ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಒಟ್ಟು ಬರಹದಲ್ಲಿ ಸಮಾಜ, ರಾಜಕಾರಣ, ಪರಿಸರ, ಆರ್ಥಿಕತೆ ಸೇರಿ ಲೋಕ ವಿಮರ್ಶೆಯ ಮಾದರಿಯೊಂದು ಕಾಣುತ್ತೇವೆ. ಅವರ ಬರಹಕ್ಕೆ ಸಮಕಾಲೀನ ಸ್ಪಂದನೆಯ ಗುಣವಿದೆ ಎಂದು ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಹೇಳಿದರು.
ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಬೀದರ್ ಇವರ ಸಹಯೋಗದಲ್ಲಿ ಬಸವಕಲ್ಯಾಣದ ಎಸ್‌ಎಸ್‌ಕೆ ಬಸವೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘ಹೊಸ ವಿಚಾರಗಳು’ ಕುರಿತ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದರು.
ʼಲೋಕ ವಿಮರ್ಶೆ ಹಾಗೂ ಜೀವನ ಶೋಧ ತೇಜಸ್ವಿ ಬರಹದ ತಾತ್ವಿಕತೆಯಾಗಿದೆ. ಸಮಾಜದ ಸ್ಥಗಿತತೆ ಮೀರುವ ದಾರಿಗಳು, ಮನುಷ್ಯನೂ ಸೇರಿ ಎಲ್ಲ ಜೀವಿಗಳ ಅಸ್ತಿತ್ವ ಅರಿಯಲು, ಪರಿಸರ ಪ್ರಜ್ಞೆ ರೂಪಿಸಿಕೊಳ್ಳಲು, ಲೋಕದ ಸಂಕೀರ್ಣತೆ ಕಂಡುಕೊಳ್ಳಲು ತೇಜಸ್ವಿ ಬರಹ ದಾರಿಯಾಗಿವೆ. ಜಾಗತಿಕ ಅರ್ಥ ವ್ಯವಸ್ಥೆ, ರೈತರ ಕಷ್ಟಗಳು, ರಾಜಕಾರಣಿಗಳ ಬೇಜವಾಬ್ದಾರಿ, ಕನ್ನಡಕ್ಕೆ ತೆರೆದುಕೊಳ್ಳಬೇಕಾದ ತಂತ್ರಜ್ಞಾನಗಳ ಬಗೆಗೆ ಗಾಢವಾದ ಚಿಂತನೆ ಮಾಡಿದ್ದಾರೆ. ಜಾಗತಿಕರಣ ಹಾಗೂ ಮುಕ್ತ ಮಾರುಕಟ್ಟೆಯ ಬಂಡವಾಳಶಾಹಿಗಳ ಇದಿರು ಎಲ್ಲರೂ ಗ್ರಾಹಕರಾಗಿದ್ದೇವೆ. ಮನುಷ್ಯ ಲೋಕ ಸರಕು ಸಂಸ್ಕೃತಿಯಾಗಿ ಮಾರ್ಪಟ್ಟದೆ. ವ್ಯಕ್ತಿಯ ಜೀವನ ವಿಧಾನವೇ ವ್ಯವಹಾರಿಕವಾದ ಕುರಿತು ‘ಹೊಸ ವಿಚಾರಗಳು’ ಕೃತಿಯಲ್ಲಿ ಅವರು ಚರ್ಚಿಸಿದ್ದಾರೆʼ ಎಂದರು.
ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಮಾತನಾಡಿ, ʼಪ್ರತಿಯೊಂದು ಕೆಲಸದಲ್ಲಿ ಶ್ರದ್ಧೆ ಇರಬೇಕು. ಓದುವುದು ಒಂದು ತಪಸ್ಸಿನಂತೆ ಪರಿಗಣಿಸಿದರೆ ಭವಿಷ್ಯ ರೂಪಿಸಿಕೊಳ್ಳುತ್ತದೆ. ಸದ್ಯದ ಸಂದರ್ಭದಲ್ಲಿ ಹಲವು ಅವಕಾಶಗಳಿವೆ. ಅದನ್ನು ಬಳಸಿಕೊಳ್ಳಬೇಕು. ಜ್ಞಾನದ ವಲಯವನ್ನು ವಿಸ್ತರಿಸಲು, ಅರ್ಥೈಸಿಕೊಳ್ಳಲು ಯತ್ನಿಸಿ ಎಂದರು.
ʼತೇಜಸ್ವಿ ಅವರು ಕನ್ನಡದ ಬಹುದೊಡ್ಡ ಓದುಗ ಬಳಗ ಹೊಂದಿದ ಲೇಖಕರು. ಅವರ ಬರಹದಲ್ಲಿ ಕಾಡು, ನೆಲ, ನಿಸರ್ಗದ ವಿಸ್ಮಯ ಮತ್ತು ಕೌತುಕಗಳು ಅಡಕವಾಗಿದೆ. ಓದು ಅಧ್ಯಯನ ವ್ಯಕ್ತಿಯನ್ನು ಸ್ವಾವಲಂಬಿ ಮತ್ತು ಸ್ವಾಭಿಮಾನಿಯಾಗಿ ಬೆಳೆಸುತ್ತವೆ. ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ನೀವು ಮುಂದುವರೆದರೆ ಸೃಜನಶೀಲತೆ ಸೃಷ್ಟಿಸಬಹುದುʼ ಎಂದು ತಿಳಿಸಿದರು.
ʼಮಾಧ್ಯಮ ಕ್ಷೇತ್ರದಲ್ಲಿ ಹಲವು ಅವಕಾಶಗಳಿವೆ. ಪ್ರತಿಭೆಗೆ ಹೆಚ್ಚು ಆದ್ಯತೆಯಿದೆ. ಮಾಧ್ಯಮಕ್ಷೇತ್ರಕ್ಕೆ ಹೊಸ ಪೀಳಿಗೆ ಪ್ರವೇಶ ಅಗತ್ಯವಿದೆ. ಸಾಮಾಜಿಕ ಜಾಲತಾಣಗಳಿಗೆ ಅಧಿಕೃತತೆ ಇರುವುದಿಲ್ಲ. ಅಲ್ಲಿ ಹುಸಿ ಸುದ್ದಿಗಳಿರುತ್ತವೆ. ಪತ್ರಿಕೆಗಳಿಗೆ ಹಾಗೂ ಕೃತಿಗಳಿಗೆ ಅಧಿಕೃತ ಬರಹಗಾರರಿರುತ್ತಾರೆ. ಸದ್ಯದ ವಿದ್ಯಮಾನಗಳನ್ನು ಅರಿಯಲು ಪತ್ರಿಕೆಗಳ ಅಗತ್ಯವಿದೆʼ ಎಂದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಸಾಹಿತ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಸಮಾರಂಭ ಆಯೋಜಿಸಲಾಗಿದೆ.ವಿದ್ಯಾರ್ಥಿಗಳಲ್ಲಿ ವೈಚಾರಿಕತೆ, ವಿವೇಚನೆಗಯನ್ನು ಮೂಡಿಸುವ ಕೆಲಸ ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಡುತ್ತಿದೆʼ ಎಂದರು.
ʼಹೊಸ ಪ್ರತಿಭೆಗಳಿಗೆ ಸಾಹಿತ್ಯ ಅಕಾಡೆಮಿ ವೇದಿಕೆಯಾಗಿದೆ. ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಚರಿತ್ರೆಯಿದೆ. ಶ್ರೇಷ್ಠ ಸಾಹಿತ್ಯ ಕೃತಿಗಳ ಓದಿನಿಂದ ಹೊಸ ಅರಿವು ವಿಸ್ತರಿಸಿಕೊಳ್ಳಬಹುದುʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಕ್ಯುಎಸಿ ಸಂಯೋಜಕ ಡಾ. ಶಿವಕುಮಾರ ಪಾಟೀಲ ಮಾತನಾಡಿ, ʼಪುಸ್ತಕ ಓದುವ ಹವ್ಯಾಸ ಕಡಿಮೆಯಾಗಿದ್ದು ಅತ್ಯಂತ ನೋವಿನ ಸಂಗತಿ. ಓದಿನಿಂದಲೇ ಜ್ಞಾನದ ವಿಸ್ತಾರ ಸಾಧ್ಯ. ಓದಿನ ಹಸಿವಿನಿಂದಲೇ ತಿಳುವಳಿಕೆ ಹೆಚ್ಚಾಗುತ್ತದೆ. ಪಕ್ಷಿಲೋಕ ಬಗೆಗೆ ಹೆಚ್ಚು ನಿರ್ದಿಷ್ಟ ಮತ್ತು ವೈಜ್ಞಾನಿಕವಾಗಿ ತೇಜಸ್ವಿ ಬರೆದಿದ್ದಾರೆʼ ಎಂದರು.
ಭಾಲ್ಕಿಯ ನಿವೃತ್ತ ಗ್ರಂಥಪಾಲಕ ಉಮೇಶ ಮಾಸಿಮಾಡೆ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಯೋಜಕಿ ಡಾ.ಮಕ್ತುಂಬಿ ಎಂ. ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಶಬನಮ್ ಹಾಗೂ ಜಯಶ್ರೀ ಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.
ಡಾ.ಸುರೇಶ ಎಚ್.ಆರ್. ಕಲ್ಯಾಣಪ್ಪಾ ನಾಗವದಗಿ, ನಾಗಪ್ಪಾ ನಿಣ್ಣೆ, ಸೂರ್ಯಕಾಂತ ನಾಸೆ, ಭಾರತಿ ಮಠ, ಶಿಲ್ಪಾ ಬಿರಾದಾರ, ಪೂಜಾ ಮೊದಲಾದವರಿದ್ದರು. ಪ್ರೊ. ವಿಠೋಬಾ ಡೊಣ್ಣೆಗೌಡರ್ ಸ್ವಾಗತಿಸಿದರು. ಭೀಮಾಶಂಕರ ಪೂಜಾರಿ ನಿರೂಪಿಸಿದರು. ಡಾ. ರಮೇಶ ಕೆ. ಬಿ. ವಂದಿಸಿದರು.