಕ್ಯುಮೆಂಟರಿಗಳನ್ನು ನೋಡಿರಬಹುದು, ದೇಶಗಳು ನಡೆಸುವ ಯುದ್ಧಗಳ ಕುರಿತು, ಮಹಾಯುದ್ಧಗಳ ಕುರಿತು ಒಂದಷ್ಟು ಪುಸ್ತಕ ಓದಿರಬಹುದು… ಮೊನ್ನೆ ಮೊನ್ನೆಯೂ ಗಿಬ್ಲಿ ಸ್ಟುಡಿಯೋದ ʼGrave of The Firefliesʼ ಎಂಬ ಅನಿಮೇಶನ್ ಸಿನಿಮಾ ನೋಡಿ ಯುದ್ಧದಿಂದ ಜರ್ಜರಿತವಾಗಿದ್ದ ಜಪಾನ್ ಕುರಿತು ಚಿಂತಿಸಿದೆ. ಈ ಕಾರಣದಿಂದ ಭಾರತ ಪಾಕಿಸ್ತಾನ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಈ ವರೆಗೆ ನಡೆದಿರುವ ಯುದ್ಧಗಳು ಯಾಕಾದವು, ಹೇಗಾದವು, ಎಂತೆಂತಹ ಸಮೂಹ ಸನ್ನಿಗಳನ್ನು ಸೃಷ್ಟಿಸಿದವು, ಎರಡೂ ಕಡೆಗಳಲ್ಲಿ ಎಂತಹ ಸಮರ್ಥನೆಗಳನ್ನು ಹುಡುಕಿಕೊಂಡವು ಮುಂತಾದ ಹಲವಾರು ಸಂಗತಿಗಳ ಬಗ್ಗೆ ಒಂದಷ್ಟು ಅವಗಾಹನೆಯಿದೆ. ಈ ಯುದ್ಧಗಳು ದೇಶಗಳ ಆರ್ಥಿಕತೆಗಳ ಮೇಲೆ, ಜನ ಜೀವನದ ಮೇಲೆ, ಆ ದೇಶಗಳ ಬಡವರ ಮೇಲೆ, ಕೆಳ ಮಧ್ಯಮ ವರ್ಗದವರ ಮೇಲೆ, ಮಕ್ಕಳು ಮಹಿಳೆಯರ ಮೇಲೆ ಉಂಟು ಮಾಡಿರುವ ಭೀಕರ ಪರಿಣಾಮಗಳ ಅರಿವಿದೆ. ಕಾಶ್ಮೀರಿಗಳನ್ನು ನಾವು ವಿಶ್ವಾಸಕ್ಕೆ ಪಡೆದುಕೊಳ್ಳದ ಹೊರತು ಇನ್ನಾವುದೇ ಮಾರ್ಗವಾಗಲೀ, ಮ್ಯಾಜಿಕ್ ಆಗಲೀ ಇಲ್ಲ. ಆದರೆ ಒಂದು ನೆನಪಿಡಿ. ಆರ್ಥಿಕವಾಗಿ ಈಗಾಗಲೇ ಸಾಕಷ್ಟು ನಲುಗಿ ಹೋಗಿರುವ ದೇಶ ಪಾತಾಳಕ್ಕೆ ತಲುಪಿದರೆ ಅದಕ್ಕೆ ನೀವೂ ಹೊಣೆಗಾರರೇ ಆಗಿರುತ್ತೀರಿ.”
ಈ ಮೇಲಿನ ಅಭಿಪ್ರಾಯಗಳಲ್ಲಿ ಸಾಮಾನ್ಯ ನಾಗರಿಕರು ಈ ಹೊತ್ತು ತೆಗೆದುಕೊಳ್ಳಬೇಕಾದ ನಿಲುವು ಹೇಗಿರಬೇಕು ಎಂಬ ಎಚ್ಚರಿಕೆ ಇದೆ.

