“ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣಪಣಕ್ಕಿಟ್ಟು ಹೋರಾಡುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಮೇ 15ರಂದು ಯಾರೂ ನನ್ನ ಜನ್ಮದಿನಾಚರಣೆ ಮಾಡುವುದು ಬೇಡ” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.
ಸುಮಾರು 26 ಭಾರತೀಯರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಇತ್ತೀಚೆಗೆ ಪಾಕಿಸ್ತಾನದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದಾದ ಬಳಿಕ ಭಾರತ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಈ ನಡುವೆ ತನ್ನ ಜನ್ಮದಿನಾಚರಣೆ ಬೇಡ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ‘ಆಪರೇಷನ್ ಸಿಂಧೂರ’ ಯಶಸ್ಸಿಗೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಕಾಂಗ್ರೆಸ್ ಸರ್ಕಾರ ಸೂಚನೆ
“ನನ್ನ ಜನ್ಮದಿನದ ಹೆಸರಿನಲ್ಲಿ ಯಾರೊಬ್ಬರೂ ಸಂಭ್ರಮಾಚರಣೆ ಮಾಡಬಾರದು. ಅಂದು ನಾನು ಊರಿನಲ್ಲಿ ಇರುವುದಿಲ್ಲ. ಅಂದು ನನ್ನನ್ನು ಭೇಟಿ ಮಾಡಲು ಯಾರೂ ನನ್ನ ನಿವಾಸ, ಕಚೇರಿಗೆ ಬರುವುದು ಬೇಡ. ಯಾರೂ ಅನ್ಯಥಾ ಭಾವಿಸಬಾರದು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಬೇಕು” ಎಂದು ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.
ಹಾಗೆಯೇ ಜನ್ಮದಿನದ ಶುಭ ಕೋರುವ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕುವುದಾಗಲಿ, ಜಾಹೀರಾತುಗಳನ್ನು ನೀಡುವುದಾಗಲಿ ಮಾಡಬಾರದು ಎಂದು ಅಭಿಮಾನಿಗಳು, ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
“ದೇಶದ ಐಕ್ಯತೆ, ಸಾರ್ವಭೌಮತೆ ರಕ್ಷಣೆಗೆ ನಾವು ಯೋಧರ ಜತೆ ನಿಲ್ಲಬೇಕು. ಅವರು ಸುರಕ್ಷಿತವಾಗಿ ಈ ಹೋರಾಟವನ್ನು ಗೆದ್ದು ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ” ಎಂದು ತಿಳಿಸಿದ್ದಾರೆ.
