ಬೀದರ್ ಡಿಸಿಸಿ ಬ್ಯಾಂಕಿಗೆ ಸುಳ್ಳು ಮಾಹಿತಿ ಕೊಟ್ಟು, ಸಾರ್ವಜನಿಕರ ಹಣ ವಂಚಿಸಿರುವ ಆರೋಪದಡಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯ (ಎನ್‌ಎಸ್‌ಎಸ್‌ಕೆ) ಅಧ್ಯಕ್ಷ ಡಿ.ಕೆ. ಸಿದ್ರಾಮ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಜನವಾಡ ಠಾಣೆ ಪೊಲೀಸರು ಶುಕ್ರವಾರ ಬೆಳಿಗ್ಗೆ ಭಾಲ್ಕಿಗೆ ತೆರಳಿ, ಡಿ.ಕೆ. ಸಿದ್ರಾಮ ಅವರನ್ನು ಅವರ ನಿವಾಸದಲ್ಲಿ ವಶಕ್ಕೆ ಪಡೆದರು. ಆನಂತರ ಅವರನ್ನು ಬೀದರ್ ಜಿಲ್ಲಾ ನ್ಯಾಯಾಲಯದ ಎದುರು ಹಾಜರುಪಡಿಸಿದರು. ನ್ಯಾಯಾಲಯವು ಸಿದ್ರಾಮ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತು.
ಹಣ ವಂಚನೆಗೆ ಸಂಬಂಧಿಸಿದಂತೆ ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ, ಮಾಜಿ ವ್ಯವಸ್ಥಾಪಕ ಅಪರಂಜಿ ಬಿ.ಎಸ್., ಡಿಸಿಸಿ ಬ್ಯಾಂಕಿನ ಮಾಜಿ ಸಿಇಒ ಮಹಾಜನ್ ಮಲ್ಲಿಕಾರ್ಜುನ, ಬ್ಯಾಂಕಿನ ಮಾಜಿ ಪ್ರಧಾನ ವ್ಯವಸ್ಥಾಪಕ ಚನ್ನಬಸಯ್ಯ ಸ್ವಾಮಿ, ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಸದಾಶಿವ ಪಾಟೀಲ, ಇಮಾಮಪುರ ಡಿಸಿಸಿ ಬ್ಯಾಂಕಿನ ಶಾಖೆ ಮಾಜಿ ವ್ಯವಸ್ಥಾಪಕ ಸೈಯದ್ ರಾಹಿಲ್ ಅಹಮ್ಮದ್, ಎನ್‌ಎಸ್‌ಎಸ್‌ಕೆ ಇತರೆ ನಿರ್ದೇಶಕರ ವಿರುದ್ಧ ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಖಂಡ್ರೆ ಅವರು ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಿದ್ದಾರೆ ಎಂದು ಡಿ.ಕೆ.ಸಿದ್ರಾಮ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಆಪರೇಷನ್ ಸಿಂಧೂರ’ ಟೈಟಲ್ ನೋಂದಣಿಗೆ ಮುಗಿಬಿದ್ದ ಬಾಲಿವುಡ್ ನಿರ್ಮಾಪಕರು