2024-25ನೇ ಸಾಲಿನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬೀದರ್ ಜಿಲ್ಲೆಯ 4,321 ವಿದ್ಯಾರ್ಥಿಗಳು ಮಾತ್ರಭಾಷೆ ಕನ್ನಡದಲ್ಲೇ ಅನುತೀರ್ಣರಾಗಿದ್ದಾರೆ. ವಿಜ್ಞಾನ ಮತ್ತು ಗಣಿತ ವಿಷಯಗಳು ಕಬ್ಬಿಣದ ಕಡಲೆ ಎನ್ನಲಾಗುತ್ತಿತ್ತು. ಆದರೆ ಜಿಲ್ಲೆಯ ಎಸ್‌ಎಸ್‌ಎಲ್‌ಸಿಯ ಒಂದಷ್ಟು ವಿದ್ಯಾರ್ಥಿಗಳಿಗೆ ಕನ್ನಡವೇ ʼಕಬ್ಬಿಣದ ಕಡಲೆʼಯಾಗಿದೆ!.
ಈ ಬಾರಿ ಜಿಲ್ಲೆಯಲ್ಲಿ ಪ್ರಥಮ ಭಾಷೆ ಕನ್ನಡ ಪರೀಕ್ಷೆ ಬರೆದಿದ್ದ 14,430 ವಿದ್ಯಾರ್ಥಿಗಳ ಪೈಕಿ,10,109 (ಶೇ 70.06ರಷ್ಟು) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ 29.94 ರಷ್ಟು ಮಂದಿ ಅನುತೀರ್ಣರಾಗಿದ್ದಾರೆ.
ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯು ಬಹುಭಾಷಿಕರ ನೆಲ. ಇಲ್ಲಿ ಕನ್ನಡ, ಹಿಂದಿ, ಉರ್ದು, ಮರಾಠಿ ಹಾಗೂ ತೆಲುಗು ಸೇರಿದಂತೆ ಇತರ ಭಾಷಿಕರಿದ್ದಾರೆ. ನಿಜಾಂ ಆಳ್ವಿಕೆಯಲ್ಲಿ ಉರ್ದು ಪ್ರಭಾವಕ್ಕೆ ಒಳಗಾಗಿದ್ದ ಈ ಪ್ರದೇಶದಲ್ಲಿ ನಿಜಾಂ ಆಡಳಿತ ವಿರುದ್ಧ ಭಾಷಾ ಚಳವಳಿ ರೂಪಿಸಿ ಅನೇಕರು ಕನ್ನಡ ಭಾಷೆ ಕಾಪಾಡಿದರು. ಇಂತಹ ಅಪರೂಪದ ನೆಲದಲ್ಲಿ ಕನ್ನಡ ಭಾಷೆ ಕುಸಿಯುತ್ತಿದೆಯೇ ಎಂಬುದು ಅಚ್ಚರಿಗೆ ಕಾರಣವಾಗಿದೆ.
ʼಬಹುತೇಕ ಪೋಷಕರು ಮತ್ತು ಮಕ್ಕಳು ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕನ್ನಡ ಭಾಷೆ ಆಯ್ಕೆಗೆ ಹಿಂದೇಟು ಹಾಕುತ್ತಿರುವುದು ವಾಸ್ತವ. ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಕನ್ನಡ ಓದು, ಬರಹ ಹಾಗೂ ವ್ಯಾಕರಣ ಸ್ಪಷ್ಟವಾಗಿ ಬರುವುದಿಲ್ಲ. ಅವರಿಗೆ ಕನ್ನಡ ಎಂದರೆ ಕಡುಕಷ್ಟ ಎಂಬಂತಿದೆ. ಇನ್ನು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಶಿಕ್ಷಕರ ಕೊರತೆಯಿದ್ದು, ಅತಿಥಿ ಶಿಕ್ಷಕರಿಂದ ಬೋಧಿಸಲಾಗುತ್ತಿದೆ. ಈ ಎಲ್ಲ ಕಾರಣದಿಂದ ಮಾತ್ರಭಾಷೆ ಶಿಕ್ಷಣಕ್ಕೆ ಭಾರಿ ಹೊಡೆತ ಬೀಳುತ್ತಿದೆʼ ಎಂದು ವಿಶ್ಲೇಷಿಸಲಾಗುತ್ತಿದೆ.