ಯುದ್ಧದ ಭೀಕರತೆಗಳು ಯುದ್ಧ ಮುಗಿದ ಮೇಲಷ್ಟೇ ತಿಳಿಯುವುದು ಎಂಬುದು ಯೋಚಿಸಬೇಕಾದ ಮಾತು. ಯುದ್ಧದಲ್ಲಿ ಸಾವಿಗೀಡಾಗುವವನು ಕೇವಲ ಮನುಷ್ಯನೇ ಅಲ್ಲ, ಅವನ ಸುತ್ತಲಿನ ಪ್ರಕೃತಿಯೂ. ಸ್ಫೋಟದ ಕಿಡಿಗಳ ಮಧ್ಯೆ ಮರಗಳ ಹೆಜ್ಜೆ ಸಪ್ಪಳ ಮೌನವಾಗುತ್ತದೆ. ನದಿಗಳ ದಿಕ್ಕು ಬದಲಾಗುತ್ತದೆ, ವಾತಾವರಣವೇ ವಿಷವಾಗುತ್ತದೆ. ಕ್ಷಿಪಣಿಗಳ ಧೂಳಿನಲ್ಲಿ ಆಕಾಶ ಕತ್ತಲಾಗುತ್ತದೆ, ಹೊಗೆ ಶ್ವಾಸಕೋಶವನ್ನಷ್ಟೇ ಅಲ್ಲ, ಜೀವವಿಕಾಸವನ್ನೂ ಬೂದಿಮಾಡುತ್ತದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾಜಿಕ ಜವಾಬ್ದಾರಿ ಹೊತ್ತ ಮಾಧ್ಯಮಗಳು ಯುದ್ಧದ ಏಜೆಂಟ್‌ಗಳಂತೆ ವರ್ತಿಸುತ್ತಿರುವುದು ಅತ್ಯಂತ ಖೇದಕರ. ಅನೇಕ ಟಿವಿ ಚಾನೆಲ್‌ಗಳು ʼಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ!ʼ, ʼಬಡಿತಕ್ಕೆ ಬಡಿತ!ʼ, ʼಯುದ್ಧವೇ ಪರಿಹಾರವೇ?ʼ ಎಂಬಿತ್ಯಾದಿ ಶೀರ್ಷಿಕೆಗಳಿಂದಲೇ ರಣರಂಗಕ್ಕೆ ಹೊರಡಲು ಅನುವಾಗಿರುವಂತೆ ತೋರಿಸಿಕೊಳ್ಳುತ್ತಿವೆ. ಸಾಮಾಜಿಕ ಕಳಕಳಿ, ಪ್ರಜ್ಞೆಯನ್ನು ಮರೆತು ಯುದ್ಧವನ್ನು ಮಾಡಿಸಿಯೇ ತೀರಬೇಕೆಂದು ಟೊಂಕ ಕಟ್ಟಿ ನಿಂತಂತಿವೆ. ರಾಷ್ಟ್ರಪ್ರೇಮದ ಹೆಸರಲ್ಲಿ ತಾತ್ವಿಕ ವಿವೇಚನೆಗೆ, ತರ್ಕಕ್ಕೆ ಅವಕಾಶವಿಲ್ಲದಂತೆ ಮಾಡುತ್ತಿವೆ.
ತರ್ಕಬದ್ಧ, ಸಂಯಮದ ಮನವಿಗೆ ಮಾಧ್ಯಮಗಳಲ್ಲಿ ಸ್ಥಳ ಕಡಿಮೆ ಎನ್ನುವ ಜನ ಸಾಮಾನ್ಯರ ಆರೋಪಕ್ಕೆ ಹೌದು ಎನ್ನುವ ಮುದ್ರೆಯನ್ನು ಮಾಧ್ಯಮಗಳೇ ಒತ್ತಿಕೊಳ್ಳುತ್ತಿವೆ. ಯುದ್ಧ ವಿರೋಧಿಸುವ ಧ್ವನಿಗೆ “ದೇಶದ್ರೋಹ” ಎಂಬ ಟ್ಯಾಗ್ ಸಿಗುವುದು ಸಾಮಾನ್ಯವಾಗಿದೆ. ಇದು ಸರಿಯಾ.. ತಪ್ಪಾ ಎನ್ನುವುದು ಪ್ರಜ್ಞಾವಂತರ ವಿವೇಚನೆಗೆ ಬಿಟ್ಟದ್ದು.
