“ಸಬ್ಸಿಡಿ ಆಸೆ ತೋರಿಸಿ ರೈತ ಮತ್ತು ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳಿಗೆ, ಕಾರ್ಪೊರೇಟ್ ಸಂಸ್ಥೆಗಳ ತೆಕ್ಕೆಗೆ ನೂಕಿ ಸರ್ಕಾರ ದ್ರೋಹ ಮಾಡುತ್ತಿದೆ” ಎಂದು ಚಿತ್ರದುರ್ಗದ ರೈತ ಸಂಘದ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗೆ ಈಡೇರಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಚಳ್ಳಕೆರೆ ಘಟಕ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಸಬ್ಸಿಡಿ ಸೇರಿದಂತೆ ವಿವಿಧ ಆಮಿಷ ತೋರಿಸಿ ಸರ್ಕಾರಗಳು ರೈತ ಮತ್ತು ಕೃಷಿ ಕ್ಷೇತ್ರವನ್ನು ಯಾವುದೇ ಕಾರಣಕ್ಕೆ ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ನೂಕುವುದು ಅಪರಾಧ. ರೈತ ಮತ್ತು ಕೃಷಿ ಕ್ಷೇತ್ರಕ್ಕೆ ಮಾಡುವ ವಂಚನೆ. ಆದ್ದರಿಂದ 2022-23ನೇ ಸಾಲಿನಲ್ಲಿ ಇದ್ದಂತಹ ಆಕ್ರಮ-ಸಕ್ರಮದ ಕಾನೂನು ಅಡಿಯಲ್ಲಿ ರೈತರಿಗೆ ಕೊಡಬೇಕಾದ ಸೌಲತ್ತುಗಳನ್ನು ಕೊಟ್ಟು ಮೊದಲಿನಂತೆ ಇರುವ ಕಾನೂನನ್ನು ಮುಂದುವರೆಸಿಕೊಂಡು ಹೋಗಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ” ಎಂದು ಆಗ್ರಹಿಸಿದರು.

“ರೈತರು ವಿದ್ಯುತ್ತನ್ನು ತನ್ನ ಸ್ವಂತಕ್ಕಾಗಲಿ, ತನ್ನ ಕುಟುಂಬಕ್ಕಾಗಲಿ ಬಳಸುತ್ತಿಲ್ಲ. ರೈತರು ಬಳಸುವಂತಹ ವಿದ್ಯುತ್ ದೇಶದ ಆಹಾರದ ಭದ್ರತೆಗಾಗಿ ಮತ್ತು ರಾಜ್ಯದಲ್ಲಿರುವ ಕಾರ್ಖಾನೆಗಳನ್ನು ಚಾಲನೆ ಮಾಡಲು, ನಿರುದ್ಯೋಗಿಗಳಿಗೆ ಕೆಲಸ ಕೊಡಲು ಮತ್ತು ಪಶು-ಪಕ್ಷಿ ಮತ್ತು ಪ್ರಾಣಿಗಳಿಗೆ ಸಹಕಾರಿಯಾಗಲು ಹಾಗೂ ದೇಶದ ಅಭಿವೃದ್ಧಿಗಾಗಿ ಬಳಸುತ್ತಿದ್ದಾರೆ. ಆದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆದರೂ ಸಹ ರೈತರಿಗೆ ಇದುವರೆಗೂ ಕೊಡಬೇಕಾದಂತಹ ಸವಲತ್ತುಗಳನ್ನು ಕೊಟ್ಟಿಲ್ಲ. ಸರ್ಕಾರಗಳು ಮಾಡಬೇಕಾದ ಕೆಲಸಗಳನ್ನು ರೈತರೇ ಸ್ವಂತ ಬಂಡವಾಳದಿಂದ ಸುಮಾರು 32 ಲಕ್ಷ ಬೋರ್‌ವೆಲ್‌ಗಳನ್ನು ಕೊರೆದು ಬೆಳೆ ಬೆಳೆಯುವ ಮೂಲಕ ದೇಶದ ಆಹಾರದ ಭದ್ರತೆಯನ್ನು ಕಾಪಾಡಿದ್ದಾರೆ” ಎಂದು ಅಭಿಪ್ರಾಯಪಟ್ಟರು.