ಶಿಕ್ಷಕರ ಕೊರತೆ :
ʼ2024-25ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ಒಟ್ಟು 287 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅದರಲ್ಲಿ ಮಾತ್ರಭಾಷೆ ಕನ್ನಡ ವಿಷಯದ ಅತಿಥಿ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿದ್ದರು. ಕೆಲ ತಾಲ್ಲೂಕಿನ ಅರ್ಧದಷ್ಟು ಪ್ರೌಢ ಶಾಲೆಗಳಲ್ಲಿ ಕಾಯಂ ಕನ್ನಡ ಶಿಕ್ಷಕರಿಲ್ಲದಕ್ಕೆ ಅತಿಥಿಗಳನ್ನೇ ನೆಚ್ಚಿಕೊಳ್ಳಲಾಗಿತ್ತುʼ ಎಂದು ಕನ್ನಡ ಭಾಷಾ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದಕ್ಕೆ ಪೂರಕ ಎಂಬಂತೆ ಈ ಬಾರಿ ಪ್ರಕಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸಾಕ್ಷಿಯಾಗಿದೆ ಎನ್ನಬಹುದು. ಜಿಲ್ಲೆಯಲ್ಲಿ ಸರ್ಕಾರಿ 208, ಅನುದಾನಿತ 126 ಹಾಗೂ 234 ಅನುದಾನ ರಹಿತ ಸೇರಿ ಒಟ್ಟು 568 ಪ್ರೌಢ ಶಾಲೆಗಳಿವೆ. ಈ ಪೈಕಿ ಸರ್ಕಾರಿ ಶಾಲೆ ಶೇ 47.56, ಅನುದಾನಿತ ಶೇ 43.67 ರಷ್ಟು ಫಲಿತಾಂಶ ದಾಖಲಿಸಿದರೆ, ಅನುದಾನ ರಹಿತ ಶಾಲೆಗಳ ಫಲಿತಾಂಶ ಶೇ 63.47ರಷ್ಟು ದಾಖಲಾಗಿದೆ.
ಅನುದಾನ ರಹಿತ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಫಲಿತಾಂಶ ಈ ಬಾರಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದಕ್ಕೆ ಆ ಶಾಲೆಗಳಲ್ಲಿ ಶಿಕ್ಷಕರ ಕೊರತೆಯೂ ಪ್ರಮುಖ ಕಾರಣವಾಗಿದೆ. ಇನ್ನು ಬಹುತೇಕ ಅನುದಾನಿತ ಶಾಲೆಗಳಲ್ಲಿ ಸಾಕಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಲವು ವರ್ಷಗಳಿಂದ ಖಾಲಿ ಇರುವ ಹುದ್ದೆಗಳ ನೇಮಕ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಅಲ್ಲಿನ ಆಡಳಿತ ಮಂಡಳಿಯವರು ತಾತ್ಕಾಲಿಕವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಫಲಿತಾಂಶ ಸುಧಾರಣೆಗೆ ಪ್ರಯತ್ನಿಸಿದರೂ ಅದು ನಿರೀಕ್ಷಿತ ಫಲ ನೀಡುತ್ತಿಲ್ಲ ಎಂಬುದು ಈ ಫಲಿತಾಂಶವೇ ತಾಜಾ ಉದಾಹರಣೆ.
19 ಶಾಲೆಗಳ ಫಲಿತಾಂಶ ಶೂನ್ಯ :
ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಒಟ್ಟು 58 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. ಈ ಪೈಕಿ ಕಲಬುರಗಿಯಲ್ಲಿ 27 ಶಾಲೆಗಳಿದ್ದರೆ, ಬೀದರ್‌ನಲ್ಲಿ 19 ಶಾಲೆಗಳಿವೆ. ಬೀದರ್ ಜಿಲ್ಲೆಯ ಒಟ್ಟು 568 ಶಾಲೆಗಳಲ್ಲಿ 19 ಶಾಲೆಗಳು ಶೂನ್ಯ ಸಾಧನೆ ಮಾಡಿವೆ. ಇದರಲ್ಲಿ ಸರ್ಕಾರಿ 1, ಅನುದಾನಿತ 3 ಹಾಗೂ ಅನುದಾನ ರಹಿತ 15 ಶಾಲೆಗಳು ಶೂನ್ಯ ಸಾಧನೆ ಪಟ್ಟಿಗೆ ಸೇರಿವೆ.
