ಒಳಮೀಸಲಾತಿ ಒದಗಿಸಲು ಸರ್ಕಾರ ನಡೆಸುತ್ತಿರುವ ಸಮೀಕ್ಷೆ ವೇಳೆ, ಗಣತಿದಾರರು ಮನೆಗಳಿಗೆ ಬಂದಾಗ ಯಾವ ರೀತಿ ಉತ್ತರಿಸಬೇಕು ಎಂಬುದುರ ಕುರಿತು ‘ಬೇಡ ಜಂಗಮ’ ಸಮುದಾಯಕ್ಕೆ ಸೂಚಿಸುವ ಪ್ರಕಟಣೆಯೊಂದನ್ನು ಬೇಡ ಜಂಗಮ ಸಮಾಜ ಸಂಸ್ಥೆ ಹೊರಡಿಸಿದೆ. ಈ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿರುವ ವಿವರಗಳು ಪರಿಶಿಷ್ಟ ಸಮುದಾಯಗಳ ಆಕ್ರೋಶಕ್ಕೆ ಗುರಿಯಾಗಿದೆ. ಜಂಗಮ ಸಮುದಾಯವನ್ನು ಸಂಘವು ಬೆದರಿಸುತ್ತಿದೆ ಎಂದು ಸಮುದಾಯಗಳು ಆರೋಪಿಸಿವೆ.
ಬೇಡ ಜಂಗಮ ಸಂಘವು ಹೊರಡಿಸಿರುವ ಪ್ರಕರಣೆಯಲ್ಲಿ ಸಮೀಕ್ಷೆದಾರರು ಕೇಳಬಹುದಾದ ಪ್ರಶ್ನೆಗಳಿಗೆ ಯಾವ ರೀತಿಯ ಉತ್ತರ ನೀಡಬೇಕು ಎಂದು ವಿವರಿಸಲಾಗಿದೆ. ಗಣತಿದಾರರು ‘ನೀವು ಪರಿಶಿಷ್ಟ ಜಾತಿಯವರೇ’ ಎಂದು ಕೇಳಿದಾಗ, ‘ಹೌದು’ ಎಂದು ಉತ್ತರಿಸಬೇಕು. ಮೂಲ ಜಾತಿ ಕಾಲಂನಲ್ಲಿ ‘ಬೇಡ ಜಂಗಮ’ ಮತ್ತು ಕಸುಬು ಕಾಲಂನಲ್ಲಿ ‘ಧಾರ್ಮಿಕ ಭಿಕ್ಷುಗಳು’ ಎಂದು ಬರೆಯಿಸಬೇಕು ಎಂದು ನಿರ್ದೇಶನ ನೀಡಿದೆ.
ದತ್ತಾಂಶ ಸಂಗ್ರಾಹಕರು ಜಾತಿ ಪ್ರಮಾಣಪತ್ರ ಕೇಳಿದರೆ, ‘ಗಣತಿಗೆ ಜಾತಿ ಪ್ರಮಾಣಪತ್ರ ಕಡ್ಡಾಯವಲ್ಲ’ ಎಂದು ಮಾತ್ರವೇ ಉತ್ತರಿಸಬೇಕು. ಆ ಮಾಹಿತಿ ಪರಿಗಣಿಸದಿದ್ದರೆ ಗಣತಿಯ ಹಸ್ತಪ್ರತಿಗೆ ಸಹಿ ಮಾಡಬೇಡಿ ಎಂದು ಸೂಚಿಸಿದೆ. ಅಲ್ಲದೆ, ಗಣತಿದಾರರ ಗುರುತಿನ ಚೀಟಿ, ಫೋಟೊ ಹಾಗೂ ಸಂಪರ್ಕ ಸಂಖ್ಯೆಯನ್ನು ಒಡೆದುಕೊಳ್ಳಿ ಎಂದು ಹೇಳಿದೆ. ಇದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಈ ಪ್ರಕಟಣೆ ವಿರುದ್ಧ ಪರಿಶಿಷ್ಟ ಸಮುದಾಯಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಧಿಕೃತ ಸಂಘವು ಜಂಗಮ ಸಮುದಾಯದ ಜನರನ್ನು ಹೆದರಿಸುತ್ತಿದೆ. ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಪಡೆಯಲು ಷ್ಯಡ್ಯಂತ್ರ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾಣಿ ಬೇಟೆಯಾಡಿ ತಿನ್ನುವ ಬೇಡ ಜಂಗಮ/ ಬುಡ್ಗ ಜಂಗಮ ಸಮುದಾಯದಲ್ಲಿ ಕೇವಲ 150 ಕುಟುಂಬಗಳು ಮಾತ್ರವೇ ಇವೆ. ಆದರೆ, ವೀರಶೈವ ಲಿಂಗಾಯತರು ತಮ್ಮ ಪಂಗಡದಲ್ಲಿರುವ ಜಂಗಮ ಪದವನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಸಮುದಾಯಗಳ ಹಕ್ಕು ಕಸಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
“ವೀರಶೈವ ಲಿಂಗಾಯತರು ‘ಜಂಗಮ’ ಹೆಸರನ್ನು ಬಳಸಿಕೊಂಡು ಪರಿಶಿಷ್ಟ ಜಾತಿಯ ಸೌಲಭ್ಯಗಳನ್ನು ಪಡೆಯಲು ಹುನ್ನಾರ ನಡೆಸಿದ್ದಾರೆ. ಇದು ಕಾನೂನುಬಾಹಿರವಾಗಿದೆ. ಈ ಕುರಿತು ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗಕ್ಕೆ ದೂರು ನೀಡಲಿದ್ದೇವೆ” ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದ್ದಾರೆ.