ರಾಜ್ಯದಲ್ಲಿ ಅಖಿಲ ಭಾರತೀಯ ಸಭಾಧ್ಯಕ್ಷರ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು, ಸೆಪ್ಟೆಂಬರ್ 8 ರಿಂದ 10ರವರೆಗೆ ಸಮ್ಮೇಳನ ನಡೆಸಲಾಗುವುದು ಎಂದು ಸಭಾಧ್ಯಕ್ಷ ಯು ಟಿ ಖಾದರ್ ತಿಳಿಸಿದರು.
ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಮೊದಲ ಬಾರಿಗೆ ಸ್ಪೀಕರ್ ಸಮಾವೇಶದ ಆತಿಥ್ಯ ವಹಿಸುವ ಅವಕಾಶ ರಾಜ್ಯಕ್ಕೆ ಸಿಕ್ಕಿದೆ. ಬೆಂಗಳೂರಿನಲ್ಲಿ ಸಮ್ಮೇಳನ ಆಯೋಜಿಸಲಾಗುವುದು. ಸೆ. 8 ರಂದು ಸಂಜೆ ವಿಧಾನಸೌಧದಲ್ಲಿ ಲೋಕಸಭೆ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಸಮಾವೇಶದಲ್ಲಿ ದೇಶದ ಎಲ್ಲಾ ರಾಜ್ಯಗಳ ಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿಗಳು, ಉಪಸಭಾಪತಿಗಳು, ಹಿರಿಯ ಅಧಿಕಾರಿಗಳು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿಯಾಗಿಯಾಗುವ ನಿರೀಕ್ಷೆ ಇದೆ. ಮೇ. 11ರಂದು ಪ್ರತಿನಿಧಿಗಳೊಂದಿಗೆ ರಾಜ್ಯದ ಮೈಸೂರು, ಮಂಗಳೂರು ಅಥವಾ ಬೇಲೂರು-ಹಳೇಬೀಡು ಇವುಗಳಲ್ಲಿ ಯಾವುದಾದರೊಂದು ಐತಿಹಾಸಿಕ ಪ್ರೇಕ್ಷಣಿಯ ಸ್ಥಳಕ್ಕೆ ಪ್ರವಾಸ ಕೈಗೊಳ್ಳಲಾಗುವುದು” ಎಂದು ಮಾಹಿತಿ ನೀಡಿದರು.
“ರಾಜ್ಯದಲ್ಲಿ ಸಮ್ಮೇಳನ ಆಯೋಜಿಸುವಂತೆ ಕೋರಿ ಲೋಕಸಭಾ ಸಭಾಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು. ಅವರು ಒಪ್ಪಿಗೆ ಸೂಚಿಸಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ. ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮಗಳಿಗೆ ಶಾಸಕರನ್ನು ಆಹ್ವಾನಿಸಲಾಗುವುದು. ಉಳಿದಂತೆ ಆಹ್ವಾನಿತರಷ್ಟೇ ಭಾಗವಹಿಸಲಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು | ಅನಿಲ ಸೋರಿಕೆಯಿಂದ ಹೊತ್ತಿ ಉರಿದ ಮನೆ: ಇಬ್ಬರು ಸಜೀವ ದಹನ