ಬೆಂಗಳೂರು ನಗರದ ಮೇಲೂ ಪಾಕಿಸ್ತಾನ ದಾಳಿ ಸಾಧ್ಯತೆಯಿದೆ ಎಂದು ಹೇಳಿಕೆ ನೀಡಿ ಜನರಲ್ಲಿ ಭಯ ಹುಟ್ಟಿಸಿರುವ ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದೂರು ದಾಖಲಿಸಲು ಕಾಂಗ್ರೆಸ್ ನಾಯಕ ಎಸ್ ಮನೋಹರ್ ಮನವಿ ಮಾಡಿದ್ದಾರೆ.
ನಿರಂತರವಾಗಿ ಸುಳ್ಳು ಹೇಳಿಕೆ, ತಪ್ಪು ಮಾಹಿತಿ ಪ್ರಚಾರ ಮಾಡುವ ಮೂಲಕ ಸುದ್ದಿಯಾಗುತ್ತಿರುವ ಸೂಲಿಬೆಲೆ, ಇತ್ತೀಚೆಗೆ ಪಾಕಿಸ್ತಾನ ಬೆಂಗಳೂರು ನಗರದ ಮೇಲೂ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಈ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುವ ಯತ್ನ ಮಾಡಿದ್ದರು.
ಇದನ್ನು ಓದಿದ್ದೀರಾ? ಕೋಮು ದ್ವೇಷ ಭಾಷಣ ಆರೋಪ; ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್‌ಐಆರ್ ದಾಖಲು
ಅಷ್ಟು ಮಾತ್ರವಲ್ಲದೆ ಪಾಕಿಸ್ತಾನದ ಉಗ್ರರ ಜೊತೆ ಭಾರತದ ಏಜೆಂಟ್‌ಗಳು ಸಂಪರ್ಕದಲ್ಲಿ ಇದ್ದಾರೆ ಎಂದೂ ಹೇಳಿದ್ದರು. ದೇಶದ ಗೌಪ್ಯ ವಿಚಾರಗಳನ್ನ ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಬೇರೆ ಅಲ್ಲ ಪಾಕಿಸ್ತಾನ ಬೇರೆ ಅಲ್ಲ ಎಂದೂ ಹೇಳಿದ್ದರು. ಈ ಹೇಳಿಕೆಗಳನ್ನು ಖಂಡಿಸಿ ಚಕ್ರವರ್ತಿ ಅವರನ್ನು ಬಂಧಿಸುವಂತೆ ಆಗ್ರಹಿಸಲಾಗಿದೆ.
ಈ ಸಂಬಂಧ ಬೆಂಗಳೂರು ನಗರದ ವಸಂತನಗರದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗೆ ಕಾಂಗ್ರೆಸ್ ನಾಯಕರು ಮನವಿ ನೀಡಿದ್ದಾರೆ. “ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಿರಂತರವಾಗಿ ದಾಳಿ ನಡೆಸುತ್ತಿದೆ ಹಾಗೂ ಭಯೋತ್ಪಾದಕರ ಅಡಗು ತಾಣಗಳನ್ನು ಧ್ವಂಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಲಾಭಕ್ಕಾಗಿ ಪ್ರಚಾರ ಪಡೆಯುವ ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿ ಭಾರತದ ಸೈನಿಕರ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತಹ ಭಾಷಣ ಮಾಡುತ್ತಿದ್ದಾನೆ. ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ. ಆತನ ವಿರುದ್ಧ ಕೂಡಲೇ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಕೂಡಲೇ ಬಂಧಿಸಬೇಕು” ಎಂದು ದೂರು ನೀಡಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಕೇಂದ್ರ ಸರ್ಕಾರ ಟೀಕಿಸಿದ ಗಾಯಕಿ ನೇಹಾ ಸಿಂಗ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
“ಚಕ್ರವರ್ತಿ ಸೂಲಿಬೆಲೆ ಎಂಬ ವ್ಯಕ್ತಿ ಪ್ರತಿ ಬಾರಿಯೂ ಸಹ ಹಿಂದೂ ಮುಸ್ಲಿಂ ಹಾಗೂ ಭಾರತ ಪಾಕಿಸ್ತಾನ ಎಂಬ ಹೆಸರಿನಲ್ಲಿ ತನ್ನ ಪ್ರಚಾರವನ್ನು ಗಿಟ್ಟಿಸಿಕೊಳ್ಳಲು ಸುಳ್ಳಿನ ಮಾಹಿತಿಯನ್ನು ಹರಿಬಿಡುತ್ತಾನೆ. ಸುಳ್ಳನ್ನು ಪ್ರಚಾರ ಮಾಡಿ ಸತ್ಯದ ರೀತಿಯಲ್ಲಿ ಬಿಂಬಿಸಿ ದೇಶದ ಯೋಧರ ಆತ್ಮಬಲವನ್ನು ಕುಗ್ಗಿಸುವ ಹೇಳಿಕೆ ನೀಡುತ್ತಾ ಬಂದಿದ್ದಾನೆ” ಎಂದು ದೂರಿದ್ದಾರೆ.
“ಪಾಕಿಸ್ತಾನ ಬೆಂಗಳೂರು ನಗರದ ಮೇಲೂ ದಾಳಿ ನಡೆಸುವ ಸಂಭವವಿದೆ ಎಂಬುವ ಹೇಳಿಕೆಗಳನ್ನ ನೀಡುವ ಮೂಲಕ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾನೆ. ಕಾಂಗ್ರೆಸ್ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ ಎಂಬುವ ಆರೋಪ ಹಾಗೂ ಆಧಾರರಹಿತ ಹೇಳಿಕೆ ನೀಡಿ ಜನರಿಗೆ ತಪ್ಪು ಸಂದೇಶ ರವಾನಿಸುತ್ತಿದ್ದಾನೆ. ಈ ಹಿನ್ನೆಲೆಯಲ್ಲಿ ಕೂಡಲೇ ಈತನ ಕಾನೂನಾತ್ಮಕವಾಗಿ ತನಿಖೆಗೆ ಒಳಪಡಿಸಿ ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ದೂರಿನಲ್ಲಿ ವಿನಂತಿಸಲಾಗಿದೆ.
