ಮಂಡ್ಯದಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮುದ್ರಿಸಲಾದ ‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಗೈರಾಗಿರುವುದನ್ನು ಖಂಡಿಸಿ ಕನ್ನಡ ಪರ, ಸಾಹಿತ್ಯ, ಸಂಘ – ಸಂಸ್ಥೆಗಳ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಚಿಸಿರುವ ‘ಬೆಲ್ಲದಾರತಿ’ ಸ್ಮರಣ ಸಂಚಿಕೆ ಶುಕ್ರವಾರ (ಮೇ 9) ಸಂಜೆ 4 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆಗೆ ಸಮಯ ನಿಗದಿ ಪಡಿಸಲಾಗಿತ್ತು. ಈ ಸಭೆಗೆ ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಗೈರಾಗಿದ್ದು ಕನ್ನಡ ಪರ, ಸಾಹಿತ್ಯ, ಸಂಘ – ಸಂಸ್ಥೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರೊ. ಜಯಪ್ರಕಾಶ್ ಗೌಡ, ಕಸಪಾ ಅಧ್ಯಕ್ಷ ಮಹೇಶ್ ಜೋಶಿ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಡಳಿತ ಸಂಚಿಕೆಯನ್ನು ಹೊರ ತರಬೇಕು. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಜೋಶಿ ಅವರು ವೆಚ್ಚ ಮಾಡಿದ 2.50 ಕೋಟಿ ರೂ. ಗೆ ಇನ್ನೂ ಲೆಕ್ಕ ಕೊಟ್ಟಿಲ್ಲ. ಈ ನಡುವೆ ಅವರು ಮುಂದಿನ ವರ್ಷ ಬಳ್ಳಾರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 40 ಕೋಟಿ ರೂ. ಅವಶ್ಯಕತೆ ಇದೆ ಎಂದು ಪ್ರಸ್ತಾಪ ಸಲ್ಲಿಸಿದ್ದಾರೆ. ಕೂಡಲೇ ಜೋಶಿ ಅವರನ್ನು ಕಸಾಪದಿಂದ ವಜಗೊಳಿಸಬೇಕು ಎಂದು ಒತ್ತಾಯಿಸಿದರು.
ಮಹೇಶ್ ಜೋಶಿ ವಿರುದ್ಧ ಮೇ 17ರಂದು ಮೈಸೂರು ವಿಭಾಗ ಮಟ್ಟದ ಪ್ರತಿಭಟನಾ ಸಭೆಯನ್ನು ಮಂಡ್ಯದಲ್ಲಿ ಹಮ್ಮಿಕೊಂಡಿದ್ದೇವೆ. ಈ ಸಭೆಯಿಂದಲೇ ಜೋಶಿ ಅವರ ಅವನತಿ ಪ್ರಾರಂಭವಾಗಲಿದೆ. ಜೋಶಿ ಹೊರ ದೇಶದಿಂದ ಸಂಗ್ರಹಿಸಿದ ಹಣಕ್ಕೆ ಲೆಕ್ಕವಿಲ್ಲ. ಅಲ್ಲದೆ ವಿದೇಶಿ ಪ್ರವಾಸಕ್ಕೆ 24 ಕೋಟಿ ರೂ. ಖರ್ಚು ಮಾಡಿದ್ದಾರೆ. ಅದರ ಲೆಕ್ಕ ಕೊಡ ಕೊಡಬೇಕು ಎಂದು ಅವರು ಆಗ್ರಹಿಸಿದರು.
ಸಮ್ಮೇಳನದ ಸಂದರ್ಭದಲ್ಲಿ ಮಹೇಶ್ ಜೋಶಿ ಅವರಿಂದ ಹಲವು ಅವ್ಯವಹಾರ ನಡೆದಿದೆ ಎಂದು ಮಂಡ್ಯದ ಕನ್ನಡ ಪರ, ಸಾಹಿತ್ಯ, ಸಂಘ – ಸಂಸ್ಥೆಗಳ ಮುಖಂಡರು ಆರೋಪಿಸಿದ್ದು ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದರು ಎನ್ನಲಾಗಿದೆ. ಈ ಮಾಹಿತಿ ಅರಿತ ಮಹೇಶ್ ಜೋಶಿ ಮಂಡ್ಯ ಸಂಚಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ಕೆ.ಬೋರಯ್ಯ, ಸುನಂದ ಜಯರಾಂ, ಮುದ್ದೇಗೌಡ, ಕೃಷ್ಣಪ್ರಕಾಶ್, ಕಾರಸವಾಡಿ ಮಹದೇವು, ಟಿ.ಎಲ್ಕೃ.ಷ್ಣೆಗೌಡ, ಸಿ.ಕುಮಾರಿ, ಮಂಗಲ ಲಂಕೇಶ್, ಯೋಗಣ್ಣ, ಜಯರಾಂ, ವೆಂಕಟಗಿರಿಯಯ್ಯ ನರಸಿಂಹಮೂರ್ತಿ, ಹುರುಗಲವಾಡಿ ರಾಮಯ್ಯ ಹಾಗೂ ಸುರೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.