ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಅಳವಡಿಸಿಕೊಳ್ಳಲು ಯಾವುದೇ ರಾಜ್ಯದ ಮೇಲೆ ನ್ಯಾಯಾಲಯವು ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರಾಜ್ಯಗಳಿಗೆ ಎನ್‌ಇಪಿ ಅಳವಡಿಸಿಕೊಳ್ಳಲು ಸೂಚನೆ ನೀಡುವಂತೆ ಕೋರಿದ್ದ ಅರ್ಜಿಯನ್ನು ತಿಸ್ಕರಿಸಿದೆ.
ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಎನ್‌ಇಪಿಯನ್ನು ಅನುಷ್ಠಾನಗೊಳಿಸುವುದಿಲ್ಲ ಎಂದು ಘೋಷಿಸಿವೆ. ಹೀಗಾಗಿ, ತಮಿಳುನಾಡು ಮೂಲದ ವಕೀಲ, ಬಿಜೆಪಿ ನಾಯಕ ಮಣಿ ಅವರು ಆ ರಾಜ್ಯಗಳಲ್ಲಿ ಎನ್‌ಇಪಿಯನ್ನು ಅನುಷ್ಠಾನಗೊಳಿಸುವಂತೆ ಮತ್ತು ಎನ್‌ಇಪಿ ಅಡಿಯಲ್ಲಿ ತ್ರಿಭಾಷಾ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದರು.
ಕೇಂದ್ರ ಸರ್ಕಾರದ ಕಾನೂನುಗಳು, ಯೋಜನೆಗಳು ಮತ್ತು ನೀತಿಗಳು ಎಲ್ಲ ರಾಜ್ಯ ಸರ್ಕಾರಗಳಿಗೆ ಅನ್ವಯಿಸುತ್ತವೆ. ಅಂತಹ ನೀತಿಯನ್ನು ಜಾರಿಗೆ ತರುವುದು ರಾಜ್ಯ ಸರ್ಕಾರದ ಕರ್ತವ್ಯ. ಇದು ಸಂವಿಧಾನದಲ್ಲಿ ನೀಡಲಾದ ಮೂಲಭೂತ ಕರ್ತವ್ಯ ಮತ್ತು ಹಕ್ಕು ಎಂದು ಅರ್ಜಿಯಲ್ಲಿ ವಾದಿಸಿದ್ದರು.
ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
“ಕ್ಷಮಿಸಿ, ನಾವು (ನ್ಯಾಯಾಲಯ) ಯಾವುದೇ ಆದೇಶವನ್ನು ನೀಡಲು ಸಾಧ್ಯವಿಲ್ಲ. ಎನ್‌ಇಪಿ ರೀತಿಯ ನೀತಿಯನ್ನು ಅಳವಡಿಸಿಕೊಳ್ಳಲು ನಾವು ನೇರವಾಗಿ ರಾಜ್ಯವನ್ನು ಒತ್ತಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದೆ.
ಎನ್‌ಇಪಿಗೆ ಸಂಬಂಧಿಸಿದಂತೆ ರಾಜ್ಯದ ಕ್ರಮಗಳು ಅಥವಾ ನಿಷ್ಕ್ರಿಯತೆಯು ಯಾವುದಾದರೂ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದ್ದರೆ ಮಾತ್ರವೇ ನ್ಯಾಯಾಲಯವು ಮಧ್ಯಪ್ರವೇಶಿಸುತ್ತದೆ. ಇಲ್ಲದಿದ್ದರೆ, ನಾವು ರಾಜ್ಯಗಳ ಮೇಲೆ ಒತ್ತಡ ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.