ಪ್ರತಿ ವರ್ಷ ರಾಜ್ಯಸರ್ಕಾರ ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೊಸ ಹೊಸ ಘೋಷಣೆ ಮಾಡುವುದು, ಅನುದಾನ ಘೋಷಿಸುವುದು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಆದರೆ, ಯಾವ ಯೋಜನೆಗಳೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಬದಲಿಗೆ ಶಿಕ್ಷಣದ ಗುಣಮಟ್ಟ ಇನ್ನಷ್ಟು ಕುಸಿಯುತ್ತಿದೆ ಎಂಬುದಕ್ಕೆ ಎಸ್ಸೆಸ್ಸೆಲ್ಸಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಫೇಲ್ ಆಗಿರುವುದೇ ಸಾಕ್ಷಿ
ತ್ರಿಭಾಷಾ ಸೂತ್ರ, ದ್ವಿಭಾಷಾ ನೀತಿ ಎಂಬ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ರಾಜ್ಯದಲ್ಲಿ 2024-25ರ ಸಾಲಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಕನ್ನಡ ಭಾಷಾ ಪರೀಕ್ಷೆ ಬರೆದ 6.28 ಲಕ್ಷ ವಿದ್ಯಾರ್ಥಿಗಳ ಪೈಕಿ 1.32ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂಬ ಆಘಾತಕಾರಿ ವಿಷಯ ವರದಿಯಾಗಿದೆ. ಕನ್ನಡ ನಾಡಿನ ಮಕ್ಕಳಿಗೆ ರಾಜ್ಯದ ಮಾತೃಭಾಷೆಯಲ್ಲಿ ಕನಿಷ್ಠ ಅಂಕ ಪಡೆದು ಪಾಸಾಗಲೂ ಸಾಧ್ಯವಾಗಿಲ್ಲ ಎಂಬುದು ವಿದ್ಯಾರ್ಥಿಗಳ ವೈಫಲ್ಯವಲ್ಲ. ಇಡೀ ಶಿಕ್ಷಣ ವ್ಯವಸ್ಥೆ, ಶಿಕ್ಷಣ ಇಲಾಖೆ, ಶಿಕ್ಷಕವೃಂದ, ಇಡೀ ಸರ್ಕಾರ ಹೊಣೆ ಹೊರಬೇಕಾಗಿದೆ. ಇದು ಕನ್ನಡ ಸಾಹಿತಿಗಳು, ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲರೂ ಕಳವಳಪಡಬೇಕಾದ ಸಂಗತಿ. ಕನ್ನಡ ಭಾಷೆಯಲ್ಲಿ ಬೋಧಿಸುತ್ತಿರುವ ಶಿಕ್ಷಕರು ತಲೆ ತಗ್ಗಿಸಬೇಕಾದ ವಿಚಾರ.
ಒಂದು ಕಡೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದು, ಖಾಸಗಿ ಶಾಲೆಗಳ ಶಿಕ್ಷಣ ದಂಧೆ, ಮತ್ತೊಂದು ಕಡೆ ಸರ್ಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಕಳಪೆಯಾಗಿರುವುದು, ಮೂಲಸೌಕರ್ಯ ಕೊರತೆ ಇತ್ಯಾದಿ ನಾನಾ ಕಾರಣಗಳಿಂದಾಗಿ ಬಡ ಮಕ್ಕಳು ಕಲಿಯುವ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿಯೇ ಇಲ್ಲ. ಪ್ರತಿ ವರ್ಷ ಬಜೆಟ್‌ನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೊಸ ಹೊಸ ಘೋಷಣೆ ಮಾಡುವುದು, ಅನುದಾನ ಘೋಷಿಸುವುದು ನಿರಂತರವಾಗಿ ನಡೆಯುತ್ತಲೇ ಬಂದಿದೆ. ಆದರೆ, ಯಾವ ಯೋಜನೆಗಳೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಬದಲಿಗೆ ಗುಣಮಟ್ಟ ಇನ್ನಷ್ಟು ಕುಸಿಯುತ್ತಿದೆ, ಮಾತೃಭಾಷಾ ಪರೀಕ್ಷೆಯನ್ನೂ ಪಾಸು ಮಾಡಲಾರದಷ್ಟು ಕೆಳಕ್ಕೆ ಕುಸಿದಿದೆ.