ಯಾವುದೇ ಸಂದರ್ಭದಲ್ಲೂ.. ವಿಶೇಷವಾಗಿ ಯುದ್ಧ, ಸಂಕಷ್ಟ ಅಥವಾ ತೀವ್ರ ರಾಜಕೀಯ ಅಸ್ಥಿರತೆಯ ಸಮಯದಲ್ಲಿ ಸತ್ಯವನ್ನು ಅನ್ವೇಷಿಸುವುದು, ಸಮತೋಲನ ಕಾಯ್ದುಕೊಳ್ಳುವುದು, ನಿಷ್ಪಕ್ಷಪಾತ ಭಾವರಹಿತ ವರದಿ ನೀಡುವುದನ್ನು ಹಾಗೂ ಮಾನವ ಹಕ್ಕುಗಳ ರಕ್ಷಣೆ ಮಾಡುವುದನ್ನು ಮರೆಯಬಾರದು.
ಯುದ್ಧವು ತಾತ್ಕಾಲಿಕ ರೋಷಕ್ಕೆ ತೃಪ್ತಿ ನೀಡಬಹುದು, ಆದರೆ ಅದರ ಪರಿಣಾಮಗಳು ದೀರ್ಘಕಾಲದ ವ್ಯಥೆಗಳನ್ನುಂಟುಮಾಡುತ್ತವೆ. ಗಡಿಗಪ್ಪುವ ಸ್ಫೋಟಗಳಿಂದ ಜೀವಹಾನಿ, ಆರ್ಥಿಕ ಕುಸಿತ, ಪರಿಸರ ನಾಶ, ಮಾನವೀಯ ಬಿಕ್ಕಟ್ಟು ನಷ್ಟ ಒಂದಾ ಎರಡಾ? ಇವುಗಳೆಲ್ಲವೂ ಯುದ್ಧದ ನಿಜವಾದ ದುರಂತಗಳು. ಈ ವೇಳೆ ಸಾಮಾನ್ಯ ನಾಗರಿಕರು ಬಯಸುವುದು ಶಾಂತಿ, ಸುರಕ್ಷತೆ ಮತ್ತು ಸ್ಥಿರತೆ. ಅವರಿಗೆ ಅಗತ್ಯವಿರುವುದು ಯುದ್ಧವಲ್ಲ ಬದಲಾಗಿ ತಮ್ಮ ಮುಂದಿನ ಪೀಳಿಗೆಗೆ ಭದ್ರ ಬುನಾದಿ.
ಈ ಹಿನ್ನೆಲೆಯಲ್ಲಿ, ಸರ್ಕಾರಗಳು, ಮಾಧ್ಯಮಗಳು, ಹಾಗೂ ನಾಗರಿಕರಿಗೂ ಸೇರಿ ಒಂದು ಸಾಮೂಹಿಕ ಆತ್ಮಪರಿಶೀಲನೆ ಅಗತ್ಯ. ಮಾತುಕತೆ, ಪರಸ್ಪರ ಗೌರವ, ತಾಳ್ಮೆಯ ಅಳತೆ—ಇವೇ ನಿಜವಾದ ಪ್ರಗತಿಯ ಹೆಜ್ಜೆಗಳು.
ಜನಸಾಮಾನ್ಯರು.. ಯುದ್ಧೋನ್ಮಾದದ ನಡುವೆ, ಅದು ಉಲ್ಬಣವಾಗದಂತೆ ಎಚ್ಚರಿಕೆ ವಹಿಸುವ, ಪ್ರಚೋದಕ ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳ ಬಗ್ಗೆ ಗುಮಾನಿಯನ್ನು ಇರಿಸಿಕೊಳ್ಳುವ ಜರೂರು ಈ ಹೊತ್ತಿನದು. ಯುದ್ಧ ಗೆಲ್ಲುವಲ್ಲಿ ಯಾರೊಬ್ಬರ ಜಯಕ್ಕಿಂತ, ಯುದ್ಧ ತಡೆದಾಗ ಮಾತ್ರ ಎಲ್ಲರ ಮಾನವೀಯತೆ ಉಳಿಯುತ್ತದೆ.