“ಎಲ್ಲಾ ರಾಜಕಾರಣೆಗಳು ಚುನಾವಣೆಗೆ ಮುಂಚಿತವಾಗಿ ಕೊಟ್ಟಂತಹ ಆಶ್ವಾಸನೆಗಳನ್ನು ಇದುವರೆಗೂ ಜಾರಿ ಮಾಡದೇ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ರೈತವಿರೋಧಿ 3 ಕೃಷಿ ಕಾಯಿದೆಗಳು ರದ್ದಾಗಬೇಕು ಮತ್ತು ಡಾ॥ ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಿ ರೈತರಿಗೆ M.S.P. ಜಾರಿಯಾಗುವವರೆಗೆ ರೈತರಿಗೆ ಕೊಟ್ಟಿರುವಂತಹ ಯಾವುದೇ ಕಾನೂನುಗಳನ್ನು ಬದಲಾವಣೆ ಮಾಡುವಂತಿಲ್ಲ. ಈಗ ರೈತರು ಕೃಷಿಗಾಗಿ ವಿದ್ಯುತ್ ಬಳಸುತ್ತಿದ್ದು, ಯಾವುದೇ ಕಾರಣಕ್ಕೂ ರೈತರು ಬಳಸುವ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ತನ್ನು ಕಟ್ ಮಾಡಬಾರದು” ಎಂದು ಎಚ್ಚರಿಸಿದರು.

“ರೈತರ ಎಚ್ಚರಿಕೆ ಉಲ್ಲಂಘಿಸಿ ಮುಂದುವರೆದರೆ ರೈತರು ತಾಳ್ಮೆ ಕಳೆದುಕೊಂಡು ಹೋರಾಟಕ್ಕೆ ಧುಮಿಕಿದರೆ ಆಗುವ ಕಷ್ಟನಷ್ಟಗಳು, ಮಾನ ಹಾನಿ ಮತ್ತು ಪ್ರಾಣಹಾನಿಗೆ ಆಳುವ ಸರ್ಕಾರಗಳೇ ಹೊಣೆಗಾರರಾಗುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಸುತ್ತದೆ. ಹಾಗಾಗಿ ರೈತ ಬೇಡಿಕೆಗಳಾದ
1.ರೈತರು ಬಳಸುವ ವಿದ್ಯುತ್ ಅಕ್ರಮವಲ್ಲ, ಅದು ಯಾವಾಗಲೂ ಸಕ್ರಮ. ಆದ್ದರಿಂದ ಸೋಲಾರ್ ಕಂಪನಿಗೆ ವರ್ಗಾವಣೆ ಮಾಡುವುದನ್ನು ಕೈ ಬಿಡಬೇಕು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬಸವಣ್ಣ, ಅಂಬೇಡ್ಕರ್ ಜೀವನದುದ್ದಕ್ಕೂ ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು; ದಸಂಸ ಮುಖಂಡ ಗುರುಮೂರ್ತಿ.
- 2022-23 ನೇ ಸಾಲಿನಲ್ಲಿ ಅಕ್ರಮ-ಸಕ್ರಮದ ಕಾನೂನಿನಲ್ಲಿ ಜಾರಿಯಾಗಿರುವ ಸವಲತ್ತುಗಳನ್ನು ಕೊಟ್ಟು, ಅದೇ ರೀತಿ ಇರುವ ಕಾನೂನನ್ನು ಮುಂದುವರೆಸಿಕೊಂಡು ಹೋಗಬೇಕು. ಕೃಷಿ ಈ ದೇಶದ ಸಂಪತ್ತಾಗಿರುವುದರಿಂದ ಕೃಷಿ ಕ್ಷೇತ್ರವನ್ನು ಯಾವುದೇ ಕಾರಣಕ್ಕೆ, ಯಾವುದೇ ಕಂಪನಿಗಳಿಗೆ ವರ್ಗಾವಣೆ ಮಾಡಬಾರದು. ಈ ಬೇಡಿಕೆಗಳನ್ನು ಸರ್ಕಾರಗಳು ಉಲ್ಲಂಘಿಸಿದರೆ ರಾಜ್ಯಾಧ್ಯಂತ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ” ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಬೇಡಿಕೆ ಈಡೇರಿಕೆಗಾಗಿ ತಹಶೀಲ್ದಾರ್ ರೆಹಾನ್ ಪಾಷಾ ಅವರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಲಾಯಿತು. ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠ ಮೂರ್ತಿ, ಮುಖಂಡರಾದ ಶಿವಕುಮಾರ್, ರಾಜಣ್ಣ, ತಿಪ್ಪೇಸ್ವಾಮಿ, ಓಬಯ್ಯ, ತಿಪ್ಪೇಸ್ವಾಮಿ, ಸಣ್ಣ ಪಾಲಯ್ಯ, ಬೊಮ್ಮಣ್ಣ, ಈರಣ್ಣ, ಜಯಣ್ಣ, ಹನುಮಂತಪ್ಪ, ತಿಮ್ಮಾರೆಡ್ಡಿ, ಶಿವಕುಮಾರ್, ರಂಗಸ್ವಾಮಿ, ಉಪ್ಪಾರಹಟ್ಟಿ ಗ್ರಾಮದ ರೈತರಾದ ರತ್ನಮ್ಮ, ಶಿವಮ್ಮ, ಲಕ್ಷ್ಮೀದೇವಿ, ರಾಜಣ್ಣ ಸೇರಿದಂತೆ ನೂರಾರು ರೈತರು ಮಹಿಳೆಯರು ಭಾಗವಹಿಸಿದ್ದರು.