ಬಿಸಿಯೂಟ, ಹಾಲು, ಮೊಟ್ಟೆ ಮುಂತಾದ ಬಡ ಮಕ್ಕಳ ಹೊಟ್ಟೆ ತುಂಬಿಸುವ ಯೋಜನೆಗಳು, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಪಾಠೋಪಕರಣ ಎಲ್ಲವನ್ನೂ ನೀಡಿ ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಉತ್ತಮ ಫಲಿತಾಂಶ ಬರಲು ಹೇಗೆ ಸಾಧ್ಯ? ಒಂದೂವರೆ ಲಕ್ಷ ಮಕ್ಕಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದೆಂದರೆ, ಅವರಿಗೆ ಪಾಠ ಮಾಡಿದ ಶಿಕ್ಷಕರು ಅನರ್ಹರು ಎಂದೇ ಅರ್ಥ. ಫೇಲಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಒಂಭತ್ತು ವರ್ಷ ಕನ್ನಡ ಭಾಷೆ ಅಧ್ಯಯನ ಮಾಡಿಲ್ಲವೇ? ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.
ನಮ್ಮದಲ್ಲದ ಹಿಂದಿ, ಸಂಸ್ಕೃತ, ಇಂಗ್ಲಿಷ್ ಭಾಷೆಯನ್ನು ಕಲಿತು ಪರೀಕ್ಷೆಯಲ್ಲಿ ಪಾಸಾಗುತ್ತಿರುವ ಸಂದರ್ಭದಲ್ಲಿ ನಮ್ಮದೇ ನಾಡಿನ ಭಾಷೆ, ದಿನವಿಡೀ ವ್ಯವಹರಿಸುವ, ಕೇಳಿಸಿಕೊಳ್ಳುವ ಭಾಷೆಯಲ್ಲಿ ಫೇಲ್ ಆಗುವುದೆಂದರೆ ಇದು ಮಕ್ಕಳ ಸಮಸ್ಯೆ ಅಷ್ಟೇ ಅಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುಷೋತ್ತಮ ಬಿಳಿಮಲೆ ಅವರು ಹೇಳುವಂತೆ, ಕನ್ನಡ ಭಾಷಾ ಪಠ್ಯಗಳು ಸರಳವಾಗಿಲ್ಲ. ಅನಗತ್ಯ ಹೊರೆಯಾತ್ತಿದೆ. ಶಿಕ್ಷಣ ತಜ್ಞ ಪ್ರೊ ಎಂ ಅಬ್ದುಲ್ ರೆಹಮಾನ್ ಪಾಷ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಛಂದಸ್ಸು, ವ್ಯಾಕರಣ, ಹಳೆಗನ್ನಡ ಇವೆಲ್ಲ ಕಲಿಸುವ ಅಗತ್ಯವಿಲ್ಲ. ಭಾಷಾ ಕೌಶಲ ಹೆಚ್ಚಿಸುವ ಪಠ್ಯ ಸಾಕು ಅಂತಾರೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ದಶಕಗಳಿಂದ ದುಡಿಯುತ್ತಿರುವ ಡಾ ನಿರಂಜನಾರಾಧ್ಯ ಅವರು, ಹಿಂದಿ, ಸಂಸ್ಕೃತ ಭಾಷಾ ಪಠ್ಯವಿಷಯ ಬಹಳ ಸುಲಭವಾಗಿರುತ್ತದೆ. ಅಷ್ಟೇ ಅಲ್ಲ ಅವರಿಗೆ ಇಂಗ್ಲಿಷ್‌ನಲ್ಲಿ ಉತ್ತರ ಬರೆಯುವ ಅವಕಾಶ ನೀಡಲಾಗಿದೆ. ಹೀಗೆ ಆದರೆ ಕನ್ನಡಕ್ಕೆ ಉಳಿಗಾಲವಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಅಸಂಗತ ಪಠ್ಯ, ಅವೈಜ್ಞಾನಿಕ ಬೋಧನೆ- ಪ್ರೊ ಎಂ ಅಬ್ದುಲ್ ರೆಹಮಾನ್ ಪಾಷ
2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯ, ’ಕನ್ನಡ’ ಭಾಷಾ ಪರೀಕ್ಷೆಯಲ್ಲಿ 1.32 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಅವರಿಗೆ ಮಾತೃಭಾಷೆಯೇ ’ಕಬ್ಬಿಣದ ಕಡಲೆಯಾಗಿದೆ’ ಎಂಬ ಸುದ್ದಿ ಆಘಾತ ತರುವಂಥಾಗಿದ್ದರೂ, ಅಚ್ಚರಿ ತರುವಂಥಾದ್ದೇನೂ ಅಲ್ಲ. ಇಂಥ ನಿರಾಶಾದಾಯಕ ಪರಿಣಾಮಕ್ಕೆ ಹಲವು ಕಾರಣಗಳು.
ಮೊದಲನೆಯದಾಗಿ, ನಮ್ಮ ರಾಜ್ಯದಲ್ಲಿ, ಕನ್ನಡವು ಎಲ್ಲಾ ವಿದ್ಯಾರ್ಥಿಗಳ ’ಮಾತೃಭಾಷೆ’ಯಲ್ಲ. ಕನ್ನಡ ಮನೆ ಮಾತಾಗಿರುವ ಮಕ್ಕಳಿಗೂ ಅವರು ಪುಸ್ತಕದ ಮೂಲಕ ಕಲಿಯಬೇಕಾಗಿರುವ ಗ್ರಂಥಸ್ಥ ಕನ್ನಡವು ಅಷ್ಟೇ ಹೊಸತು. ಹೀಗಾಗಿ ಮಾತೃಭಾಷೆ ಎನ್ನುವ ರಿಯಾಯಿತಿಯನ್ನು ಪಡೆಯಕೂಡದು. ಬದಲಿಗೆ, ಕನ್ನಡವಲ್ಲದ ಮನೆಮಾತುಗಳಿಂದ ಬಂದಿರುವ ಮಕ್ಕಳನ್ನೂ ಒಳಗೊಂಡ ಹಾಗೆ ಎಲ್ಲಾ ಮಕ್ಕಳನ್ನು ಈ ಗ್ರಂಥಸ್ಥ ಕನ್ನಡಕ್ಕೆ ಸರಿಯಾಗಿ ಸಜ್ಜುಗೊಳಿಸಬೇಕು, ಆ ಬೋಧನಾ ಕ್ರಮ ನಮ್ಮ ಶಿಕ್ಷಕರಿಗೆ ಗೊತ್ತಿಲ್ಲ.

ಇನ್ನು ಕನ್ನಡ ಪಠ್ಯಪುಸ್ತಕಗಳು ’ಕನ್ನಡ ಭಾಷಾ ಕೌಶಲ’ಗಳು ಮತ್ತು ನಿತ್ಯ ಜೀವನಕ್ಕೆ ಬೇಕಾದ ಕನ್ನಡವನ್ನು ಕಲಿಸುವ ಬದಲಿಗೆ ಕನ್ನಡ ಸಾಹಿತ್ಯ, ಹಳಗನ್ನಡ, ವ್ಯಾಕರಣ, ಛಂದಸ್ಸು, ಅಲಂಕಾರ ಇತ್ಯಾದಿ ವಿಶೇಷ ಆಸಕ್ತಿಯ ’ವಿಷಯಗಳನ್ನು’ ಕಲಿಸಲು ಪ್ರಯತ್ನಿಸುತ್ತವೆ. ಇವು, ಕಲಿಯುವ ಮಕ್ಕಳಿಗಾಗಲೀ, ಕಲಿಸುವ ಶಿಕ್ಷಕರಿಗಾಗಿ ಸಂಗತ ಎನ್ನಿಸುವುದೇ ಇಲ್ಲ. ಇದು ಅವರ ಕಲಿಕೆ-ಬೋಧನೆಯಲ್ಲಿ ಪರಿಣಾಮವನ್ನು ಬೀರುತ್ತದೆ.
