ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ. ಆದ್ದರಿಂದ ಇದನ್ನು ಎನ್‌ಐಎಗೆ ವಹಿಸಲು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿಯ ಕೊಲೆಯಾಗಿದೆ. ಈ ಕೊಲೆ ಬೆನ್ನಲ್ಲೇ ಬಿಜೆಪಿ ಎಂದಿನಂತೆ
ಧಾರ್ಮಿಕ ಗಲಭೆ ಸೃಷ್ಟಿಸುವ ಪ್ರಯತ್ನವನ್ನು ಮಾಡಿದೆ. ಅಲ್ಲಲ್ಲಿ ಮುಸ್ಲಿಮರ ಮೇಲೆ ಸಂಘಪರಿವಾರ ದಾಳಿ ನಡೆಸಿದೆ. ಈ ಹತ್ಯೆಗೆ ಸಂಬಂಧಿಸಿ ಇಬ್ಬರು ಹಿಂದೂಗಳು ಸೇರಿದಂತೆ ಹಲವರ ಬಂಧನ ಮಾಡಲಾಗಿದೆ. ಆದರೆ ಬಿಜೆಪಿ ಹೆಣದ ಮೇಲೆ ನಡೆಸುವ ತಮ್ಮ ರಾಜಕೀಯವನ್ನು ಮುಂದುವರೆಸಿದೆ. ಈ ನಡುವೆ ಓರ್ವ ರೌಡಿಶೀಟರ್, ಕೊಲೆ ಆರೋಪಿ ಪರವಾಗಿ ನಿಂತಿರುವ ಅಶೋಕ್ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದೆ.
ಇದನ್ನು ಓದಿದ್ದೀರಾ? ಮಂಗಳೂರು | ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ: 5ಕ್ಕೂ ಹೆಚ್ಚು ಆರೋಪಿಗಳು ಪೊಲೀಸ್ ವಶಕ್ಕೆ?
ಬಿಜೆಪಿಯ ಪ್ರಮುಖರೊಂದಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಆರ್ ಅಶೋಕ್ ಅವರು ಮನವಿ ಸಲ್ಲಿಸಿದ್ದಾರೆ. ಇದಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
“ರಾಜ್ಯಪಾಲರನ್ನು ಭೇಟಿಯಾಗಿ ಸುಹಾಸ್ ಶೆಟ್ಟಿಯ ಕೊಲೆಯ ಬಗ್ಗೆ ವಿವರಿಸಲಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಪಾರಿ ನೀಡಿರುವ ಪ್ರಕರಣವಾಗಿದೆ. ಮುಸ್ಲಿಂ ಹುಡುಗನ ಕೊಲೆಯಾಗಿದ್ದಕ್ಕೆ ಆ ಕುಟುಂಬಕ್ಕೆ ಕಾಂಗ್ರೆಸ್ 25 ಲಕ್ಷ ರೂ. ಪರಿಹಾರ ನೀಡಿದೆ. ಆ ಹಣವನ್ನು ಬಳಸಿಯೇ ಸುಪಾರಿ ನೀಡಲಾಗಿದೆ” ಎಂದು ಆರೋಪಿಸಿದರು.
“ಸ್ಪೀಕರ್ ಯು.ಟಿ.ಖಾದರ್ ಅವರು ಆ ಕುಟುಂಬದವರು ಒಳ್ಳೆಯವರು ಎಂದು ಹೇಳಿದ್ದಾರೆ. ಆ ಮನೆಯವರೇ ಸುಪಾರಿ ನೀಡಿದ್ದಾರೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ. ಸ್ಪೀಕರ್ ಆಗಿ ಕೊಲೆ ಪ್ರಕರಣದ ಬಗ್ಗೆ ಮಾತನಾಡುವ ಅಗತ್ಯವೇನಿದೆ? ಯಾವುದೇ ಸ್ಪೀಕರ್ ಕೊಲೆ ಬಗ್ಗೆ ಮಾತನಾಡಿದ ಇತಿಹಾಸವೇ ಇಲ್ಲ” ಎಂದರು.
ಇದನ್ನು ಓದಿದ್ದೀರಾ? ಪಾಕ್ ಪರ ಘೋಷಣೆ ಆರೋಪ | ಜನಾಕ್ರೋಶಕ್ಕೆ ಮಣಿದ ಸರ್ಕಾರ, ಮೂವರು ಆರೋಪಿಗಳ ಬಂಧನ: ಆರ್ ಅಶೋಕ್
“ಕಾಂಗ್ರೆಸ್ ಸರ್ಕಾರ ಇಂತಹವರ ವಿಚಾರದಲ್ಲಿ ಮೃದು ಧೋರಣೆ ತಾಳಿದೆ. ಈ ಪ್ರಕರಣದ ತನಿಖೆಯಲ್ಲಿ ನಮಗೆ ವಿಶ್ವಾಸವಿಲ್ಲ. ಪಾಕಿಸ್ತಾನ ಜಿಂದಾಬಾದ್ ಘೋಷಣೆಗೆ, ಭಯೋತ್ಪಾದನೆ ಚಟುವಟಿಕೆಗೆ ಪ್ರೇರಣೆ ಕೊಡುವವರ ಸಂಪರ್ಕ ಇವರಿಗಿದೆ” ಎಂದು ಹೇಳಿದರು.
ಹಾಗೆಯೇ “ಕರಾವಳಿ ಭಾಗಕ್ಕೆ ಪಾಕಿಸ್ತಾನದ ಸಂಪರ್ಕವಿದೆ. ಪಾಕಿಸ್ತಾನ ಜಿಂದಾಬಾದ್ ಎಂದು ಹೇಳುವವರಿಗೆ ಆಪರೇಶನ್ ಸಿಂಧೂರದಂತೆಯೇ ಶಾಸ್ತಿ ಆಗಬೇಕಿದೆ. ಇದಕ್ಕೆ ಅಂತ್ಯ ಕಾಣಿಸಬೇಕಿದೆ. ಇದಕ್ಕಾಗಿ ಪ್ರಕರಣವನ್ನು ಎನ್‌ಐಎಗೆ ವಹಿಸಬೇಕು ಎಂದು ರಾಜ್ಯಪಾಲರಿಗೆ ಕೋರಲಾಗಿದೆ” ಎಂದು ತಿಳಿಸಿದರು.
