ಪಾಕಿಸ್ತಾನದ ವಿರುದ್ಧ ನಡೆಸಿದ ಕಾರ್ಯಾಚರಣೆಗೆ ಭಾರತವು ‘ಆಪರೇಷನ್ ಸಿಂಧೂರ್’ ಎಂದು ಹೆಸರಿಟ್ಟಿದೆ. ಈ ಟೈಟಲ್ಅನ್ನು ತಮ್ಮ ಸಿನಿಮಾಗೆ ಶೀರ್ಷಿಕೆಯನ್ನಾಗಿ ನೋಂದಾಯಿಸಿಕೊಳ್ಳಲು ಬಾಲಿವುಡ್ ಸಿನಿಮಾ ನಿರ್ಮಾಪಕರು ಮತ್ತು ಕಲಾವಿದರು ಮುಗಿಬಿದ್ದಿದ್ದಾರೆ. ಕೇವಲ ಎರಡು ದಿನಗಳಲ್ಲಿ 30ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರು 28 ಮಂದಿಯನ್ನು ಹತ್ಯೆಗೈದಿದ್ದರು. ಆ ಹತ್ಯಾಕಾಂಡಕ್ಕೆ ಪ್ರತಿದಾಳಿಯಾಗಿ ಭಾರತವು ಬುಧವಾರ ಮುಂಜಾನೆ ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತು. ಆ ಕಾರ್ಯಾಚರಣೆಯನ್ನು ‘ಆಪರೇಷನ್ ಸಿಂಧೂರ’ ಎಂದು ಕರೆದಿದೆ.
ಕಾರ್ಯಾಚರಣೆ ಬೆನ್ನಲ್ಲೇ, ಆಪರೇಷನ್ ಸಿಂಧೂರ್ ಶೀರ್ಷಿಕೆಯನ್ನು ಸಿನಿಮಾ ಶಿರ್ಷಿಕೆಗಾಗಿ ನೋಂದಾಯಿಸಲು ಹಲವಾರು ನಿರ್ಮಾಪಕರು ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ (IMPPA), ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ಮಾಪಕರ ಮಂಡಳಿ (IFTPC) ಹಾಗೂ ಪಶ್ಚಿಮ ಭಾರತ ಚಲನಚಿತ್ರ ನಿರ್ಮಾಪಕರ ಸಂಘ (WIFPA) ಹೇಳಿವೆ. ಈವರೆಗೆ ಇಮೇಲ್ ಮೂಲಕ ಮೂರು ಸಂಸ್ಥೆಗಳಿಗೆ ಒಟ್ಟು 30ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ವರದಿಯಾಗಿದೆ.
ಅರ್ಜಿಗಳ ಸಂಖ್ಯೆಗಳು 50–60ಕ್ಕೆ ಏರಬಹುದು. ಇದು ಹೊಸದೇನಲ್ಲ. ಹೆಚ್ಚಿನ ಜನರು ಆಪರೇಷನ್ ಸಿಂಧೂರ್, ಮಿಷನ್ ಸಿಂಧೂರ್, ಹಿಂದೂಸ್ತಾನ್ ಕಾ ಸಿಂದೂರ್, ಮಿಷನ್ ಆಪರೇಷನ್ ಸಿಂದೂರ್ ಮತ್ತು ಸಿಂದೂರ್ ಕಾ ಬದ್ಲಾ ರೀತಿಯ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು IMPPA ಕಾರ್ಯದರ್ಶಿ ಅನಿಲ್ ನಾಗರತ್ ತಿಳಿಸಿದ್ದಾರೆ.
“ಯಾರು ಬೇಕಾದರೂ ಶೀರ್ಷಿಕೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ ಮೊದಲು ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಶೀರ್ಷಿಕೆಯನ್ನು ನೀಡಲಾಗುತ್ತದೆ. ಚಲನಚಿತ್ರ ನಿರ್ಮಿಸಲು ಬಯಸುವ ಯಾವುದೇ ನಿರ್ಮಾಪಕರು ಸಾಮಾನ್ಯವಾಗಿ ಸುದ್ದಿಯಲ್ಲಿರುವ ವಿಷಯಗಳನ್ನು ಹುಡುಕುತ್ತಾರೆ. ಇದು ಭಾರತ ಹೆಮ್ಮೆಪಡುವ ವಿಷಯ, ಆದ್ದರಿಂದ ಚಲನಚಿತ್ರ ನಿರ್ಮಾಪಕರು ಈ ಕಥೆಯನ್ನು ಪರದೆಯ ಮೇಲೆ ತರಲು ಉತ್ಸುಕರಾಗಿದ್ದಾರೆ” ಎಂದು ನಾಗರತ್ ಹೇಳಿದ್ದಾರೆ.
ಕಾರ್ಗಿಲ್, ಉರಿ, ಕುಂಭ ಮತ್ತು ಇತರ ಶೀರ್ಷಿಕೆಗಳಿಗಾಗಿಯೂ ಇದೇ ರೀತಿಯಲ್ಲಿ ಅರ್ಜಿಗಳು ಬಂದಿದ್ದವು ಎಂದು ಅವರು ತಿಳಿಸಿದ್ದಾರೆ,
ಮೂಲಗಳ ಪ್ರಕಾರ, ನಿರ್ದೇಶಕ ಆದಿತ್ಯ ಧರ್ (2019ರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ನಿರ್ದೇಶಿಸಿದವರು), ನಟ ಸುನೀಲ್ ಶೆಟ್ಟಿ, ಚಲನಚಿತ್ರ ನಿರ್ಮಾಪಕ ಮಧುರ್ ಭಂಡಾರ್ಕರ್, ವಿವೇಕ್ ಅಗ್ನಿಹೋತ್ರಿ, ಅಶೋಕ್ ಪಂಡಿತ್ ಹಾಗೂ ನಿರ್ಮಾಣ ಸಂಸ್ಥೆ ಟಿ-ಸೀರೀಸ್ ಸೇರಿದಂತೆ ಹಲವರು ಶೀರ್ಷಿಕೆಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.