ಇನ್ನೊಂದು, ಆರಂಭದ ಒಂದನೇ ಎರಡನೇ ತರಗತಿಗಳಲ್ಲಿ ಮಕ್ಕಳಿಗೆ ಕನ್ನಡದಲ್ಲಿ ಪರಿಣಾಮಕಾರಿಯಾದ ಸಾಕ್ಷರತೆಯನ್ನು ಹೇಳಿಕೊಡುವ ಪ್ರಯತ್ನದಲ್ಲೇ ನಾವು ಸೋಲುತ್ತೇವೆ. ಮುಂದಿನ ತರಗತಿಗಳಿಗೆ ಹೋಗುವ ಮುನ್ನ ಮಕ್ಕಳಿಗೆ ಕನ್ನಡದಲ್ಲಿ ಅಕ್ಷರ, ಗುಣಿತಾಕ್ಷರ, ಒತ್ತಕ್ಷರಗಳ ಪರಿಚಯ. ಕನ್ನಡದಲ್ಲಿ ಬರೆದಿರುವ ಸರಳವಾದ ವಾಕ್ಯವೃಂದವನ್ನು ಸರಾಗವಾಗಿ ಅರ್ಥಮಾಡಿಕೊಂಡು ಓದುವುದು; ತಮಗೆ ಗೊತ್ತಿರುವುದನ್ನು ಕನ್ನಡದಲ್ಲಿ ತಪ್ಪಿಲ್ಲದೇ ಬರೆಯುವುದು ಬರುವುದಿಲ್ಲ. ಇಂಥ ಅರೆಬರೆ ಸಾಕ್ಷರತೆಯ ಸ್ಥಿತಿಯಲ್ಲಿಯೇ ಮುಂದಿನ ತರಗತಿಗಳಿಗೆ ಹೋಗಿ ಬಿಟ್ಟರೆ ಮಕ್ಕಳಿಗೆ ಕನ್ನಡವು ಹೆಚ್ಚು ಹೆಚ್ಚು ಹೊರೆಯಾಗುತ್ತಾ ಹೋಗುತ್ತದೆ. ಅದನ್ನು ಶಿಕ್ಷಣ ವ್ಯವಸ್ಥೆ ಗೌಣವಾಗಿ ಕಾಣುತ್ತಾ ಉಪೇಕ್ಷಿಸುತ್ತಾ ಹೋಗುತ್ತದೆ. ಇದರ ಪರಿಣಾಮ ಹತ್ತನೇ ತರಗತಿಯ ಫಲಿತಾಂಶಗಳಲ್ಲಿ ಬಯಲಾಗುತ್ತದೆ. ಪಠ್ಯಪುಸ್ತಕಗಳು (ಸರಳವಲ್ಲ) ಸಂಗತವಾಗಬೇಕು, ನಿತ್ಯಜೀವನದಲ್ಲಿ ಪ್ರಯೋಜನಕ್ಕೆ ಬರುವ ಭಾಷಾ ಕೌಶಲಗಳನ್ನು ಕಲಿಸುವಂತಾಗಬೇಕು, ಶಿಕ್ಷಕರು ಹೊಸ ಭಾಷಾ ಬೋಧನಾ ಕೌಶಲಗಳನ್ನು ಕಲಿತು, ಅನ್ವಯಿಸಬೇಕು.
