ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವ ಉಗ್ರರ ಹಿಂದಿರುವ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸಬೇಕೆಂಬುದು ಈ ದೇಶದ ಆಗ್ರಹವಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖಾ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನ ಕೆ.ಆರ್. ವೃತ್ತದಿಂದ ಮಿನ್ಸ್ಕ್ ಚೌಕದವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿರುವ ಸೈನಿಕರಿಗೆ ಬೆಂಬಲವಾಗಿ ನಡೆದ ತಿರಂಗ ಯಾತ್ರೆಯಲ್ಲಿ ಅವರು ಈ ದಿನ.ಕಾಮ್ ಜೊತೆ ಮಾತನಾಡಿದರು.
ಪಾಕಿಸ್ತಾನದ ಉಗ್ರರ ನೆಲೆ ಮೇಲೆ ದಾಳಿ ಮಾಡುವ ಮೂಲಕ ಅಲ್ಲಿನ ಉಗ್ರರಿಗೆ ನಮ್ಮ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ಸ್ವತಂತ್ರ ಭಾರತದಲ್ಲಿ ಮೂರು ಯುದ್ಧಗಳಾಗಿವೆ. ನೆಹರೂ ಕಾಲದಲ್ಲಿ ಚೀನಾದ ಜೊತೆ ಯುದ್ಧ ನಡೆದರೆ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿ ಕಾಲದಲ್ಲಿ ಪಾಕಿಸ್ತಾನದ ಜೊತೆ ಯುದ್ಧಗಳು ನಡೆದಿವೆ. ಈ ಮೂರು ಯುದ್ಧಗಳಲ್ಲಿ ನಮ್ಮ ದೇಶವನ್ನು ಗೆಲ್ಲಿಸುವ ಮೂಲಕ ನಮ್ಮ ಸೈನಿಕರು ಭಾರತದ ಸಾಮರ್ಥ್ಯವನ್ನು ಜಗತ್ತಿಗೇ ಸಾಧಿಸಿ ತೋರಿಸಿದ್ದಾರೆ ಎಂದರು.
ನಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡುವ ಸೈನಿಕರಿಗೆ ಇನ್ನಷ್ಟು ಶಕ್ತಿ ತುಂಬಲಿ ಎಂದು ಮುಜರಾಯಿ ಇಲಾಖೆಯ 25 ಸಾವಿರ ದೇವಸ್ಥಾನಗಳಲ್ಲಿ ಇಂದು ಬೆಳಗ್ಗೆ ವಿಶೇಷ ಪೂಜೆ ಮಾಡಿಸಲಾಗಿದೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯ ಮಂತ್ರಿ ಮಂಡಲ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿರುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು, ಹಾಗೂ “ನಿಮ್ಮೊಂದಿಗೆ ನಾವೂ ಇದ್ದೇವೆ” ಎಂಬ ಘೋಷಣೆಯೊಂದಿಗೆ ಇಂದು ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ತಿರಂಗ ಯಾತ್ರೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸಹಿತ ಸಾವಿರಾರು ಮಂದಿ ಪಾಲ್ಗೊಂಡರು. ಯಾತ್ರೆಯಲ್ಲಿ ಪಾಲ್ಗೊಂಡವರು ಉಗ್ರರ ವಿರುದ್ಧ ಹೋರಾಟ ನಡೆಸುವ ಸೈನಿಕರ ಪರ ಹಾಗೂ ದೇಶದ ಪರ ಘೋಷಣೆಗಳನ್ನು ಕೂಗಿದರು.