ಬೀದರ್ ಜಿಲ್ಲೆಯಲ್ಲಿ 2024-25ನೇ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 23,756 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 12,651 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟಾರೆ ಫಲಿತಾಂಶ ಶೇ 53.25ರಷ್ಟು ಬಂದಿದ್ದು, ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ 31ನೇ ಸ್ಥಾನ ಪಡೆದಿದೆ. ಎರಡು ಸ್ಥಾನ ಜಿಗಿತ ಕಂಡರೂ, ಕಳೆದ ವರ್ಷಕ್ಕಿಂತ ಈ ಬಾರಿ ಫಲಿತಾಂಶ ಕುಸಿತವಾಗಿದೆ.
ಸರ್ಕಾರಿ ಶಾಲೆಯ 8,902 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 4,234 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಂದರೆ, ಅರ್ಧದಷ್ಟು 4,668 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಇನ್ನು ಅನುದಾನಿತ ಶಾಲೆಗಳಲ್ಲಿ 5,104 ವಿದ್ಯಾರ್ಥಿಗಳ ಪೈಕಿ 2,229 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಮತ್ತು ಪರಿಣಾಮಕಾರಿ ಬೋಧನೆಗೆ ಒತ್ತು ನೀಡಬೇಕಿದೆ ಎಂಬುದು ಪೋಷಕರ ಒತ್ತಾಯ.
ಮೂರು ಶಾಲೆಗಳಷ್ಟೇ ಶೇ100ರಷ್ಟು ಸಾಧನೆ :
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಮೂರು ಶಾಲೆಗಳು ಮಾತ್ರ ನೂರಕ್ಕೆ ಶೇ 100ರಷ್ಟು ಸಾಧನೆ ಮಾಡಿವೆ. ಅದರಲ್ಲಿ ಒಂದೇ ಒಂದು ಸರ್ಕಾರಿ, ಅನುದಾನಿತ ಶಾಲೆಗಳಿಲ್ಲ. ಮೂರು ಅನುದಾನ ರಹಿತ ಶಾಲೆಗಳೇ ಇರುವುದು ವಿಶೇಷ.
ಈ ಬಾರಿ 215 ಶಾಲೆಗಳು ಶೇ 40ಕ್ಕಿಂತ ಕಡಿಮೆ ಸಾಧನೆ ಮಾಡಿದ ಪಟ್ಟಿಯಲ್ಲಿ ಅದರಲ್ಲಿ ಸರ್ಕಾರಿ 86, ಅನುದಾನಿತ 74 ಹಾಗೂ ಅನುದಾನ ರಹಿತ 55 ಶಾಲೆಗಳು ಒಳಗೊಂಡಿವೆ. ಈ ಪೈಕಿ ಅರ್ಧದಷ್ಟು ಅನುದಾನಿತ ಶಾಲೆಗಳು ಶೇ 40ಕ್ಕಿಂತ ಕಡಿಮೆ ಫಲಿತಾಂಶ ದಾಖಲಿಸಿದರೆ, ಶೇ 25ಕ್ಕೂ ಅಧಿಕ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಈ ಪಟ್ಟಿಯಲ್ಲಿ ಸೇರಿವೆ.