ಕನ್ನಡ ಭಾಷೆಯನ್ನು ಕಾನೂನುಗಳಿಂದ ಉಳಿಸುವುದು ಕಷ್ಟ : ಡಾ ಪುರುಷೋತ್ತಮ ಬಿಳಿಮಲೆ
ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕನ್ನಡ ಕುಸಿಯುತ್ತಿದೆ. ಈ ಮೂರೂ ಹಂತಗಳಲ್ಲಿ ಇವತ್ತು ಕನ್ನಡ ಕಲಿಯುತ್ತಿರುವವರಲ್ಲಿ ಹೆಚ್ಚಿನವರು ಬಡವರು ಮತ್ತು ಹಿಂದುಳಿದವರು. ಮಧ್ಯಮ ವರ್ಗದ ಮತ್ತು ಮೇಲ್ವರ್ಗದ ಜನರು ಒಂದೋ ಕನ್ನಡವನ್ನು ಬಿಟ್ಟಿದ್ದಾರೆ, ಇಲ್ಲವೇ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಹೀಗಾಗಿ ಕನ್ನಡ ಶಾಲೆಗಳ ಪರವಾಗಿ ಸರಕಾರದ ಮೇಲೆ ಒತ್ತಡ ಹಾಕುವ ಗುಂಪುಗಳೇ ಕಾಣೆಯಾಗಿವೆ. ಇದಕ್ಕೆ ಅಪವಾದವೆಂಬಂತೆ ಕೆಲವು ಹೋರಾಟಗಾರರು ಸರಕಾರಿ ಶಾಲೆಗಳನ್ನು ಉಳಿಸಲು ಸರ್ವಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲರೂ ಅಂಥವರಿಗೆ ಬೆಂಬಲವಾಗಿ ನಿಲ್ಲಬೇಕು.

ಇವತ್ತಿನ ಬೆಳವಣಿಗೆಗಳನ್ನು ಪರಿಗಣಿಸುತ್ತಾ ಹೇಳುವುದಾದರೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಕನ್ನಡ ಪಠ್ಯಪುಸ್ತಕಗಳನ್ನು ಸರಳಗೊಳಿಸಿ ಮಕ್ಕಳನ್ನು ಕನ್ನಡದ ಕಡೆಗೆ ಸೆಳೆಯಬೇಕು. ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಅಧ್ಯಾಪಕರಿಗೆ ಸೂಕ್ತ ತರಬೇತಿ ನೀಡಿ, ಪಾಠ ಮಾಡುವ ಕ್ರಮಗಳನ್ನು ಅತ್ಯಾಧುನಿಕಗೊಳಿಸಬೇಕು.
ಸರಕಾರವನ್ನು ಬೈಯುತ್ತಾ ಕುಳಿತುಕೊಳ್ಳುವ ಕಾಲ ಮುಗಿದಿದೆ. ಪ್ರತಿಯೊಬ್ಬ ಕನ್ನಡಿಗನೂ ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಬೇಕು. ಕನ್ನಡ ಪರ ಸಂಘಟನೆಗಳು ಇದಕ್ಕಾಗಿ ಹೊಸಬಗೆಯ ಚಳವಳಿಯನ್ನು ಹುಟ್ಟುಹಾಕಬೇಕು. ಪೋಷಕರು ಮನೆಯಲ್ಲಿ ಕನ್ನಡದ ವಾತಾವರಣವನ್ನು ಸೃಷ್ಟಿಮಾಡಬೇಕು.
ಕನ್ನಡ ಭಾಷೆಯನ್ನು ಕಾನೂನುಗಳಿಂದ ಉಳಿಸುವುದು ಕಷ್ಟ. ಅದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ.