ಇಳಿಜಾರು ಹಾದಿಯಲ್ಲಿ ಫಲಿತಾಂಶ :
ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹೆಚ್ಚಿನ ಬದಲಾವಣೆ ಕಂಡಿಲ್ಲ. 2021-22ರಲ್ಲಿ ಶೇ85.49ರಷ್ಟು, 2022-23ರಲ್ಲಿ ಶೇ 77.34ರಷ್ಟು, 2023-23ರಲ್ಲಿ ಶೇ 62.25ರಷ್ಟು ಫಲಿತಾಂಶ ದಾಖಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 9ರಷ್ಟು ಫಲಿತಾಂಶ ಕುಸಿತ ಕಂಡಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಒಟ್ಟಾರೆ ಫಲಿತಾಂಶ ಇಳಿಜಾರು ಹಾದಿಯಲ್ಲಿ ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ʼರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಮಾತ್ರಭಾಷೆ ಕನ್ನಡ ವಿಷಯದಲ್ಲಿಯೇ ಅಧಿಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ಕಳವಳಕಾರಿ ಸಂಗತಿ. ಕನ್ನಡ ವಿಷಯ ಅತೀ ಸರಳ ಎಂದು ಕೆಲ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನ ಮಾಡದಿರುವುದು ಇದಕ್ಕೆ ಕಾರಣ ಇದೆ. ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷಾ ಶಿಕ್ಷಕರ ಕೊರತೆ ಎದುರಿಸುತ್ತಿದ್ದು, ಸರ್ಕಾರ ಶೀಘ್ರದಲ್ಲಿ ಕಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಕನ್ನಡ ಭಾಷಾ ಬೋಧನೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹೆಚ್ಚಿನ ಒತ್ತು ನೀಡಬೇಕುʼ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ʼಈದಿನ.ಕಾಮ್ʼ ಹೇಳಿದ್ದಾರೆ.
ಅನುತ್ತೀರ್ಣ ಮಕ್ಕಳಿಗೆ ಉಚಿತ ತರಬೇತಿ :
2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಯ 11,105 ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದು, ಅವರೆಲ್ಲರೂ ಪರೀಕ್ಷೆ–2ಕ್ಕೆ ಅಣಿಯಾಗುತ್ತಿದ್ದಾರೆ. ಪರೀಕ್ಷೆ–2ರಲ್ಲಿ ಜಿಲ್ಲೆಯ ಫಲಿತಾಂಶವನ್ನು ಸುಧಾರಣೆಗೊಳಿಸಲು ಪ್ರಯತ್ನ ಆರಂಭಿಸಿರುವ ಜಿಲ್ಲಾಡಳಿತ, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಮುಂದಾಗಿದೆ.
ಸೋಮವಾರದಿಂದ (ಮೇ 12) ಆಯಾ ಶಾಲೆಗಳಲ್ಲಿ ಫೇಲಾದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನೀಡಿದರೆ, ಅಧಿಕ ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳಲಿದ್ದಾರೆ. ಹೀಗಾಗಿ ವಿಶೇಷ ತರಗತಿಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಡಿಡಿಪಿಐ ಸಲೀಂ ಪಾಷ ʼಈದಿನ.ಕಾಮ್ʼ ಗೆ ತಿಳಿಸಿದ್ದಾರೆ.
ʼಶಿಕ್ಷಕರ ಕೊರತೆ ಹಿನ್ನೆಲೆ ನೇಮಿಸಿಕೊಳ್ಳಲಾದ ಅತಿಥಿ ಶಿಕ್ಷಕರಿಂದ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಈ ಕಾರಣಕ್ಕೆ ಕನ್ನಡ ಸೇರಿದಂತೆ ಇತರ ವಿಷಯಗಳಲ್ಲಿ ಮಕ್ಕಳು ಅನುತ್ತೀರ್ಣ ಆಗಿರುವುದು ಒಂದು ಕಾರಣವಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ವಿಮರ್ಶೆ ನಡೆಸುವ ಸಂಬಂಧ ಸೋಮವಾರ ಶಾಲಾ ಮುಖ್ಯಗುರುಗಳ ಸಭೆ ಕರೆಯಲಾಗಿದೆʼ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ 21,381 ಶಿಕ್ಷಕರ ಹುದ್ದೆ ಖಾಲಿ : ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಕಾರಣಗಳೇನು?
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2ನ್ನು ಮೇ 26ರಿಂದ ಜೂನ್ 2ರವರೆಗೆ ನಡೆಸಲಾಗುತ್ತಿದೆ. ಪರೀಕ್ಷೆ-1ರಲ್ಲಿ ನೋಂದಣಿ ಮಾಡಿಕೊಂಡು ಪಾಸಾಗದ ಮಕ್ಕಳಿಗೆ ಪರೀಕ್ಷೆ-2ರಲ್ಲಿ ನೋಂದಣಿಗೆ ಯಾವುದೇ ಶುಲ್ಕ ಪಡೆಯುವುದಿಲ್ಲ. ವಿದ್ಯಾರ್ಥಿಗಳು ಈ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.