ಸಾಹಿತಿಗಳಿಗೆ ಪಾಠವಿದೆ : ಡಾ ನಿರಂಜನಾರಾಧ್ಯ ವಿ ಪಿ
ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಹೆಚ್ಚಾಗಿ ಕನ್ನಡ ಮಾತೃಭಾಷಿಕರೇ ಆಗಿರುತ್ತಾರೆ. ಕನ್ನಡದ ಮಕ್ಕಳು ಮಾತೃಭಾಷಾ ಪರೀಕ್ಷೆಯಲ್ಲಿ ಕನಿಷ್ಠ ಪಾಸಾಗುವಷ್ಟು ಅಂಕ ಪಡೆಯಲು ವಿಫಲರಾಗಿರುವುದು ನಿಜಕ್ಕೂ ಕೆಟ್ಟ ಬೆಳವಣಿಗೆ. ಹಿಂದಿ, ಸಂಸ್ಕೃತ ಭಾಷಾ ಪಠ್ಯವಿಷಯ ಬಹಳ ಸುಲಭವಾಗಿರುತ್ತದೆ. ಅಷ್ಟೇ ಅಲ್ಲ ಅವರಿಗೆ ಇಂಗ್ಲಿಷ್‌ನಲ್ಲಿ ಉತ್ತರ ಬರೆಯುವ ಅವಕಾಶ ನೀಡಲಾಗಿದೆ. ಹೀಗಾಗಿ ಹಿಂದಿ, ಸಂಸ್ಕೃತವನ್ನು ಹೆಚ್ಚು ಅಂಕ ಪಡೆಯುವ ಉದ್ದೇಶದಿಂದ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ಶಿಕ್ಷಣ ಚೆನ್ನಾಗಿ ನಡೆಯುತ್ತಿರುವಾಗ ಸಿಬಿಎಸ್‌ಇ/ ಐಸಿಎಸ್‌ಇ ಪಠ್ಯಕ್ರಮಕ್ಕೆ ಅನುಮತಿ ನೀಡುವ ಅಗತ್ಯವಿಲ್ಲ. ಈ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು ಎಂಬ ನಿಯಮವಿದೆ. ಆದರೆ ಅದನ್ನು ಪಾಲಿಸುತ್ತಿಲ್ಲ. “ಕನ್ನಡಕ್ಕೆ ಏನೂ ಆಗಲ್ಲ, ಅಷ್ಟು ವರ್ಷಗಳ ಇತಿಹಾಸವಿದೆ” ಎಂದು ವಾದಿಸುವ ಕೆಲವು ಸಾಹಿತಿಗಳು ಈ ಫಲಿತಾಂಶ ಉತ್ತರದಂತಿದೆ. ಇನ್ನು ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ಮಾತನಾಡುವ ಹಾಗೇ ಇಲ್ಲ. ಅದು ಮುಗಿದು ಹೋದ ಕತೆ. ಕಡೇ ಪಕ್ಷ ಕನ್ನಡ ಭಾಷೆಯನ್ನಾದರೂ ಸರಿಯಾಗಿ ಬೋಧಿಸುವಂತಾಗಬೇಕು.
****
ಕನ್ನಡ ಭಾಷೆಯನ್ನು ಕುತೂಹಲ ಮೂಡುವಂತೆ, ಮನರಂಜನೆಯ ಜೊತೆಗೆ ಕಲಿಸಿಕೊಡುವ ಅಗತ್ಯವಿದೆ. ಭಾಷೆಯ ಮೇಲೆ ಪ್ರೀತಿ ಬರುವಂತೆ ಮಾಡಲು, ಪರಭಾಷಿಕ ಮಕ್ಕಳೂ ಖುಷಿಯಿಂದ ಕಲಿಯುವಂತಾಗಲು ಪಠ್ಯಕ್ರಮದಲ್ಲಿ ಲವಲವಿಕೆಯನ್ನು ತುಂಬುವ ಅಗತ್ಯವಿದೆ. ಒಮ್ಮೆ ಪ್ರೀತಿ ಹುಟ್ಟಿದರೆ ಮುಂದೆ ಅಧ್ಯಯನದಲ್ಲಿ ಸಹಜವಾಗಿಯೇ ಆಸಕ್ತಿ ಮೂಡಲಿದೆ. ಇದು ಬಹುತೇಕ ಶಿಕ್ಷಣ ತಜ್ಞರ ಅಭಿಪ್ರಾಯ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.